ಟಿಎಸ್​ಎಸ್ ಮೈಲುತುತ್ತ ಬಿಡುಗಡೆ

ಶಿರಸಿ: ರೈತರ ಮತ್ತು ಸದಸ್ಯರ ಅಗತ್ಯತೆಗೆ ಅನುಗುಣವಾಗಿ ಸೌಲಭ್ಯ ಒದಗಿಸುತ್ತಿರುವ ಟಿಎಸ್​ಎಸ್ ಈಗ ತನ್ನದೇ ಹೆಸರಿನ ಬ್ರಾಂಡ್​ನಲ್ಲಿ ಅಡಕೆ ಕೊಳೆ ರೋಗ ನಿಯಂತ್ರಣಕ್ಕೆ ಸಿಂಪಡಿಸುವ ಮೈಲು ತುತ್ತ ಮತ್ತು ಸುಣ್ಣವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ನಿರ್ದೇಶಕ ಆರ್. ಆರ್. ಹೆಗಡೆ ಐನಕೈ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿ,‘ಇದುವರೆಗೂ ರೈತರು ಮೈಲು ತುತ್ತವನ್ನು ಹರಳು ರೂಪದಲ್ಲಿ ಖರೀದಿಸುತ್ತಿದ್ದರು. ಅದನ್ನು ನೀರಿನಲ್ಲಿ ನೆನೆಸಿಟ್ಟು ಬೋಡೋ ತಯಾರಿಕೆಗೆ ಸಿದ್ಧಪಡಿಸಬೇಕಾಗಿತ್ತು. ಈಗ ಟಿಎಸ್​ಎಸ್ ಬಿಡುಗಡೆಮಾಡಿರುವ ಮೈಲು ತುತ್ತ ಪುಡಿಯ ರೂಪದಲ್ಲಿದೆ. ಇದರಿಂದಾಗಿ ನೀರು ಬೆರೆಸಿದ ತಕ್ಷಣವೇ ಬಳಕೆಗೆ ಸಿದ್ಧವಾಗಲಿದೆ. ಗುಣಮಟ್ಟದ ಟಿಎಸ್​ಎಸ್ ಸುಣ್ಣವನ್ನೂ ಮಾರುಕಟ್ಟೆಗೆ ಬಿಡಲಾಗಿದೆ. ಆರಂಭಿಕ ಕೊಡುಗೆಯಾಗಿ ಎರಡು ತುತ್ತದ ಪ್ಯಾಕೆಟ್ ಖರೀದಿಸಿದವರಿಗೆ 1 ಸುಣ್ಣದ ಪ್ಯಾಕ್ ಉಚಿತವಾಗಿ ನೀಡಲಾಗುತ್ತದೆ ಎಂದರು. ವ್ಯವಸ್ಥಾಪಕ ನಿರ್ದೇಶಕ ರವೀಶ ಹೆಗಡೆ ಮಾತನಾಡಿ, ‘ಗ್ರಾಹಕರಿಗೆ ಗುಣಮಟ್ಟದ ವಸ್ತುಗಳನ್ನು ಪೂರೈಸುವ ಸಲುವಾಗಿ ಈಗಾಗಲೇ ಧಾರಾ ಪಶು ಆಹಾರ, ಗ್ರೀನ್ ಗೋಲ್ಡ್ ಸಾವಯವ ಗೊಬ್ಬರ, ಚಹಾಪುಡಿ ಇನ್ನಿತರ ವಸ್ತುಗಳನ್ನು ಸಂಸ್ಥೆಯ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡಲಾಗಿದೆ. ಮುಂದಿನ ದಿನಗಳಲ್ಲಿ ಟಿಎಸ್​ಎಸ್ ಅಗರಬತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದೇವೆ’ ಎಂದರು. ನಿರ್ದೇಶಕರಾದ ರವೀಂದ್ರ ಭಟ್, ಸಿ.ಎನ್. ಹೆಗಡೆ, ಶ್ರೀಕಾಂತ ಭಟ್, ವಿನಾಯಕ ಹೆಗಡೆ, ರವಿ ಹೆಗಡೆ ಇತರರು ಇದ್ದರು.

Leave a Reply

Your email address will not be published. Required fields are marked *