ಟೈಮ್ಸ್​ ಬಾರ್​ ಆ್ಯಂಡ್​ ರೆಸ್ಟೋರೆಂಟ್​ನಲ್ಲಿ ಕುಣಿಗಲ್ ಗಿರಿ ಬರ್ತ್​ಡೇ ಪಾರ್ಟಿ: ಸಿಸಿಬಿ ದಾಳಿ

ಬೆಂಗಳೂರು: ಟೈಮ್ಸ್​ ಬಾರ್ ಆಂಡ್ ರೆಸ್ಟೋರೆಂಟ್​ನಲ್ಲಿ ಭರ್ಜರಿಯಾಗಿ ಬರ್ತ್​ಡೇ ಪಾರ್ಟಿ ಆಚರಿಸುತ್ತಿದ್ದ ರೌಡಿಶೀಟರ್ ಕುಣಿಗಲ್ ಗಿರಿಯನ್ನು ಗುರಿಯಾಗಿಸಿಕೊಂಡು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಪೊಲೀಸರನ್ನು ಕಂಡಕೂಡಲೇ ಎದ್ದೆನೋ ಬಿದ್ದೆನೋ ಎನ್ನುತ್ತ ಗಿರಿ ಪರಾರಿಯಾಗಿದ್ದಾನೆ.

ಶುಕ್ರವಾರ ತಡರಾತ್ರಿ ಟೈಮ್್ಸ ಬಾರ್ ಆಂಡ್ ರೆಸ್ಟೋರೆಂಟ್​ನಲ್ಲಿ ನೂರಾರು ಯುವತಿಯರಿಂದ ಅಶ್ಲೀಲ ನೃತ್ಯಗಳನ್ನು ಮಾಡಿಸಲಾಗುತ್ತಿತ್ತು. ಬಿಗ್ ಬಾಸ್ ಟೈಮ್ಸ್​, ಬಾಲಿವುಡ್ ಟೈಮ್ಸ್​, ಪ್ಯಾರೀಸ್ ಟೈಮ್ಸ್​, ಟೋಪಾಜ್ ಬಟರ್ ಪ್ಲೈ, ರಾಜ್ ಧನ್​ಬೀರ್ ಹೆಸರಿನ 7 ಹಾಲ್​ಗಳಲ್ಲಿ ಉತ್ತರ ಭಾರತ ಮೂಲದ 266 ಯುವತಿಯರು ಅಶ್ಲೀಲ ನೃತ್ಯ ನಡೆಸುತ್ತಿದ್ದರು. ನೃತ್ಯ ವೀಕ್ಷಿಸಲೆಂದು ನಗರದ ವಿವಿಧ ಮೂಲೆಗಳಿಂದ ನೂರಾರು ಮಂದಿ ಡಾನ್ಸ್​ಬಾರ್​ಗೆ ಬಂದಿದ್ದರು.

ಕುಣಿಗಲ್ ಗಿರಿ ತನ್ನ ಹುಟ್ಟುಹಬ್ಬ ಆಚರಿಸಲು ಸ್ನೇಹಿತರೊಂದಿಗೆ ಇದೇ ಡಾನ್ಸ್​ಬಾರ್​ಗೆ ಬಂದಿದ್ದ. ಕುಡಿದ ಮತ್ತಿನಲ್ಲಿ ಆತನೂ ತನ್ನ ಸ್ನೇಹಿತೆಯರ ಜತೆ ನೃತ್ಯ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಡಾನ್ಸ್​ಬಾರ್ ಮೇಲೆ ಧಿಡೀರ್ ದಾಳಿ ನಡೆಸಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬಾರ್​ನಲ್ಲಿದ್ದ ನೂರಾರು ಮಂದಿ ಕೈಯಲ್ಲಿದ್ದ ಮದ್ಯದ ಬಾಟಲಿಯನ್ನು ಅಲ್ಲೇ ಎಸೆದು ಪರಾರಿಯಾಗಲು ಯತ್ನಿಸಿದರು. ಆಗ ಡಾನ್ಸ್​ಬಾರ್​ನಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಡಾನ್ಸ್​ಬಾರ್ ಬಾಗಿಲಿನಲ್ಲೇ ಪೊಲೀಸರು ನಿಂತಿದ್ದ ಹಿನ್ನೆಲೆಯಲ್ಲಿ ಪೊಲೀಸರ ಬಲೆಯಿಂದ ತಪ್ಪಿಸಿಕೊಳ್ಳಲು ಅನೇಕರಿಗೆ ಸಾಧ್ಯವಾಗಲಿಲ್ಲ.

ಪಕ್ಕದ ಕಟ್ಟಡಕ್ಕೆ ಜಿಗಿದು ಎಸ್ಕೇಪ್: ಗ್ರಾಹಕರ ಚೀರಾಟ ಕೇಳಿ ಐದನೇ ಮಹಡಿಯಲ್ಲಿ ಸ್ನೇಹಿತರೊಂದಿಗೆ ಕುಳಿತಿದ್ದ ಕುಣಿಗಲ್ ಗಿರಿಗೆ ಪೊಲೀಸರು ಬಂದಿರುವ ಸುಳಿವು ಸಿಕ್ಕಿದೆ. ಕೂಡಲೇ ಪಕ್ಕದ ಕಟ್ಟಡಕ್ಕೆ ಜಿಗಿದು ಅಲ್ಲಿಂದ ಮತ್ತೊಂದು ಕಟ್ಟಡಕ್ಕೆ ಹೋಗಿ ಪರಾರಿಯಾಗಿದ್ದಾನೆ. ಪೊಲೀಸರು ಗಿರಿಯನ್ನು ಬಂಧಿಸಲು ಐದನೇ ಮಹಡಿಗೆ ಬಂದಾಗ ಆತ ಪರಾರಿಯಾಗಿರುವುದು ಗೊತ್ತಾಗಿದೆ.

ಆರು ಪ್ರತ್ಯೇಕ ಪ್ರಕರಣ ದಾಖಲು

ದಾಳಿ ವೇಳೆ 9.82 ಲಕ್ಷ ರೂ., 2 ಕಂಪ್ಯೂಟರ್, ಬಿಯರ್ ಬಾಟಲಿ ಸೇರಿ ಕೆಲ ವಸ್ತುಗಳನ್ನು ಜಪ್ತಿ ಮಾಡ ಲಾಗಿದೆ. ಅನೈತಿಕ ವ್ಯವಹಾರ ನಡೆಸಿ ಸಂಪಾದನೆ ಮಾಡಲಾಗುತ್ತಿದೆ ಎಂದು ಅಶೋಕ್​ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ 6 ಪ್ರಕರಣ ದಾಖಲಾಗಿದೆ. ಡಾನ್ಸ್ ಬಾರ್ ಮಾಲೀಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *