ಟಿಕೆಟ್ ನೀಡಿದರೆ ಮಂಡ್ಯದಿಂದ ಸ್ಪರ್ಧೆ

ಮದ್ದೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿದಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ದಿ. ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ತಿಳಿಸಿದರು.

ಪಟ್ಟಣದ ಸರ್ಕಾರಿ ಬಸ್‌ನಿಲ್ದಾಣದ ಬಳಿ ಅಂಬರೀಷ್ ಅಭಿಮಾನಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವುದಾಗಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.

ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ತಮಗೆ ಯಾವುದೇ ಆಹ್ವಾನ ಬಂದಿಲ್ಲವೆಂದ ಅವರು, ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಲು ಉಸ್ತುಕಳಾಗಿದ್ದು ಕಾಂಗ್ರೆಸ್ ಹೈಕಮಾಂಡ್ ಜತೆ ಮಾತುಕತೆ ನಡೆಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಅಂಬರೀಷ್ ಅಭಿಮಾನಿಗಳು ತೋರುತ್ತಿರುವ ಪ್ರೀತಿ ಬೇರೆಲ್ಲೂ ಸಿಗುವುದಿಲ್ಲವೆಂದ ಅವರು, ತಾವು ಯಾವುದೇ ತೀರ್ಮಾನ ಕೈಗೊಂಡಲ್ಲಿ ಎಲ್ಲರೊಂದಿಗೆ ಸಮಾಲೋಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಅಂಬರೀಷ್ ಪುತ್ರ ಅಭಿಷೇಕ್‌ಗೌಡ, ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ನಾಗೇಶ್, ವಿಜೇಂದ್ರ, ಚಂದ್ರು, ಶ್ರೀನಿವಾಸ್, ಶರತ್, ಪ್ರತಾಪ್ ಇತರರಿದ್ದರು.