ಸಿನಿಮಾ

ಟಾಸ್ಕ್ ಪೂರ್ಣಗೊಳಿಸಿದರೆ ಹಣ ಕೊಡುವುದಾಗಿ ಹೇಳಿ 4.60 ಲಕ್ಷ ವಂಚನೆ

ಹಾಸನ: ವೆಬ್ ಚಾನೆಲ್‌ನಲ್ಲಿ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದರೆ ಹಣ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 4.60 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹಾಸನ ತಾಲೂಕಿನ ಜೆಎಚ್ ಕೆರೆ ಪೋಸ್ಟ್ ವ್ಯಾಪ್ತಿಯ ವ್ಯಕ್ತಿಯೇ ಹಣ ಕಳೆದುಕೊಂಡ ಸಂತ್ರಸ್ತ. ಸಂತ್ರಸ್ತ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಅಪಚರಿತ ಸಂಖ್ಯೆಯಿಂದ ಮೇ 2ರಂದು ವಾಟ್ಸಪ್ ಮೆಸೆಜ್ ಬಂದಿದೆ. ಅದರಲ್ಲಿ ಒಂದು ಲಿಂಕ್ ಹಾಕಿ, ಈ ಲಿಂಕ್ ಓಪನ್ ಮಾಡಿದಾಗ ಕೆಲವು ವೆಬ್ ಚಾನೆಲ್ ತೆರೆದುಕೊಂಡಿದೆ. ಒಂದು ವಿಡಿಯೋ ಲೈಕ್ ಮಾಡಿದರೆ 50 ರೂ. ಹಣ ಬರುತ್ತದೆ ಎಂದು ತಿಳಿಸಿದ್ದಾರೆ. ಆಗ 3 ವಿಡಿಯೋಗಳನ್ನು ಲೈಕ್ ಮಾಡಿದಾಗ ರಕ್ಷಿತ್ ಕೆನರಾ ಬ್ಯಾಂಕ್ ಖಾತೆ ಸಂಖ್ಯೆಗೆ 150 ರೂ. ಹಣ ಬಂದಿದೆ. ಅಪರಿಚಿತ ವ್ಯಕ್ತಿ ಕೆಲವು ಟಾಸ್ಕ್‌ಗಳನ್ನು ಟೆಲಿಗ್ರಾಂ ಮೂಲಕ ಕಳುಹಿಸಿ, ಇದನ್ನು ಪೂರ್ಣಗೊಳಿಸಿದರೆ ಹಣ ಬರುವುದಾಗಿ ತಿಳಿಸಿದ್ದಾನೆ. ಅದರಂತೆ ಟಾಸ್ಕ್ ಪೂರ್ಣಗೊಳಿಸಿದಾಗ ಎರಡು ಬಾರಿ ಒಟ್ಟು 6000 ರೂ. ಹಣ ಬಂದಿದೆ. ಬಳಿಕ ಅಪರಿಚಿತ ವ್ಯಕ್ತಿ ತಾನು ಕಳುಹಿಸುತ್ತಿರುವ ಎಲ್ಲಾ ಟಾಸ್ಕ್‌ಗಳನ್ನು ಪೂರ್ಣಗೊಳಿಸಿ, ನೀವು ಹಣವನ್ನು ಹೆಚ್ಚು ಹೆಚ್ಚು ಹಾಕುತ್ತಾ ಹೋದರೆ ನಿಮಗೆ ಹೆಚ್ಚು ಹಣ ಸಿಗಲಿದೆ ಎಂದು ಆಸೆ ಹುಟ್ಟಿಸಿದ್ದಾನೆ.
ಇತನನ್ನು ನಂಬಿದ ಸಂತ್ರಸ್ತ ತನ್ನ ಬ್ಯಾಂಕ್ ಖಾತೆಯಿಂದ ಹಲವು ಬಾರಿ ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗೆ ಒಮ್ಮೆ 1,60,000 ರೂ. ಹಾಗು ಅದೇ ದಿನ ಆಕ್ಸಿಸ್‌ಬ್ಯಾಂಕ್ ಖಾತೆಯಿಂದ 1,00,000 ರೂ. ಹಾಗು ಮೇ 4ರಂದು 2,00,000 ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು 4,60,000 ರೂ. ಹಣವನ್ನು ಅಪರಿಚಿತ ವ್ಯಕ್ತಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾನೆ. ಹಣ ಹಾಕಿಸಿಕೊಂಡ ವ್ಯಕ್ತಿ ಆ ಬಳಿಕ ತನ್ನ ಮೊಬೈಲ್ ನಂಬರ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾನೆ. ಆ ಬಳಿಕ ಸಂತ್ರಸ್ತ ತಾನು ಮೋಸ ಹೋಗಿರುವುದು ಗೊತ್ತಾಗಿ ಮೇ 8ರಂದು ಹಾಸನದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Latest Posts

ಲೈಫ್‌ಸ್ಟೈಲ್