‘ಟಾಸ್ಕ್’ ನಿರ್ವಹಣೆಗಿಲ್ಲ ‘ಫೋರ್ಸ್’

ಸವಣೂರ: ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆಯೆಂದು ಪರಿಶೀಲಿಸಿ ಪರಿಹಾರ ಒದಗಿಸಬೇಕಾದ ಟಾಸ್ಕ್ ಫೋರ್ಸ್ ಸಮಿತಿ ಏನು ಮಾಡುತ್ತಿದೆ? ಸಮಿತಿ ಸಭೆಯಲ್ಲಿ ನಡೆದ ಚರ್ಚೆ ದಾಖಲೆಗೆ ಮಾತ್ರ ಸೀಮಿತವೇ? ಅಧಿಕಾರಿಗಳು ಕೈಕಟ್ಟಿ ಕುಳಿತಿರುವುದು ಏಕೆ? ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರದ ಬಳಿ ಅನುದಾನವಿಲ್ಲವೇ? ಅನುದಾನ ಇದ್ದರೂ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳ ನಿರಾಸಕ್ತಿಯೇ?

ಇದು ತಾಲೂಕಿನ ಪ್ರಜ್ಞಾವಂತರ ಪ್ರಶ್ನೆ… ಈ ಹಿಂದೆ ಜರುಗಿದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಬಸವರಾಜ ಬೊಮ್ಮಾಯಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದರು. ಬೇಸಿಗೆ ಸಂದರ್ಭದಲ್ಲಿ ಯಾವುದೇ ಗ್ರಾಮಗಳಿಗೆ ನೀರಿನ ತೊಂದರೆ ಎದುರಾಗದಂತೆ ಎಚ್ಚರ ವಹಿಸಿ ಕ್ರಮಕ್ಕೆ ಮುಂದಾಗಬೇಕು. ಕುಡಿಯುವ ನೀರಿನ ಸಲುವಾಗಿ ವಿಶೇಷ ಅನುದಾನ ಲಭ್ಯವಿದೆ. ಯಾವುದೇ ಸಂದರ್ಭದಲ್ಲೂ ಅದನ್ನು ಬಳಸಿ ಜನರಿಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದರು. ಅಧಿಕಾರಿಗಳು ಕೂಡ ಪ್ರಾರಂಭದಲ್ಲಿ ‘ನಾವು ಬರ ನಿರ್ವಹಣೆಗೆ ಸಕಲ ಸನ್ನದ್ಧ’ ಎಂದೇ ಹೇಳಿಕೊಂಡಿದ್ದರು.

ನಂತರದಲ್ಲಾಗಿದ್ದು… ಪಟ್ಟಣ ಹಾಗೂ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಜನತೆ ನೀರಿಗಾಗಿ ಪರದಾಡಿದರು. ಇಂದಿಗೂ ಹಲವೆಡೆ ನೀರಿಗೆ ಹಾಹಾಕಾರ ಇದೆ. ಮಾಧ್ಯಮಗಳಲ್ಲಿ ಸುದ್ದಿ ಬಂದಾಗ ಕಾಟಾಚಾರಕ್ಕೆ ಕೆಲ ಕ್ರಮ ಕೈಗೊಳ್ಳುವ ಅಧಿಕಾರಿಗಳು ಉಳಿದ ಪ್ರದೇಶಗಳತ್ತ ಸುಳಿದೂ ಇಲ್ಲ ಎನ್ನುತ್ತಾರೆ ಗ್ರಾಮೀಣ ಭಾಗದ ಜನತೆ.

ಅನುದಾನಕ್ಕಿಲ್ಲ ಕೊರತೆ: 2019ರ ಜನವರಿಯಿಂದ ಮೇ 31ರವರೆಗೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು 75 ಲಕ್ಷ ರೂಪಾಯಿಗೂ ಹೆಚ್ಚು ಹಣ ನೀರಿನಂತೆ ಹರಿದಿದೆ. ಆದರೂ, ಇಂದಿಗೂ ನೀರಿನ ಸಮಸ್ಯೆ ನಿವಾರಣೆಯಾಗಿಲ್ಲ. ಪಟ್ಟಣ ಹಾಗೂ ತಾಲೂಕಿನ ತವರಮೆಳ್ಳಿಹಳ್ಳಿ, ಮಾವುರ, ಹುರಳೀಕುಪ್ಪಿ, ತೊಂಡೂರ, ಕುಣಿಮೆಳ್ಳಿಹಳ್ಳಿ, ಚಿಲ್ಲೂರಬಡ್ನಿ, ಅಲ್ಲಿಪೂರ ಹಾಗೂ ಶಿರಬಡಗಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ನೀಗಿಸಲು ಪುರಸಭೆ ಮತ್ತು ಸ್ಥಳೀಯ ಗ್ರಾ.ಪಂ. ನೇತೃತ್ವದಲ್ಲಿ ಸಿಆರ್​ಎಫ್ (2018-19ನೇ ಸಾಲಿನ ಪ್ರಕೃತಿ ವಿಕೋಪ ಅನುದಾನ) ಅಡಿಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಪೈಪ್​ಲೈನ್ ಕಾಮಗಾರಿ ಹಾಗೂ ಬೋರ್​ವೆಲ್​ಗಳನ್ನು ಕೊರೆಸಲಾಗಿದೆ.

ಸವಣೂರ ತಾಲೂಕಿನ ಹತ್ತಿಮತ್ತೂರ ಹೋಬಳಿಯು ಹಾವೇರಿ ಮೀಸಲು ಕ್ಷೇತ್ರಕ್ಕೆ ಸೇರಿದ್ದರಿಂದ ಹಾವೇರಿ ಶಾಸಕ ನೆಹರು ಓಲೇಕಾರ ಹಾಗೂ ಸವಣೂರ ಹೋಬಳಿ ಶಿಗ್ಗಾಂವಿ ಮತಕ್ಷೇತ್ರಕ್ಕೆ ಸೇರಿದ್ದರಿಂದ ಶಾಸಕ ಬಸವರಾಜ ಬೊಮ್ಮಾಯಿ ಇಬ್ಬರೂ ಟಾಸ್ಕ್​ಫೋರ್ಸ್ ಸಮಿತಿ ಜಂಟಿ ಅಧ್ಯಕ್ಷರಾಗಿದ್ದಾರೆ. ಆದರೂ, ಪಟ್ಟಣ ಹಾಗೂ ತಾಲೂಕಿನ 16ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ.

ನಿರಂತರ ಚುನಾವಣೆ, ನೀತಿ ಸಂಹಿತೆ ಘೊಷಣೆ ಹಿನ್ನೆಲೆಯಲ್ಲಿ ಶಾಸಕರೂ ಬರಗಾಲ ಎದುರಿಸುವಲ್ಲಿ ಅಧಿಕಾರಿಗಳು ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆಗೆ ಸಾಧ್ಯವಾಗದಿರಬಹುದು. ಆದರೆ, ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾಗಿ ಸ್ಥಳೀಯ ಉಪವಿಭಾಗಾಧಿಕಾರಿಗಳು ಸಹ ಚುನಾವಣೆ ನೆಪದಲ್ಲಿ ಕೈಚೆಲ್ಲಿ ಕುಳಿತ ಕಾರಣ ಲಕ್ಷಾಂತರ ರೂಪಾಯಿ ಹಣ ಪೋಲಾಗಿದೆ ಹೊರತು ನೀರಿನ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಅಧಿಕಾರಿಗಳು ಸರ್ಕಾರದ ಅನುದಾನ ಉಳಿಸಲು ಮಳೆಗಾಗಿ ಕಾದು ಕುಳಿತಿರುವರೇ ಎಂದು ನಾಗರಿಕರು ವ್ಯಂಗ್ಯವಾಡುವಂತಾಗಿದೆ.

ಟಾಸ್ಕ್ ಫೋರ್ಸ್ ಸಮಿತಿ ಆದೇಶದಂತೆ ಬರ ನಿರ್ವಹಣೆಗಾಗಿ ಸೂಕ್ತ ಯೋಜನೆ ಸಿದ್ಧಗೊಳಿಸುವ ಮೂಲಕ ತಾಲೂಕಿನ ವಿವಿಧ ಗ್ರಾಮಗಳಲ್ಲಿ 2019ರ ಜನವರಿಯಿಂದ ಇದುವರೆಗೂ 40 ಬೋರ್​ವೆಲ್​ಗಳನ್ನು ಕೊರೆಸಲಾಗಿದೆ. ಅಂತರ್ಜಲ ಸಂಪೂರ್ಣ ಬತ್ತಿದ ಹಿನ್ನೆಲೆಯಲ್ಲಿ ಕೆಲ ಗ್ರಾಮಗಳಲ್ಲಿ ತೊಂದರೆ ಉಂಟಾಗಿದೆ. ಮಳೆ ಆರಂಭವಾಗಿದ್ದು ಅಂತರ್ಜಲ ಹೆಚ್ಚಳವಾಗಲಿದೆ. ನಂತರ ನೀರಿನ ಸಮಸ್ಯೆ ಕಡಿಮೆಯಾಗುವ ನಿರೀಕ್ಷೆ ಹೊಂದಲಾಗಿದೆ.
| ಆರ್.ಪಿ. ಅರವಿಂದ ಎಇಇ, ಜಿ.ಪಂ. ನೀರು ಮತ್ತು ನೈರ್ಮಲ್ಯ ವಿಭಾಗ

ಟಾಸ್ಕ್ ಫೋರ್ಸ್ ಸಮಿತಿ ವತಿಯಿಂದ ನಿರಂತರ ಸಭೆ ಕೈಗೊಂಡು ಬರಗಾಲ ಎದುರಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ನೀರಿನ ಸಮಸ್ಯೆ ಹತೋಟಿಗೆ ತರಲಾಗಿದೆ. ಪಟ್ಟಣದಲ್ಲಿ ಸಿಆರ್​ಎಫ್ ಅಡಿಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
| ವಿ.ಡಿ. ಸಜ್ಜನ್ ತಹಸೀಲ್ದಾರ್, ಟಾಸ್ಕ್​ಫೋರ್ಸ್ ಸಮಿತಿ ಕಾರ್ಯದರ್ಶಿ

Leave a Reply

Your email address will not be published. Required fields are marked *