ಜ್ವರ ಮತ್ತು ಪ್ರಾಥಮಿಕ ಪರಿಹಾರ

| ಡಾ.ಬಿ.ಎಂ. ಹೆಗ್ಡೆ, ಖ್ಯಾತ ಹೃದ್ರೋಗ ತಜ್ಞರು

ಬ್ರೆಸ್ಟ್​ನಲ್ಲಿ ಏಕೆ ಗಡ್ಡೆಗಳು ಉಂಟಾಗುತ್ತವೆ ಎಂಬುದು ಯಾರಿಗೂ ತಿಳಿದಿಲ್ಲ. ಯಾವಾಗ ಬೇಕಾದರೂ ಗಡ್ಡೆ ಉಂಟಾಗಬಹುದು. ಆದರೆ ಗಡ್ಡೆ ಬಂದರೆ ಅದನ್ನು ತೆಗೆದು ಕ್ಯಾನ್ಸರ್ ಇದೆಯಾ ಎಂದು ಪರೀಕ್ಷೆ ಮಾಡುವುದು ಒಳ್ಳೆಯದು. ಬೇಗ ಗೊತ್ತಾದರೆ ಅದಕ್ಕೆ ಬೇಗ ಚಿಕಿತ್ಸೆ ಮಾಡಬಹುದು. ಆರಂಭದಲ್ಲಿಯೇ ಗಡ್ಡೆಯನ್ನು ತೆಗೆಯಬೇಕು. ಈ ಬಗ್ಗೆ ಸಾಕಷ್ಟು ಕೇಸ್ ಅಧ್ಯಯನಗಳು ನಡೆದಿವೆ.

ಬ್ರೆಸ್ಟ್ ಕ್ಯಾನ್ಸರ್ ಬಗ್ಗೆ ಪರೀಕ್ಷೆ ನಡೆಸುವ ಮ್ಯಾಮೋಗ್ರಫಿಯನ್ನು ಅನಗತ್ಯವಾಗಿ ಮಾಡಿಸಬಾರದು. ಈ ವಿಚಾರದಲ್ಲಿ ಸ್ವಯಂಪರೀಕ್ಷೆ ಅತ್ಯುತ್ತಮವಾದುದು. ಸ್ತನ ಕ್ಯಾನ್ಸರ್ ಲಕ್ಷಣಗಳನ್ನು ತಾವೇ ಸ್ವತಃ ತಿಳಿದುಕೊಳ್ಳಲು ಮಹಿಳೆಯರಿಗೆ ಕಲಿಸಬೇಕು. ಅವರಿಗೆ ಸ್ವತಃ ಸಂಶಯ ಬಂದರೆ ನಂತರ ಮ್ಯಾಮೋಗ್ರಫಿ ಮಾಡಿಸಬಹುದು. ಅನಗತ್ಯವಾಗಿ ಈ ಪರೀಕ್ಷೆ ಮಾಡಿಸಬಾರದು. ರೇಡಿಯೇಷನ್​ನ ಅಗತ್ಯವಿಲ್ಲ. ಇದರಿಂದ ದುಷ್ಪರಿಣಾಮವೇನೂ ಉಂಟಾಗುವುದಿಲ್ಲ. ಆದರೆ ಕೆಲವೊಮ್ಮೆ ಸುಳ್ಳು ವರದಿಗಳು ಬರಬಹುದು. ಗಡ್ಡೆ ಇಲ್ಲದಿದ್ದರೂ ಇದೆ ಎಂಬ ವರದಿ ಬರಬಹುದು. ಅದರ ಹಿಂದೆ ಹೊರಟರೆ ಅನವಶ್ಯಕವಾಗಿ ಬೇರೆ ದಾರಿ ಹಿಡಿಯಬೇಕಾಗುತ್ತದೆ.

ಇನ್ನು ಜ್ವರ ಬಂದರೆ ಪ್ರಾಥಮಿಕವಾಗಿ ಏನು ಮಾಡಬೇಕು ಎಂದು ಕೆಲವರು ಪ್ರಶ್ನಿಸುತ್ತಾರೆ. ಜ್ವರ ಬಂದರೆ ಮೊದಲು ವಿಶ್ರಾಂತಿಯನ್ನು ಪಡೆಯಬೇಕು. ನಂತರ ಯಾವ ಜ್ವರ ಎಂದು ಪರೀಕ್ಷೆ ಮಾಡಿಸಬೇಕು. ಯಾಕೆಂದರೆ ಜ್ವರಕ್ಕೆ ಹಲವಾರು ಕಾರಣಗಳಿವೆ. ಜ್ವರ ಬರುವುದು ನಮ್ಮ ದೇಹದ ಒಳಿತಿಗಾಗಿ. ಏನಾದರೂ ಕ್ರಿಮಿ ನಮ್ಮ ದೇಹದ ಒಳಹೊಕ್ಕರೆ ಅದನ್ನು ನಾಶಪಡಿಸುವುದಕ್ಕಾಗಿ ನಮ್ಮ ದೇಹವು ತನ್ನ ಉಷ್ಣತೆಯನ್ನು ಹೆಚ್ಚು ಮಾಡುತ್ತದೆ. ಔಷಧ ಸೇವಿಸುವ ಮೂಲಕ ಅದನ್ನು ಕೂಡಲೇ ಕೆಳಕ್ಕೆ ತರುವಂತಹ ಪ್ರಯತ್ನವನ್ನು ನಾವು ಮಾಡಲೇಬಾರದು. ಆ ಸಂದರ್ಭದಲ್ಲಿ ಚೆನ್ನಾಗಿ ವಿಶ್ರಾಂತಿಯನ್ನು ಪಡೆದು ಸಾಕಷ್ಟು ನೀರು ಕುಡಿದು ಆಹಾರ ಕಡಿಮೆ ಮಾಡಿ ಒಂದೆರಡು ದಿನಗಳ ಕಾಲ ಕಾದು ನೋಡಿದರೆ ಹೆಚ್ಚಿನ ಜ್ವರಗಳು ಕಡಿಮೆಯಾಗುತ್ತವೆ. ಆದರೆ ಮಲೇರಿಯಾ, ಟೈಫಾಯ್್ಡಳಂತಹ ಜ್ವರಗಳು ವಾಸಿಯಾಗುವುದಿಲ್ಲ. ಹಾಗಾಗಿ ಎರಡು ದಿನ ಕಳೆದರೂ ಜ್ವರ ವಾಸಿಯಾಗದಿದ್ದರೆ ಮತ್ತೆ ಪುನಃ ವೈದ್ಯರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಮಕ್ಕಳಿಗೆ ಜ್ವರ ಬಂದಾಗಲೂ ಇದೇ ವಿಧಾನವನ್ನು ಅನುಸರಿಸುವುದು ಉತ್ತಮ. ಆದರೆ ಅವರ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಏಕೆಂದರೆ ಅವರ ಜೀವ ಸಣ್ಣದು. ಹಾಗಾಗಿ ಜ್ವರ ಬಂದರೆ ಹಾಗೆಯೇ ಬಿಟ್ಟುಬಿಡಬಾರದು. ವಿಶೇಷ ಜಾಗ್ರತೆ ತೆಗೆದುಕೊಳ್ಳಬೇಕು. ಕೆಲವರು ಆಸ್ಪತ್ರೆ, ಮಾತ್ರೆಗಳೆಲ್ಲ ಪ್ರಯೋಜನವಾಗುತ್ತವೆಯೇ ಎನ್ನುತ್ತಾರೆ. ಸ್ವಾಭಾವಿಕವಾಗಿ ಅವು ಪ್ರಯೋಜನಕಾರಿ. ಆದರೆ ಪರೀಕ್ಷೆ ಮಾಡಿಸಿದ ನಂತರವೇ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಸುಮ್ಮನೆ ಜ್ವರ ಬಂದಿದೆ ಎಂಬ ಕಾರಣಕ್ಕೆ ನೀವೇ ಮಾತ್ರೆ ತೆಗೆದುಕೊಳ್ಳಬಾರದು. ಒಬ್ಬ ವೈದ್ಯರು ಪರೀಕ್ಷೆ ಮಾಡಿ ಮಾತ್ರೆ ಕೊಟ್ಟರೆ ಮಾತ್ರ ಅದನ್ನು ಸೇವಿಸುವುದು ಒಳ್ಳೆಯದು.

ಕೆಲವರು ಅದನ್ನು ನಿರ್ಲಕ್ಷಿಸುತ್ತಾರೆ. ಆಗ ಅದು ಉಲ್ಬಣವಾಗುತ್ತದೆ. ಅಷ್ಟಲ್ಲದೆ ಮಕ್ಕಳಿಗೆ ಜ್ವರ ಬಂದರಂತೂ ಕೂಡಲೇ ಪರೀಕ್ಷೆ ಮಾಡಿಸಬೇಕು. ಜ್ವರ ಆಗಾಗ ಬರಬೇಕೆಂದೇನೂ ಇಲ್ಲ. ಆದರೆ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾದರೆ ಪದೇಪದೆ ಜ್ವರ ಬರುತ್ತದೆ. ಅದಕ್ಕಾಗಿ ರೋಗನಿರೋಧಕ ಶಕ್ತಿಯನ್ನು ಉತ್ತಮಗೊಳಿಸುವಂತಹ ಹಲವಾರು ಪ್ರಕ್ರಿಯೆಗಳು ಆಹಾರ, ವ್ಯಾಯಾಮ, ಆಯುರ್ವೆದ ಇತ್ಯಾದಿಗಳಲ್ಲಿವೆ. ಅವುಗಳನ್ನೆಲ್ಲ ಸರಿಯಾಗಿ ಪಾಲಿಸುತ್ತಿದ್ದರೆ ಆಗಾಗ ಜ್ವರ ಬರುವುದಿಲ್ಲ.

ಕೊನೇ ಹನಿ

ತುಳಸಿ ಎಲೆ ಹಾಕಿ ಕುದಿಸಿದ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಗಂಟಲುನೋವು ಕಡಿಮೆಯಾಗುತ್ತದೆ.