ಟಿಪ್ಪು ಜಯಂತಿ ಆಚರಣೆ ಕೈಬಿಡಲು ಆಗ್ರಹ

ಗದಗ: ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕೈಬಿಡಬೇಕು ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಣೆಗೆ ನಮ್ಮ ಪ್ರಬಲ ವಿರೋಧವಿದೆ. ಸರ್ಕಾರದಿಂದ ಆಚರಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಟಿಪ್ಪು ಸುಲ್ತಾನ್ ಕೊಡಗು, ಚಿತ್ರದುರ್ಗದಲ್ಲಿ ಸಾಕಷ್ಟು ಅತ್ಯಾಚಾರ, ಅನಾಚಾರ ಮಾಡಿದ್ದಾನೆ. ಆತ ಮತಾಂಧನಾಗಿದ್ದ ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಹೀಗಿದ್ದರೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಟಿಪ್ಪು ಜಯಂತಿ ಆಚರಿಸಬೇಕೆಂದು ಆದೇಶ ಹೊರಡಿಸಿರುವುದು ಖಂಡನೀಯ. ಜಯಂತಿ ಆಚರಣೆ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ. ಆ ಸಂದರ್ಭದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಸರ್ಕಾರವೇ ಹೊಣೆ. ಟಿಪ್ಪು ಜಯಂತಿ ಆಚರಿಸಲು ಸರ್ಕಾರ ಆದೇಶ ಹೊರಡಿಸುತ್ತದೆ. ಮತ್ತೊಂದೆಡೆ ಜಯಂತಿ ದಿನದಂದು ಮೆರವಣಿಗೆ, ರ್ಯಾಲಿಗೆ ಅನುಮತಿ ನೀಡಬಾರದು ಎಂದು ಪೊಲೀಸ್ ಇಲಾಖೆಗೆ ಸೂಚಿಸುತ್ತದೆ. ಯಾರಿಗಾಗಿ ಈ ದೊಂಬರಾಟ? ಇದರಲ್ಲಿ ಯಾವ ಪುರುಷಾರ್ಥವಿದೆ ಎಂದರು.

ಉಪಚುನಾವಣೆಯಲ್ಲಿ ಶಿವಮೊಗ್ಗ, ಬಳ್ಳಾರಿ, ಜಮಖಂಡಿಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಜಮಖಂಡಿಯಲ್ಲಿ ನಾನೇ 30 ಗ್ರಾಮಗಳು ಮತ್ತು ಹೋಬಳಿ ಪ್ರದೇಶದಲ್ಲಿ ಮತ ಯಾಚನೆ ಮಾಡಿದ್ದೇನೆ. ಮತದಾರರು ಬಿಜೆಪಿ ಕಡೆಗೆ ಒಲವು ತೋರಿಸಿದ್ದಾರೆ. ಜಮಖಂಡಿಯಲ್ಲಿ ಇವಿಎಂ ಮಶಿನ್​ನಲ್ಲಿ ಎಂ.ಬಿ. ಪಾಟೀಲರ ಸಂಸ್ಥೆಗಳಿಗೆ ಸಂಬಂಧಿಸಿದ ಬಸ್​ಗಳಲ್ಲಿ ಸಾಗಿಸಲಾಗಿದೆ. ಈ ಕುರಿತು ರಾಜ್ಯ ಚುನಾವಣೆ ಆಯುಕ್ತರಿಗೆ ದೂರು ನೀಡಲಾಗಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ರಾಮನಗರ ಅಭ್ಯರ್ಥಿ ಆಯ್ಕೆಯಲ್ಲಿ ಪಕ್ಷದ ಮುಖಂಡರ ಲೋಪವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಬಿಜೆಪಿ ಅಭ್ಯರ್ಥಿ ಕಣದಿಂದ ನಿವೃತ್ತರಾಗುವಂತೆ ಮಾಡಿದ್ದು ಯಾರು ಎಂಬುದು ಜನರಿಗೆ ತಿಳಿಯಲಿದೆ. ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ. ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡುವಂತಾಗಬೇಕು ಎಂದರು.

ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಲಿಂಗೈಕ್ಯರಾದಾಗ ನಾನು ವಿದೇಶ ಪ್ರವಾಸದಲ್ಲಿದ್ದೆ. ಇದರಿಂದ ಅವರ ಅಂತಿಮ ದರ್ಶನಕ್ಕೆ ಬರಲು ಆಗಿರಲಿಲ್ಲ. ಲಿಂ. ಶ್ರೀಗಳ ಗದ್ದುಗೆಗೆ ಭೇಟಿ ನೀಡಿ ದರ್ಶನ ಪಡೆಯುವುದು, ನೂತನ ಪೀಠಾಧಿಪತಿಗಳ ಆಶೀರ್ವಾದ ಪಡೆಯಲು ತೋಂಟದಾರ್ಯ ಮಠಕ್ಕೆ ಆಗಮಿಸಿದ್ದೇನೆ ಎಂದು ತಿಳಿಸಿದರು.