More

  ಟೊಮ್ಯಾಟೊ ಇಲ್ದೆ ಊಟ ರುಚಿಸೀತು ಹೇಗೆ..? ಹೋಟೆಲ್‌ನಲ್ಲೂ ಪರ್ಯಾಯ ಬಳಕೆಗೆ ಸರ್ಕಸ್, ದರ ಹೆಚ್ಚಳದಿಂದ ಹಿಗ್ಗಿದ ಬಿತ್ತನೆ

  ಡಿ.ಎಂ.ಮಹೇಶ್, ದಾವಣಗೆರೆ:
  ಜಿಲ್ಲೆಯ ಮಾರುಕಟ್ಟೆಗಳಲ್ಲಿ ಕಳೆದ ಹತ್ತು ದಿನದಿಂದ ಟೊಮ್ಯಾಟೊ ಬೆಲೆ ಜಿಗಿಯುತ್ತಿದೆ. ಕೆಜಿಗೆ ಹತ್ತಿಪ್ಪತ್ತು ರೂ.ಗೆ ಸಿಗುತ್ತಿತ್ತು. ಇದೀಗ 10ರಿಂದ 120 ರೂ.ಗೆ ಏರಿಕೆಯಾಗಿದೆ. ಹೀಗಾಗಿ ಮನೆಗಳಲ್ಲಿ ಹೆಂಗಳೆಯರು ಅಳೆದೂ ತೂಗಿ ಬಳಸುತ್ತಿದ್ದಾರೆ. ಹೋಟೆಲ್-ಖಾನಾವಳಿ, ಡಾಬಾ ಎಲ್ಲೆಲ್ಲೂ ಟೊಮ್ಯಾಟೊ ಬಳಕೆ ಅರ್ಧದಷ್ಟು ಕಡಿಮೆಯಾಗಿದೆ.
  ದಾವಣಗೆರೆ ನಗರ ಒಂದರಲ್ಲೆ ಸುಮಾರು 600ಕ್ಕೂ ಹೆಚ್ಚು ಹೋಟೆಲ್‌ಗಳಿವೆ. ತಿಂಡಿಯಂಗಡಿ ಪಟ್ಟಿಯಿಂದ ಈಗ ಟೊಮ್ಯಾಟೊ ಬಾತ್ ಹೊರಹಾಕಲಾಗಿದೆ! ಕಾಯಂ ಗ್ರಾಹಕರನ್ನು ಕಳೆದುಕೊಳ್ಳದಿರಲು ಹೋಟೆಲ್ ಮಾಲೀಕರು ಕಸರತ್ತು ನಡೆಸಿದ್ದಾರೆ. ಸಾಂಬಾರು, ಪಲ್ಯಕ್ಕೂ ನಿಂಬೆ, ಹುಣಸೆ ಹುಳಿ, ನಿಂಬೂ ಸಾಲ್ಟ್ ಬೆರೆಸಿ ಹಳೆ ಟೇಸ್ಟ್ ಹೊಂದಿಸುತ್ತಿದ್ದಾರೆ.
  ಟೊಮ್ಯಾಟೊ ಸೂಪ್‌ನಲ್ಲಿ ಮೊದಲಿನ ರುಚಿ ಬರುತ್ತಿಲ್ಲ. ಆಮ್ಲೆಟ್ ಜತೆಗೆ, ಮಸಾಲ ಪಾಪಡ್, ಮಸಾಲಾ ಅವಲಕ್ಕಿ-ಮಂಡಕ್ಕಿ ಮೇಲೆ ಕಾಣಿಸಿಕೊಳ್ಳುತ್ತಿದ್ದ ಟೊಮ್ಯಾಟೊ ಚೂರುಗಳು ಮಾಯವಾಗಿವೆ! ಯಾವುದೇ ತಿಂಡಿಗಳ ಒಗ್ಗರಣೆಯಲ್ಲೂ ಟೊಮ್ಯಾಟೊ ಹುಡುಕುವ ಸ್ಥಿತಿ ಬಂದಿದೆ!
  * ರೈತರಿಗೆ ಸಿಹಿ-ಕಹಿ ಅನುಭವ
  ತೋಟಗಾರಿಕೆ ಇಲಾಖೆ ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಐದುನೂರಕ್ಕೂ ಹೆಚ್ಚು ಟೊಮ್ಯಾಟೊ ಬೆಳೆಗಾರರಿದ್ದಾರೆ. ಮೇ ನಲ್ಲಿ ಟೊಮ್ಯಾಟೊ ಬೆಳೆದವರಲ್ಲಿ ಕೆಲವರಿಗೆ ಲಾಟರಿ ಹೊಡೆದಿದೆ! ಕಳೆದೊಂದು ವಾರದಿಂದ ದರ ಏರಿಕೆಯಿಂದ ಲಾಭ ಕಂಡಿದ್ದಾರೆ.
  ಮತ್ತೆ ಕೆಲವೆಡೆ ಎಲೆ ಮುಟುರು, ಎಲೆ ಚುಕ್ಕಿ ರೋಗ, ಅಂಗಮಾರಿ ಮೊದಲಾದ ರೋಗಭಾದೆಗೀಡಾದ ಹೊಲಕ್ಕೆ ನಿಯಮಿತ ಔಷಧ ಸಿಂಪಡಣೆ ಮಾಡದ ರೈತರು ಇಳುವರಿ ಕೊರತೆಯಾಗಿ ಕೈ ಸುಟ್ಟುಕೊಂಡಿದ್ದಾರೆ. ಮಳೆ ಬಾರದೆ, ಬೋರ್‌ವೆಲ್ ನೀರು ಕೈಕೊಟ್ಟಿದ್ದಲ್ಲದೆ ಬಿಸಿಯ ತಾಪಮಾನ ಕೂಡ ಕೆಲವರಿಗೆ ಶಾಪವಾಗಿ ಪರಿಣಮಿಸಿತ್ತು.
  ಟೊಮ್ಯಾಟೊ ನಾಟಿಗೆ ಕೋಲು, ಉರಿ, ಕೂಲಿ, ರಾಸಾಯನಿಕ ವೆಚ್ಚ ಸೇರಿ ಎಕರೆಗೆ 80 ಸಾವಿರ ರೂ.ನಿಂದ 1 ಲಕ್ಷ ರೂ. ಬಂಡವಾಳ ಹಾಕಿದ್ದರೂ ಕೆಲವರು ಬಾಕ್ಸ್ ಹಣ್ಣಿಗೆ 50 ರೂ.ನಿಂದ 100 ರೂ.ಗೆ ಮಾರಾಟ ಮಾಡಿದ್ದಾರೆ. ಟೊಮ್ಯಾಟೊದಲ್ಲಿ ಕಳೆದ ನಷ್ಟವನ್ನು ಪರ್ಯಾಯ ಬೆಳೆಯಲ್ಲಿ ಕೆಲವರು ಸರಿದೂಗಿಸಿಕೊಂಡಿದ್ದಾರೆ.
  ಸೂಕ್ತ ಬೆಲೆ ಸಿಗದ ಕಾರಣಕ್ಕೆ ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಟೊಮ್ಯಾಟೋ ಬೆಳೆ ಸುಮಾರು 50 ಹೆಕ್ಟೇರ್‌ಗೆ ಸೀಮಿತವಾಗಿತ್ತು. ಆದರೆ ಇತ್ತೀಚಿಗೆ 120 ರೂ.ಗೆ ದಾಟಿದ ಬೆಲೆಯಿಂದಾಗಿ ಇತ್ತೀಚೆಗೆ ನಾಟಿ ಪ್ರದೇಶ ಸುಮಾರು 200 ಹೆಕ್ಟೇರ್‌ಗೆ ವಿಸ್ತರಣೆಯಾಗಿದೆ! ಮುಂದಿನ ದಿನಗಳಲ್ಲಿ ಮಳೆಯೂ ಇರಲಿ, ಬೆಳೆಗೆ ರೇಟೂ ಇರಲಿ ಎಂದುಕೊಳ್ಳುತ್ತಿದ್ದಾರೆ ಬೆಳೆಗಾರರು.
  * ಆವಕ ಕುಸಿತ
  ದಾವಣಗೆರೆ ಎಪಿಎಂಸಿ ವ್ಯಾಪ್ತಿಯಲ್ಲಿ ಜೂನ್ ಆರಂಭದಲ್ಲಿ ದಿನಕ್ಕೆ 55ರಿಂದ 70 ಕ್ವಿಂ ಆವಕವಿದ್ದ ಟೊಮ್ಯಾಟೊ, ಕಳೆದ 10 ದಿನದಿಂದ ಇಳಿಮುಖವಾಗಿದೆ. ಈ ಅವಧಿಯಲ್ಲಿ 223 ಕ್ವಿಂ. ಆವಕವಾಗಿದೆ. ಸರಾಸರಿ ಸಗಟು ಬೆಲೆ 70ರಿಂದ 80 ರೂ. ಇದ್ದರೆ, ಚಿಲ್ಲರೆ ಬೆಲೆ 100 ರೂ.ನಿಂದ 120 ರೂ.ಗೆ ಮುಟ್ಟಿದೆ.
  ಬೆಲೆ ಏರಿಕೆ ಆದಾಗಿನಿಂದಲೂ ನ್ಯಾಮತಿ ಎಪಿಎಂಸಿಯಲ್ಲಿ ಟೊಮ್ಯಾಟೊ ಆವಕವಾಗಿಲ್ಲ. ಎಪಿಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆದ ಪರಿಣಾಮ ನ್ಯಾಮತಿ, ಸವಳಂಗ ಭಾಗದಲ್ಲಿ ಬೆಳೆದ ಟೊಮ್ಯಾಟೊ ಶಿವಮೊಗ್ಗ, ಚಿಕ್ಕಮಗಳೂರು ಎಪಿಎಂಸಿವರೆಗೂ ಮಾರಾಟಕ್ಕೆ ಹೋಗುತ್ತಿದೆ ಎನ್ನುತ್ತಾರೆ ಸಿಬ್ಬಂದಿ.

  * ಕೋಟ್ 1
  ಮೇ ತಿಂಗಳಲ್ಲಿ ಟೊಮ್ಯಾಟೊ ಬಿತ್ತನೆ ಪ್ರಮಾಣ ಕಡಿಮೆ ಇತ್ತು. ಕೀಟ ಬಾಧೆ ಸರಿಯಾಗಿ ನಿರ್ವಹಣೆ ಮಾಡದಿದ್ದರಿಂದ ಇಳುವರಿ ಕಡಿಮೆಯಾಗಿದ್ದು, ದರ ಹೆಚ್ಚಾಗಿದೆ. ಜುಲೈನಲ್ಲಿ ಹೆಚ್ಚು ಬಿತ್ತನೆಯತ್ತ ರೈತರು ಆಸಕ್ತಿ ವಹಿಸಿದ್ದಾರೆ.
  ಜಿ.ಸಿ. ರಾಘವೇಂದ್ರ ಪ್ರಸಾದ್
  ತೋಟಗಾರಿಕೆ ಇಲಾಖೆ ಉಪನಿರ್ದೇಶಕ.

  * ಕೋಟ್ 2
  ಮಳೆ ಮತ್ತು ಬೋರ್‌ವೆಲ್ ನೀರು ಸಿಗದೆ, 1 ಎಕರೆಯಲ್ಲಿ ನಾಟಿ ಮಾಡಿದ್ದ ಟೊಮ್ಯಾಟೊ ಕಾಯಿ ಕಟ್ಟುವ ಹಂತದಲ್ಲಿ ಫಲ ನೀಡಲಿಲ್ಲ. ವೆಚ್ಚ ಮಾಡಿದ್ದ 80 ಸಾವಿರ ರೂ. ಕೂಡ ಕೈಗೆ ಸಿಗಲಿಲ್ಲ. ಟೊಮ್ಯಾಟೋಗೆ ಬೆಲೆ ಹೆಚ್ಚಾಗಿರುವುದರಿಂದ ಮತ್ತೆ ನಾಟಿ ಮಾಡಿದ್ದೇನೆ.
  ಎಚ್.ಬಿ.ಸುರೇಶ್
  ಸುರಹೊನ್ನೆ ರೈತ.

  * ಕೋಟ್ 3
  ನನ್ನ 8 ಎಕರೆ ಜಮೀನಿನಲ್ಲಿ 1 ಎಕರೆ ಟೊಮ್ಯಾಟೊ ಬೆಳೆದಿದ್ದೆ. ಜೂನ್ ಆರಂಭದಲ್ಲಿ ಒಳ್ಳೆಯ ರೇಟು ಸಿಗಲಿಲ್ಲ. ಈಗ ದೇವರ ಇಚ್ಛೆ ಎಂದುಕೊಂಡು ಅರ್ಧ ಎಕರೆಯಲ್ಲಿ ಮತ್ತೆ ಟೊಮ್ಯಾಟೊ ಹಾಕಿದ್ದೇನೆ. ಬೆಳೆ ಬರುವ ಹೊತ್ತಿಗೆ ಬೆಲೆ ಹೀಗೇ ಇರುತ್ತಾ ಎಂಬುದು ದೇವರಿಗೆ ಗೊತ್ತು.
  ನಾಗರಾಜನಾಯ್ಕ
  ಹೊನ್ನಾಯಕನಹಳ್ಳಿ ರೈತ.

  * ಕೋಟ್ 4
  ಟೊಮ್ಯಾಟೊ ಅಲ್ಲದೆ ಇತರೆ ತರಕಾರಿಗಳ ಬೆಲೆಯೂ ಹೆಚ್ಚಿದ್ದರಿಂದ ಊಟದ ಹೋಟೆಲ್‌ಗಳಿಗೂ ಸಮಸ್ಯೆಯಾಗಿದೆ. ಸಾಂಬಾರ್‌ಗೆ ಮೊದಲಿಗಿಂತ ಕಡಿಮೆ ಪ್ರಮಾಣದ ಟೊಮ್ಯಾಟೊ ಬಳಸಬೇಕಾಗಿ ಬಂದಿದೆ. ಗ್ರಾಹಕರು ಕೇಳುವ ರುಚಿ ಕೊಡಲೇಬೇಕಿದೆ.
  ಎಚ್.ಎಂ.ಗುರುಸ್ವಾಮಿ.
  ಹೋಟೆಲ್ ಮಾಲೀಕ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts