ದುಬೈ: ಭಾರತದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ 907 ರೇಟಿಂಗ್ ಪಾಯಿಂಟ್ಸ್ ಕಲೆಹಾಕುವ ಮೂಲಕ ಮಾಜಿ ಸ್ಪಿನ್ನರ್ ಆರ್.ಅಶ್ವಿನ್ (904) ದಾಖಲೆಯನ್ನು ಹಿಂದಿಕ್ಕಿದ್ದಾರೆ. ಜತೆಗೆ ರ‌್ಯಾಂಕಿಂಗ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ರೇಟಿಂಗ್ ಅಂಕ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕಳೆದ ವಾರ ಬಿಡುಗಡೆಯಾದ ಐಸಿಸಿ ರ‌್ಯಾಂಕಿಂಗ್‌ನಲ್ಲಿ 904 ಪಾಯಿಂಟ್‌ನೊಂದಿಗೆ ಅಶ್ವಿನ್ ದಾಖಲೆ ಸರಿಗಟ್ಟಿದ ಬುಮ್ರಾ, ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ 4ನೇ ಟೆಸ್ಟ್ ಬಳಿಕ ಮೂರು ಅಂಕಗಳ ಪ್ರಗತಿ ಸಾಧಿಸಿದ್ದಾರೆ. ಜತೆಗೆ ಐಸಿಸಿ ಟೆಸ್ಟ್ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಆರ್.ಅಶ್ವಿನ್ 2016ರ ಡಿಸೆಂಬರ್‌ನಲ್ಲಿ ಗರಿಷ್ಠ 904 ಅಂಕ ಸಂಪಾದಿಸಿದ್ದರು. ಪ್ರಸ್ತುತ 907 ಅಂಕದೊಂದಿಗೆ ಜಸ್‌ಪ್ರೀತ್ ಬುಮ್ರಾ ಸಾರ್ವಕಾಲಿಕ ಪಟ್ಟಿಯಲ್ಲಿ ಇಂಗ್ಲೆಂಡ್ ಡರೆಕ್ ಅಂಡರ್‌ವುಡ್ ದಾಖಲೆ ಸರಿಗಟ್ಟಿ 17ನೇ ಸ್ಥಾನದಲ್ಲಿದ್ದು, ಆಸೀಸ್ ವಿರುದ್ಧದ ಸರಣಿಯ 4 ಪಂದ್ಯಗಳಲ್ಲಿ ಬುಮ್ರಾ ಒಟ್ಟಾರೆ 30 ವಿಕೆಟ್ ಕಬಳಿಸಿದ್ದಾರೆ. ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಸಹ 837 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದ್ದಾರೆ.
ಐಸಿಸಿ ಟೆಸ್ಟ್ ಬೌಲರ್‌ಗಳ ರ‌್ಯಾಂಕಿಂಗ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ರೇಟಿಂಗ್ ಅಂಕ ಪಡೆದ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಸಿಡ್ನಿ ಬರ್ನ್ಸ್(932) ಅಗ್ರಸ್ಥಾನದಲ್ಲಿದ್ದು, ಜಾರ್ಜ್ ಲೋಹಮನ್ (931), ಇಮ್ರಾನ್ ಖಾನ್ (922) ಹಾಗೂ ಮುತ್ತಯ್ಯ ಮುರುಳೀಧರನ್ (920) ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ. ಟೆಸ್ಟ್ ಬ್ಯಾಟರ್‌ಗಳ ರ‌್ಯಾಂಕಿಂಗ್‌ನಲ್ಲಿ ಆರಂಭಿಕ ಯಶಸ್ವಿ ಜೈಸ್ವಾಲ್ ಜೀವನಶ್ರೇಷ್ಠ 4ನೇ ಸ್ಥಾನ ಪಡೆದಿದ್ದು, 854 ಪಾಯಿಂಟ್‌ನೊಂದಿಗೆ ಒಂದು ಸ್ಥಾನ ಬಡ್ತಿ ಪಡೆದುಕೊಂಡಿದ್ದಾರೆ. ಎಂಸಿಜಿಯಲ್ಲಿ ಚೊಚ್ಚಲ ಶತಕ ಸಿಡಿಸಿದ ನಿತೀಶ್ ಕುಮಾರ್ ರೆಡ್ಡಿ 20 ಸ್ಥಾನಗಳ ಏರಿಕೆಯೊಂದಿಗೆ 53ನೇ ಸ್ಥಾನಕ್ಕೆ ಪ್ರಗತಿ ಸಾಧಿಸಿದ್ದಾರೆ.
ಜಸ್‌ಪ್ರೀತ್ ಬುಮ್ರಾ ಹಾಲಿ ಭಾರತ ತಂಡದ ಮಹತ್ವದ ಭಾಗವಾಗಿದ್ದಾರೆ. ಅವರಿಲ್ಲದಿದ್ದರೆ ಹಾಲಿ ಸರಣಿ ಏಕಪಕ್ಷೀಯವಾಗಿ ಇರುತ್ತಿತ್ತು. ಅವರ ಬೌಲಿಂಗ್‌ನ ಕೊನೇ ಕೆಲ ಹೆಜ್ಜೆಗಳಲ್ಲಿ ವಿಶೇಷ ಶಕ್ತಿ ಇದೆ. ನಾನೀಗ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ.
ಗ್ಲೆನ್ ಮೆಕ್‌ಗ್ರಾಥ್, ಆಸೀಸ್ ಮಾಜಿ ವೇಗಿ