ಟಿಪ್ಪರ್ ಹರಿದು ಬಾಲಕಿ ಸಾವು

ರಾಮನಗರ: ತಾಲೂಕಿನ ಕೆಂಜಗರಹಳ್ಳಿ ಬಳಿ ಮಂಗಳವಾರ ಬೆಳಗ್ಗೆ ಟಿಪ್ಪರ್​ಗೆ ಸಿಲುಕಿ 4 ವರ್ಷದ ಹೆಣ್ಣು ಮಗು ಮೃತಪಟ್ಟಿದ್ದರಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಜಲ್ಲಿ ಸಾಗಿಸುವ ಟಿಪ್ಪರ್ ಹಿಮ್ಮುಖವಾಗಿ ಚಲಿಸುವ ವೇಳೆ ಮೊಪೆಡ್​ಗೆ ಡಿಕ್ಕಿ ಹೊಡೆದು ಹುಚ್ಚಮ್ಮನದೊಡ್ಡಿ ಗ್ರಾಮದ ಕಂಗಲಪ್ಪ ಹಾಗೂ ಲತಾ ಪುತ್ರಿ ಹರ್ಷಿಣಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮೊಪೆಡ್​ನಲ್ಲಿದ್ದ ಹರ್ಷಿಣಿ ಅಕ್ಕ ವರ್ಷಿಣಿ (8) ಹಾಗೂ ಸೋದರ ಮಾವ ಸಚಿನ್ (19) ಗಂಭೀರವಾಗಿ ಗಾಯಗೊಂಡಿದ್ದಾರೆ.

ಹೇಗಾಯ್ತು: ಕೇತೋಹಳ್ಳಿಯಲ್ಲಿರುವ ಅಜ್ಜಿ ಮನೆಯಿಂದ ಅಕ್ಕ ವರ್ಷಿಣಿಯೊಂದಿಗೆ ಸೋದರ ಮಾವ ಸಚಿನ್ ಜತೆ ಹರ್ಷಿಣಿ ಮೊಪೆಡ್​ನಲ್ಲಿ ಹುಚ್ಚಮ್ಮನದೊಡ್ಡಿಗೆ ವಾಪಸಾಗುತ್ತಿದ್ದಳು. ಕೆಂಜಗರಹಳ್ಳಿ ಬಳಿ ಟಿಪ್ಪರ್ (ಕೆಎ-11-ಬಿ-5014) ರಸ್ತೆ ತಿರುವಿನಲ್ಲಿ ರಿವರ್ಸ್ ಬರುತ್ತಿತ್ತು. ಮೊಪೆಡ್​ನಲ್ಲಿದ್ದ ಸಚಿನ್ ಸಾಕಷ್ಟು ಹಾರ್ನ್ ಮಾಡಿದರೂ ಟಿಪ್ಪರ್ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಹರ್ಷಿಣಿ ತಲೆ ಮೇಲೆ ಟಿಪ್ಪರ್ ಚಕ್ರ ಹರಿದಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಭಟನೆ: ಬಾಲಕಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜಮಾಯಿಸಿದ ಕೆಂಚಗರಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಕ್ರಷರ್​ಗಳ ವಿರುದ್ಧ ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿ ಸಿದರು. ಕೆಂಜಗರಳ್ಳಿ, ಕೆಂಜಗರಳ್ಳಿ ಕಾಲನಿ, ಉರಗಳ್ಳಿ, ಕೇತೋಹಳ್ಳಿ, ಕರಡಿಗೌಡದೊಡ್ಡಿ ಸುತ್ತಲಿನ ಭಾಗದಲ್ಲಿ 20ಕ್ಕೂ ಹೆಚ್ಚು ಕ್ರಷರ್ ಕಾರ್ಯ ನಿರ್ವಹಿಸುತ್ತಿವೆ. ಈ ಮಾರ್ಗದಲ್ಲಿ ಬಿಡದಿವರೆಗೂ ನಿತ್ಯ ಜಲ್ಲಿ ತುಂಬಿಕೊಂಡು ಹೋಗುವ ಟಿಪ್ಪರ್​ಗಳ ಆರ್ಭಟಕ್ಕೆ ಸಂಚಾರವೇ ದುಸ್ತರವಾಗಿದೆ. ಅಪಘಾತಕ್ಕೆ ಟಿಪ್ಪರ್ ಚಾಲಕನ ಅಜಾಗರೂಕತೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕ ಭಾರದ ಹೊತ್ತು ಬರುವ ಲಾರಿಗಳ ಕೇಳೋರ್ಯಾರು?: ನಿಗದಿಗಿಂತ ಅಧಿಕ ಭಾರ ಹೊತ್ತು ಚಲಿಸುವ ಟಿಪ್ಪರ್​ಗಳನ್ನು ಕೇಳುವವರೇ ಇಲ್ಲದಂತಾಗಿದೆ. 8 ಚಕ್ರದ ಲಾರಿಯಲ್ಲಿ 18ರಿಂದ 20 ಟನ್ ಹಾಗೂ 10 ಚಕ್ರದ ಲಾರಿಯಲ್ಲಿ 20ರಿಂದ 22 ಟನ್ ಸಾಗಿಸಬೇಕು. ಆದರೆ,ಬಾಲಕಿಯ ಸಾವಿಗೆ ಕಾರಣವಾದ ಲಾರಿ 45 ಟನ್​ಗಳಿಗೂ ಅಧಿಕ ಲೋಡ್ ಸಾಗಿಸುತ್ತಿತ್ತು. ಹೀಗಾಗಿ ರಸ್ತೆಯ ಉಬ್ಬು ಏರಲಾಗದೆ, ಹಿಮ್ಮುಖವಾಗಿ ಚಲಿಸಿ ಮೊಪೆಡ್​ಗೆ ಡಿಕ್ಕಿ ಹೊಡೆದಿದೆ. ಈ ಭಾಗದಲ್ಲಿ ಸಂಚರಿಸುವ ಲಾರಿಗಳು, ಕ್ರಷರ್​ಗಳ ಆಟಾಟೋಪಗಳಿಗೆ ಕಡಿವಾಣ ಹಾಕಬೇಕಿದ್ದ ಆರ್​ಟಿಒ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಯಾವಾಗಲಾದರೊಮ್ಮೆ ದಂಡ ವಿಧಿಸುವ ನಾಟಕವಾಡುತ್ತಿದ್ದಾರೆ.

ಇನ್ನು ಸುತ್ತಲಿನ ಭಾಗಗಳಲ್ಲಿ ನಡೆಯುವ ಕ್ರಷರ್​ಗಳಿಂದ ಬರುವ ಲಾರಿಗಳು ಬಿಡದಿ ಬಿಟ್ಟು ಕೆಂಪನಹಳ್ಳಿ ಮಾರ್ಗವಾಗಿ ರಾಮನಗರ ರಸ್ತೆಗಳಿಗೆ ಬರುವಂತಿಲ್ಲ. ಬೆಂಗಳೂರು-ಮೈಸೂರು ಹೆದ್ದಾರಿಗೂ ಹೋಗುವಂತಿಲ್ಲ. ಆದರೆ, ಈ ನಿಯಮಗಳೆಲ್ಲವೂ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಈ ಬಗ್ಗೆ ಸಾರ್ವಜನಿಕರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ, ಅಧಿಕಾರಿಗಳು ಕೈಕಟ್ಟಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.