ಚಾಮರಾಜನಗರ: ಗಡಿಜಿಲ್ಲೆಯ ಯುವಕ-ಯುವತಿಯರಿಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಸಲುವಾಗಿ ವಿಸ್ತಾರವಾದ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕೆ ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಜಿಲ್ಲೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ 2014-15 ನೇ ಸಾಲಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಡಿಬಿ) ವತಿಯಿಂದ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶವನ್ನು ಸ್ಥಾಪನೆ ಮಾಡಲಾಗಿತ್ತು. ಮೊದಲನೇ ಹಂತದಲ್ಲಿ ಸುಮಾರು 1,400 ಎಕರೆ ಪ್ರದೇಶದಲ್ಲಿ ಹಲವಾರು ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಸ್ಥಾಪನೆಗೊಂಡು ಕಾರ್ಯನಿರ್ವಹಿಸುತ್ತಿದೆ. ಬದನಗುಪ್ಪೆ-ಕೆಲ್ಲಂಬಳಿ ಕೈಗಾರಿಕಾ ಪ್ರದೇಶದ ವಿಸ್ತೀರ್ಣಗೊಳಿಸುವ ಉದ್ದೇಶದಿಂದ 2ನೇ ಹಂತದಲ್ಲಿ ಸುಮಾರು 839 ಎಕರೆ ಪ್ರದೇಶವನ್ನು ಭೂಸ್ವಾಧೀನಪಡಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಹಲವಾರು ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಸ್ಥಾಪನೆಯಾಗುವ ನಿರೀಕ್ಷೆ ಇದೆ.
ಇದರ ಜತೆಗೆ ಕೈಗಾರಿಕಾ ಪ್ರದೇಶವನ್ನು ವಿಸ್ತರಣೆ ಮಾಡುವ ಒತ್ತಾಯ ಕೇಳಿಬರುತ್ತಿದ್ದು, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ ಹಾಗೂ ಸಂತೇಮರಹಳ್ಳಿ ಭಾಗದಲ್ಲಿ ಕೈಗಾರಿಕಾ ಪ್ರದೇಶವನ್ನು ವಿಸ್ತರಣೆ ಮಾಡಿದರೇ ಮತ್ತಷ್ಟು ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ಬೃಹತ್ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣ ಮಾಡುವಂತೆ ಜಿಲ್ಲಾಡಳಿತ ಹಾಗೂ ಕೈಗಾರಿಕಾ ಇಲಾಖೆ ಚಿಂತನೆಯನ್ನು ನಡೆಸಲಾಗಿದೆ. ಈ ಮೂಲಕ ಬೆಂಗಳೂರು, ಮೈಸೂರು ಹಾಗೂ ಇನ್ನಿತರೆ ಕಡೆಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವ ಯುವ ಜನರಿಗೆ ಸ್ಥಳೀಯವಾಗಿ ಉದ್ಯೋಗವನ್ನು ಸೃಷ್ಟಿಸಲು ಯೋಜಿಸಲಾಗಿದೆ. ಇದರ ಜತೆಗೆ ಸ್ಥಳೀಯ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಚಿಂತನೆಯನ್ನು ಮಾಡಲಾಗಿದೆ.
ಕೊಳ್ಳೇಗಾಲ-ಹನೂರಿಗೆ ಒತ್ತು:
ಚಾಮರಾಜನಗರದ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶವನ್ನು ಹೊರತುಪಡಿಸಿದರೇ, ಈ ಹಿಂದೆ ಗುಂಡ್ಲುಪೇಟೆಯ ವೀರನಪುರ ಗ್ರಾಮದ ಸಮೀಪ ಮಧ್ಯಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕಾ ಪ್ರದೇಶವನ್ನು ಸ್ಥಾಪನೆ ಮಾಡಲಾಗಿತ್ತು. ಪ್ರಸ್ತುತ ಜಿಲ್ಲಾಡಳಿತ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಅದನ್ನು ಕೊಳ್ಳೇಗಾಲ-ಹನೂರು ಭಾಗದಲ್ಲಿ ಸುಮಾರು 400 ಎಕರೆ ಪ್ರದೇಶದಲ್ಲಿ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಭಾಗದಲ್ಲಿ ಟೆಕ್ಸ್‌ಟೈಲ್ಸ್ ಪಾರ್ಕ್ ಸ್ಥಾಪನೆ ಮಾಡಿದರೇ ಅನುಕೂಲವಾಗಲಿದೆ ಎಂಬುದು ಕೈಗಾರಿಕೋದ್ಯಮಿಗಳ ಒತ್ತಾಸೆಯಾಗಿದೆ. ಮೇ 12 ರಂದು ನಡೆದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣ ಸಮಿತಿಯ ಜಿಲ್ಲಾ ಮಟ್ಟದ ಸಭೆಯಲ್ಲೂ ಕೈಗಾರಿಕಾ ಪ್ರದೇಶ ವಿಸ್ತಿರ್ಣ ಮಾಡುವಂತೆ ಸಾಕಷ್ಟು ಚರ್ಚೆಗಳು ನಡೆಯಿತು. ಈ ವೇಳೆ ಕೊಳ್ಳೇಗಾಲ ಮತ್ತು ಹನೂರು ನಡುವೆ ಕೈಗಾರಿಕೆ ಸ್ಥಾಪನೆ ಆದ್ಯತೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತು. ಜಿಲ್ಲಾಡಳಿತ ಚಿಂತನೆ ನಡೆಸಿರುವ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣವನ್ನು, ಈ ಭಾಗದಲ್ಲೇ ಸ್ಥಾಪಿಸದರೇ ಅನುಕೂಲವಾಗಲಿದೆ ಎಂದು ಉದ್ಯಮಿಗಳು ಮನವಿ ಮಾಡಿದರು. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತು ಹನೂರು ಶಾಸಕ ಎಂ.ಆರ್.ಮಂಜುನಾಥ್ ಅವರು ಕೂಡ ನಮ್ಮ ಭಾಗದಲ್ಲಿ ಕೈಗಾರಿಕಾ ಪ್ರದೇಶ ವಿಸ್ತರಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದ್ದರು.
ಸ್ಥಳೀಯರಿಗೆ ಉದ್ಯೋಗ ಸೃಷ್ಟಿ:
ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹಲವಾರು ಬೃಹತ್ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದೆ. ಈ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶಗಳು ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಲೇ ಇದೆ. ಕೆಲವು ಕಂಪನಿಗಳಲ್ಲಿ ಸ್ಥಳೀಯ ಯುವಕರು ಸಿ ಗ್ರ್ೂ ಮತ್ತು ಡಿ ಗ್ರ್ೂ ಅಥವಾ ಹೆಚ್ಚಾಗಿ ಸೆಕ್ಯುರಿಟಿ ಕೆಲಸಗಳನ್ನು ಮಾಡುತ್ತಿದ್ದಾರೆ. ಆಗಾಗಿಯೇ ಸ್ಥಳೀಯ ಯುವಕರು ಹಾಗೂ ಮುಖ್ಯವಾಗಿ ಯುವತಿಯರನ್ನು ಗಮನದಲ್ಲಿ ಇರಿಸಿಕೊಂಡು ಅಗತ್ಯವಾದ ಬೃಹತ್ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ನಿರ್ಮಾಣವಾದರೇ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯುವಂತಾಗುತ್ತದೆ.
ಜಿಲ್ಲೆಯಲ್ಲಿ ಟೆಕ್ಸ್‌ಟೈಲ್ಸ್ ಪಾರ್ಕ್ ನಿರ್ಮಾಣ ಮಾಡಲು ಚಿಂತನೆ ನಡೆಸಿರುವುದು ಅತ್ಯಂತ ಸ್ವಾಗತಾರ್ಹ. ಅದನ್ನು ಕೊಳ್ಳೇಗಾಲ ಅಥವಾ ಹನೂರು ಭಾಗದಲ್ಲಿ ಸ್ಥಾಪನೆ ಮಾಡಿದರೇ ಅನುಕೂಲವಾಗುತ್ತದೆ. ಈ ಸಂಬಂಧ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣ ಸಮಿತಿಯ ಸಭೆಯಲ್ಲೂ ಒತ್ತಾಯ ಮಾಡಿದ್ದೇವೆ.
-ವಿ.ಪ್ರಭಾಕರ್, ಜಿಲ್ಲಾಧ್ಯಕ್ಷ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಚಾಮರಾಜನಗರ