More

    ಟೀಕೆಗಳನ್ನು ಬಿಡಿ, ಅಭಿವೃದ್ಧಿ ಬಗ್ಗೆ ಮಾತನಾಡಿ:ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ

    ಹಾಸನ: ಜೆಡಿಎಸ್ ರಾಷ್ಟ್ರೀಯ ಸಮಿತಿ ಸಭೆಯನ್ನು ಕರೆಯುವ ಅಧಿಕಾರ ಇರುವುದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಮಾತ್ರ. ನಾಲ್ಕು ಜನ ಸೇರಿದರೆ ಅದು ಸಭೆ ಆಗುವುದಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
    ಸಿ.ಎಂ.ಇಬ್ರಾಹಿಂ ಹೇಳಿಕೆ ವಿಚಾರವಾಗಿ ಮಂಗಳವಾರ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಟೆಕ್ನಿಕಲ್ ಇಶ್ಯೂ. ನಮ್ಮಲ್ಲಿ ಕೋರ್ ಕಮಿಟಿ ಇದೆ. ಕೋರ್ ಕಮಿಟಿ ಮಾಡಿದರೆ ಉತ್ತರ ಸಿಗುತ್ತದೆ. ಇಬ್ರಾಹಿಂ ಅವರು ರಾಷ್ಟ್ರೀಯ ಸಮಿತಿ ಸದಸ್ಯರಿದ್ದರು. ಈಗ ಅಮಾನತು ಮಾಡಲಾಗಿದೆ. ಸಮಿತಿ ಸಭೆಯನ್ನು ಕೇರಳದ ನಾಣಿಯವರು ಕರೆಯಲು ಬರುವುದಿಲ್ಲ. ರಾಷ್ಟ್ರೀಯ ಸಮಿತಿಯ ಸಭೆಯನ್ನು ದೇವೇಗೌಡರು ಕರೆಯಬೇಕು ಎಂದರು.
    ಈಗ ಐದು ರಾಜ್ಯಗಳಿಂದ ರಾಷ್ಟ್ರೀಯ ಸಮಿತಿಯಲ್ಲಿ 76 ಜನ ಇದ್ದೇವೆ. 76 ಜನರಲ್ಲಿ ಅವತ್ತು ನಾಲ್ಕು ಜನ ಸಭೆ ಸೇರಿದ್ದಾರೆ. ನಾಲ್ಕು ಜನ ಸೇರಿ ಹೊಸ ಸಮಿತಿ ಮಾಡಲಾಗುವುದಿಲ್ಲ. ಶೀಘ್ರದಲ್ಲೇ ದೇವೇಗೌಡರು ಅದಕ್ಕೆ ಸರಿಯಾದ ಉತ್ತರ ಕೊಡಲಿದ್ದಾರೆ. ಶೀಘ್ರದಲ್ಲೇ ರಾಷ್ಟ್ರೀಯ ಸಮಿತಿ ಸಭೆ ಕರೆಯಲಿದ್ದಾರೆ. ಅಲ್ಲಿ ಭಾಗವಹಿಸುವವರಲ್ಲಿ ಯಾರಿಗೆ ಶಕ್ತಿ ತುಂಬಬೇಕು ಅವರಿಗೆ ತುಂಬಲಿದ್ದಾರೆ ಎಂದು ಹೇಳಿದರು.
    ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕರೆಂಟ್ ಕಳ್ಳ ಪೋಸ್ಟರ್ ವಿಚಾರವಾಗಿ ಮಾತನಾಡಿದ ಪ್ರಜ್ವಲ್, ನಾನು ಬೆಂಗಳೂರಿನಲ್ಲಿ ಇದ್ದಾಗ ಸಂಸದರ ನಿವಾಸಕ್ಕೆ ಸೀರಿಯಲ್ ಸೆಟ್ ಹಾಕಿ ಎಂದು ಕೆಲಸಗಾರರಿಗೆ ಹೇಳುತ್ತೇನೆ. ಯಾರೋ ಒಬ್ಬರು ಟಿಸಿ, ಟಿಪಿ ಸೆಟ್‌ಗೋ ಅಥವಾ ಡೈರೆಕ್ಟ್ ವೈಯರ್‌ಗೆ ಕನೆಕ್ಷನ್ ಕೊಟ್ಟರೆ ಪ್ರಜ್ವಲ್ ರೇವಣ್ಣ ಹೊಣೆ ಆಗುತ್ತಾರಾ? ಇದು ತೀರಾ ಸಣ್ಣ ವಿಚಾರ. ಈ ವಿಚಾರ ಎತ್ತುತ್ತಿರುವುದಕ್ಕೆ ಕಾಂಗ್ರೆಸ್‌ನ ಕೆಲವು ಶಾಸಕರೇ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಸಣ್ಣ ವಿಷಯ ಇಟ್ಟುಕೊಂಡು ಮಾಜಿ ಸಿಎಂ ಟೀಕೆ ಮಾಡುವುದು ತಪ್ಪು ಅಂತಿದ್ದಾರೆ. ಕುಮಾರಸ್ವಾಮಿ ಅವರ ದೊಡ್ಡ ವ್ಯಕ್ತಿತ್ವ ಗಮನಿಸಲಿ. ಅವರು ತಪ್ಪು ಮಾಡದೇ ಇದ್ದರೂ ಯಾರೋ ಮಾಡಿದ ತಪ್ಪಿಗೆ ರಾಜ್ಯದ ಜನರ ಕ್ಷಮೆ ಕೇಳಿದ್ದಾರೆ. ವಿಧಿಸಿರುವ ದಂಡವನ್ನು ಕಟ್ಟಿದ್ದಾರೆ ಎಂದು ಹೇಳಿದರು.
    ಮಾಜಿ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಇಷ್ಟೊಂದು ದೊಡ್ಡದಾಗಿ ವಿಷಯವಾಗಿ ಎಳೆಯುತ್ತಿದ್ದಾರೆ. ನೀವು ರೈತರಿಗೆ ಕೊಡಬೇಕಾದ ಟಿಸಿಗಳನ್ನು ಸರಿಯಾಗಿ ಕೊಡಿ. ಹಾಸನ ಜಿಲ್ಲೆಯಲ್ಲಿ ರೈತರು 27 ಸಾವಿರ ಟಿಸಿಗಳಿಗೆ ಹಣ ಕಟ್ಟಿದ್ದಾರೆ. ಟಿಸಿ ಕೊಡದಿದ್ದಕ್ಕೆ ಅವರು ಐಪಿ ಸೆಟ್‌ನಿಂದ ಕನೆಕ್ಷನ್ ತೆಗೆದುಕೊಂಡರೆ ಕರೆಂಟ್ ಕಳ್ಳ ಅಂತೀರಾ. ರೈತರಿಂದ ಸುಮಾರು ಇಪ್ಪತ್ತು ಸಾವಿರ ಹಣ ಕಟ್ಟಿಸಿಕೊಂಡು ಟಿಸಿ ಕೊಡುತ್ತಿಲ್ಲವಲ್ಲ ನಿಮ್ಮನ್ನು ಜನ ಏನೆನ್ನುತ್ತಾರೆ. ಚರ್ಚೆ ಮಾಡುವುದಾದರೆ ಅಭಿವೃದ್ಧಿ ವಿಷಯದ ಬಗ್ಗೆ ಚರ್ಚೆ ಮಾಡಲಿ. ಅದನ್ನು ಬಿಟ್ಟು ಈ ರೀತಿ ಸಿಲ್ಲಿ ಟಾಪಿಕ್ ತೆಗೆದುಕೊಳ್ಳುವುದು ಬೇಡ. ಇದನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.
    ತಮ್ಮ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಾಯಕರ ವಾಗ್ದಾಳಿ ವಿಚಾರವಾಗಿ ಗರಂ ಆದ ಪ್ರಜ್ವಲ್ ರೇವಣ್ಣ, ಚುನಾವಣೆ ಬಂದಿರುವುದಕ್ಕೆ ಮಾತನಾಡುತ್ತಿದ್ದಾರೆ. ಚುನಾವಣೆ ಮುಗಿದ ಮೇಲೆ ಅವರು ಮಾಯ ಆಗುತ್ತದೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲು ಹೋಗಬಾರದು. ನನ್ನ ವಿರುದ್ಧ ಮಾತನಾಡುವ ಬದಲು ರೈತರಿಗೆ ಅನುಕೂಲವಾಗುವ, ಜನರಿಗೆ ಒಳ್ಳೆಯದಾಗುವ ಕಾಮಗಾರಿಗಳಿಗೆ ಅನುದಾನ ತರಲಿ ಎಂದು ಸವಾಲು ಹಾಕಿದರು.
    ಲೋಕಸಭೆ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿ, ಒಂದು ಕಡೆ ವಿಜಯೇಂದ್ರ, ಇನ್ನೊಂದು ಕಡೆ ಕುಮಾರಸ್ವಾಮಿ. ಇಬ್ಬರೂ ಕೂಡ ಡೈನಾಮಿಕ್ ಲೀಡರ್‌ಗಳು. ನಮ್ಮ ಹೊಂದಾಣಿಕೆಗೆ ಶಕ್ತಿ ಸಿಕ್ಕಂತೆ ಆಗಿದೆ. ಹೋರಾಟ ಮಾಡಲು ನಾವೆಲ್ಲರೂ ತಯಾರಾಗಿದ್ದೇವೆ. ಪ್ರತಿಯೊಬ್ಬ ಜೆಡಿಎಸ್-ಬಿಜೆಪಿ ಕಾರ್ಯಕರ್ತಯ ಒಟ್ಟಾಗಿ ಸೇರಿಕೊಂಡು ಈ ಚುನಾವಣೆ ಎದುರಿಸುತ್ತೇನೆ. ನೂರಕ್ಕೆ ನೂರು 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts