ಟೆಂಡರ್ ರಸ್ತೆ 5 ತಿಂಗಳೊಳಗೆ ಪೂರ್ಣ

ಹುಬ್ಬಳ್ಳಿ: ಇಲ್ಲಿನ ತೋಳನಕೆರೆಯಿಂದ ಕಾಡಸಿದ್ದೇಶ್ವರ ಕಾಲೇಜ್​ವರೆಗೆ ನಡೆಯುತ್ತಿರುವ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿ ಜನವರಿ ಇಲ್ಲವೇ ಫೆಬ್ರುವರಿ ತಿಂಗಳೊಳಗೆ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಒತ್ತುವರಿ ತೆರವು ಕಾರ್ಯಾಚರಣೆ ಶೇ. 99ರಷ್ಟು ಪೂರ್ಣಗೊಂಡಿದೆ. ಹೆಸ್ಕಾಂ ವತಿಯಿಂದ ಕೆಲವಷ್ಟು ಕೆಲಸ ಆಗಬೇಕು. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲವೆಡೆ ಮರಗಳನ್ನು ಕಡಿಯಬೇಕು. ಅರಣ್ಯ ಇಲಾಖೆ ಅಧಿಕಾರಿಗಳಿಗೂ ತಿಳಿಸಲಾಗಿದೆ ಎಂದರು.

ಮಾರ್ಗ ಮಧ್ಯದ ಸೇತುವೆಯೊಂದನ್ನು ತೆರವುಗೊಳಿಸಿದ ನಂತರ ರಸ್ತೆ ಕಾಮಗಾರಿ ನಡೆಯಲಿದೆ. ಇದಕ್ಕಾಗಿ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಬೇರೆಡೆ ಸಿಆರ್​ಎಫ್ ಅನುದಾನ ಅಡಿ ಕಾಮಗಾರಿ ನಡೆಯುತ್ತಿದೆ. ಸೇತುವೆ ಭಾಗ ಬಿಟ್ಟು ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು. ಗುಣಮಟ್ಟದಿಂದ ಕೂಡಿದ ಕಾಮಗಾರಿ ನಡೆಯುತ್ತಿದೆ ಎಂದರು.

ವೀಕ್ಷಣೆ

ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿಯನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್, ಸಂಸದ ಪ್ರಲ್ಹಾದ ಜೋಶಿ ಪರಿಶೀಲಿಸಿದರು. ಹೆಸ್ಕಾಂ ವೈರ್​ಗಳನ್ನು ಪ್ರತ್ಯೇಕವಾಗಿಡಲು ಡಕ್, ಪಾದಚಾರಿ ಮಾರ್ಗ, ಸೈಕಲ್ ಮಾರ್ಗ ಸೇರಿ ಇತರೆ ಕಾಮಗಾರಿಗಳನ್ನು ವೀಕ್ಷಿಸಿದರು. ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸದಸ್ಯ ಮಹೇಶ ಬುರ್ಲಿ, ಜನಾ ಅರ್ಬನ್ ಸ್ಪೇಸ್ ಫೌಂಡೇಶನ್ ವ್ಯವಸ್ಥಾಪಕಿ ಸ್ವಾತಿ ರಾಮನಾಥನ್, ಪಿಡಬ್ಲ್ಯುಡಿ ಇಇ ಯಮಕನಮರಡಿ ಇತರರು ಹಾಜರಿದ್ದರು.

ಲೋಕೋಪಯೋಗಿ ಇಲಾಖೆ ವತಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 10 ಕೋಟಿ ರೂ. ಖರ್ಚು ಮಾಡಿದ್ದು, ರಾಜ್ಯ ಸರ್ಕಾರದಿಂದ ಹಣ ಕೇಳಿದರೆ ಸಚಿವ ಎಚ್.ಡಿ. ರೇವಣ್ಣ ಕೊಡುತ್ತಿಲ್ಲ. ಬರೀ ಹಾಸನ, ಹೊಳೆನರಸೀಪುರಕ್ಕೆ ಅನುದಾನ ಮೀಸಲಿಟ್ಟಿದ್ದಾರೆ. ನಾವು ಕೇಳಿದರೆ ಖಜಾನೆಯಲ್ಲಿ ಹಣ ಇಲ್ಲ ಎಂದು ಹೇಳುತ್ತಿದ್ದಾರೆ.
| ಜಗದೀಶ ಶೆಟ್ಟರ್ ಮಾಜಿ ಸಿಎಂ