ಟಿಪ್ಪು ಜಯಂತಿ ವೇಳೆ ಅನಾಹುತ ನಡೆದರೆ ಸರ್ಕಾರವೇ ಹೊಣೆ

ಬೆಳಗಾವಿ: ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ ಜಯಂತಿ ಆಚರಿಸುತ್ತಿರುವುದನ್ನು ಖಂಡಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಸದ ಸುರೇಶ ಅಂಗಡಿ, ರಾಜ್ಯಾದ್ಯಂತ ಸಾರ್ವಜನಿಕರು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದರೂ ವೋಟ್ ಬ್ಯಾಂಕಿಗಾಗಿ ಸರ್ಕಾರ ಮತಾಂಧನ ಜಯಂತಿ ಆಚರಣೆಗೆ ಮುಂದಾಗಿರುವುದು ಖಂಡನೀಯ. ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಅನಾಹುತಗಳು ಸಂಭವಿಸಿದರೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದರು.

ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಸಂತ ಶಿಶುನಾಳ ಷರೀಫ ಅವರಂತಹ ಮಹಾನ್ ವ್ಯಕ್ತಿಗಳ ಜಯಂತಿ ಆಚರಿಸುವುದಾದರೆ ನಮ್ಮ ತಕರಾರಿಲ್ಲ. ಆದರೆ, ಮತಾಂತರಕ್ಕಾಗಿ ಸಾವಿರಾರು ಹಿಂದುಗಳನ್ನು ಹತ್ಯೆಗೈದ ಮತಾಂಧ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ನಮ್ಮ ವಿರೋಧ ಇದೆ. ಸರ್ಕಾರ ವೋಟ್ ಬ್ಯಾಂಕ್ ಎಂಜಲಕ್ಕಾಗಿ ಹಿಂದೂಗಳ ಭಾವನೆಗೆ ಧಕ್ಕೆ ತರಲು ಸಿದ್ಧ್ದವಾಗಿರುವುದು ದುರ್ದೈವ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಮೈತ್ರಿ ಸರ್ಕಾರ ಹಿಂದೂ ವಿರೋಧಿ ಹಾಗೂ ಕನ್ನಡ ಭಾಷೆ ವಿರೋಧಿ ನೀತಿ ಅನುಸರಿಸಿದ್ದ ಟಿಪ್ಪು ಜಯಂತಿ ಆಚರಣೆಗೆ ಮುಂದಾದರೆ ರಾಜ್ಯಾದ್ಯಂತ ಬಿಜೆಪಿ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸುವುದು ನಿಶ್ಚಿತ ಎಂದರು.

ಬಿಜೆಪಿ ಗ್ರಾಮಾಂತರ ಜಿಲ್ಲೆ ಅಧ್ಯಕ್ಷ ವಿಶ್ವನಾಥ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಹೇಶ ಮೊಹಿತೆ, ಧನಂಜಯ ಜಾಧವ್, ಶಶಿಕಾಂತ ಪಾಟೀಲ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ಸಿಎಂ ಈಗ ಸಿದ್ದರಾಮಯ್ಯ ಕೈಗೊಂಬೆ

ಟಿಪ್ಪು ಒಬ್ಬ ಮತಾಂಧ, ಆತನ ಜಯಂತಿ ಆಚರಣೆ ಬೇಡ ಎಂದು ಮೈತ್ರಿ ಸರ್ಕಾರ ರಚನೆಯಾಗುವ ಮುನ್ನ ಹೇಳುತ್ತಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೀಗ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿದ್ದಾರೆ. ಅಧಿಕಾರದಾಸೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ.
ಸುರೇಶ ಅಂಗಡಿ, ಸಂಸದ.

Leave a Reply

Your email address will not be published. Required fields are marked *