ಟಿಬೆಟ್ ಕ್ಯಾಂಪ್​ನಲ್ಲಿ ಹಲ್ಲೆ, ದರೋಡೆ

ಟಿಬೆಟ್ ಕ್ಯಾಂಪ್​ನಲ್ಲಿ ಹಲ್ಲೆ, ದರೋಡೆ

ಮುಂಡಗೋಡ: ನಾಲ್ವರು ಮುಸುಕುಧಾರಿಗಳು ಮನೆಯಲ್ಲಿದ್ದ ಬೌದ್ಧ ಸನ್ಯಾಸಿ ಜುಂಚುಪ್ ಹಾಗೂ ಮಹಿಳೆಯೊಬ್ಬರನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ 7ಲಕ್ಷ ರೂಪಾಯಿ ನಗದು, 4 ಲಕ್ಷ ರೂಪಾಯಿ ಬಂಗಾರ ಆಭರಣ, ಐಫೋನ್ ದೋಚಿದ ಘಟನೆ ಟಿಬೆಟ್ ಕಾಲನಿಯ ಕ್ಯಾಂಪ್ ನಂ.1ರ ಶಾರ್ತ್ಸೆ ಬೌದ್ಧಮಠದ ಬಳಿ ಶನಿವಾರ ರಾತ್ರಿ ನಡೆದಿದೆ.

ರಾತ್ರಿ 11.30ಕ್ಕೆ ಜುಂಚುಪ್ ರಾಂಚೆನ್ ಅವರ ಮನೆ ಬಳಿ ಬಂದ ನಾಲ್ವರು ಮುಸುಕುಧಾರಿಗಳಲ್ಲಿ ಇಬ್ಬರು ಅವರ ಮೇಲೆ ಹಲ್ಲೆ ನಡೆಸಿದರು. ಅಲ್ಲದೆ, ಲಾಮೊ ಯೊದೆನ್ ಎಂಬ ಮಹಿಳೆಯನ್ನು ಮನೆಯೊಳಗೆ ಕಟ್ಟಿ ಹಾಕಿ, ಮನೆಯಲ್ಲಿದ್ದ 7ಲಕ್ಷರೂ. ನಗದು, 4ಲಕ್ಷ ರೂ. ಬಂಗಾರದ ಆಭರಣಗಳನ್ನು, ಎರಡು ಐಪೋನ್, ಒಂದು ಮೊಬೈಲ್, ಜಿಯೋ ಇಂಟೆರ್​ನೆಟ್ ಡೊಂಗಲ್​ಅನ್ನು ದೋಚಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಬೌದ್ಧ ಸನ್ಯಾಸಿ ಜುಂಚುಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಶಿರಸಿ ಡಿಎಸ್​ಪಿ ಜಿ.ಟಿ. ನಾಯಕ, ಮುಂಡಗೋಡ ಸಿಪಿಐ ಶಿವಾನಂದ ಚಲವಾದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ‘ದರೋಡೆಕೋರರ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಸಿಸಿಟಿವಿ ಸೇರಿದಂತೆ ಇತರೆ ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇವೆ’ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ತಿಳಿಸಿದ್ದಾರೆ.