ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆಗೆ ಅತ್ಯುತ್ತಮ ಸೇವಾ ಪ್ರಶಸ್ತಿ

ಹೊಳೆಆಲೂರ: ಯೋಗ, ಮಲ್ಲಗಂಬ, ಸಂಗೀತದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಹೊಳೆಆಲೂರಿನ ಯೋಗೀಶ್ವರ ವಿವಿಧೋದ್ದೇಶ ಸಮಿತಿಯ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆ ಈ ವರ್ಷದ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ರಾಜ್ಯ ಮಟ್ಟದ ಅತ್ಯುತ್ತಮ ಸೇವಾ ಪ್ರಶಸ್ತಿಗೆ ಭಾಜನವಾಗಿದೆ. ಬೆಂಗಳೂರಲ್ಲಿ ಡಿ. 3ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಆರ್ಥಿಕ ಸಂಪನ್ಮೂಲಗಳ ಕೊರತೆ ಮಧ್ಯೆ ಗ್ರಾಮದಲ್ಲಿ 2010ರ ಆಗಸ್ಟ್ 22ರಂದು ಕೇವಲ ಐದು ಮಕ್ಕಳೊಂದಿಗೆ ಈ ಶಾಲೆ ಆರಂಭವಾಯಿತು. ಈಗ ಗದಗ ಜಿಲ್ಲೆ ಸೇರಿ ವಿವಿಧೆಡೆಯ 94 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.

ಪ್ರಶಸ್ತಿ, ಪುರಸ್ಕಾರ: ಅಂತಾರಾಷ್ಟ್ರೀಯ ಯೋಗಪಟು ಶಿವಾನಂದ ಕೆಲೂರ ಹಾಗೂ ತಾಯಿ ತುಳಸಮ್ಮ ಕೆಲೂರ ಅವರ ಪ್ರಯತ್ನದಿಂದ ಹಲವಾರು ನಿರ್ಗತಿಕ ಮಕ್ಕಳು ಇಂದು ಸ್ವಾವಲಂಬಿಗಳಾಗಿದ್ದಾರೆ. 2011ರಲ್ಲಿ ಮೈಸೂರು ದಸರಾ, 2012ರಲ್ಲಿ ಮುಂಬೈನಲ್ಲಿ ನಡೆದ ಹೊರನಾಡು ಕನ್ನಡಿಗರ ಸಮ್ಮೇಳನ, 2015ರಲ್ಲಿ ಶ್ರವಣಬೆಳಗೊಳದಲ್ಲಿ ಜರುಗಿದ 81ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮೂಡಬಿದರಿಯ ನುಡಿಸಿರಿ, 2015ರಲ್ಲಿ ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಪ್ರದರ್ಶನ, ಬದಾಮಿಯ ಚಾಲುಕ್ಯ ಉತ್ಸವದಲ್ಲಿ ಈ ಶಾಲೆ ಮಕ್ಕಳು ಅನೇಕ ಪ್ರಶಸ್ತಿ, ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಅಗತ್ಯ ಸೌಲಭ್ಯಗಳಿಲ್ಲ: ಈ ಶಾಲೆಯ ಮಕ್ಕಳು ಯೋಗ, ನಾಟ್ಯ, ಕಂಪ್ಯೂಟರ್, 1ರಿಂದ 65ರ ವರೆಗೆ ಮಗ್ಗಿಗಳನ್ನು ಉಲ್ಟಾ-ಸೀದಾ ಹೇಳುವುದು, ಸ್ವಾತಂತ್ರ್ಯ ನಂತರದ ಮುಖ್ಯಮಂತ್ರಿಗಳು, ಪ್ರಧಾನಿಗಳು, ರಾಷ್ಟ್ರಪತಿಗಳು, ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಹೆಸರು, ಅಧಿಕಾರಾವಧಿ ಸರಾಗವಾಗಿ ಹೇಳುತ್ತಾರೆ. ಆದರೀಗ ಶಾಲೆಗೆ ಸ್ವಂತ ಕಟ್ಟಡವಿಲ್ಲ, ತಕ್ಕ ಸೌಲಭ್ಯಗಳಿಲ್ಲ. ಸರ್ಕಾರ ಅಗತ್ಯ ಸೌಲಭ್ಯ ಒದಗಿಸಬೇಕಿದೆ.

ರಾಜ್ಯೋತ್ಸವ ಪ್ರಶಸ್ತಿ: ಈ ಸಂಸ್ಥೆ ಅಧ್ಯಕ್ಷೆ ತುಳಸಮ್ಮ ಕೆಲೂರ 20 ವರ್ಷಗಳ ಹಿಂದೆ ಖಾಸಗಿ ಶಾಲೆಯೊಂದರ ಆಯಾ. ಪತಿ ಗ್ರಾಮದ ಕಬ್ಬಿಣ ಅಂಗಡಿಯಲ್ಲಿ ಗುಮಾಸ್ತ. ಆದರೂ ಕಷ್ಟಪಟ್ಟು ಮಗ ಶಿವಾನಂದ ಅವರಿಗೆ ಹುಬ್ಬಳಿಯಲ್ಲಿ ಯೋಗ ತರಬೇತಿ ಕೊಡಿಸಿದರು. ಭಾರತ ಯೋಗ ತಂಡದಲ್ಲಿ ಸ್ಥಾನ ಪಡೆದ ಅವರು ಇಟಲಿ, ನೇಪಾಳ, ಜರ್ಮನಿ ದೇಶಗಳಲ್ಲಿ ಪ್ರದರ್ಶನ ಹಾಗೂ ತರಬೇತಿ ನೀಡಿ ಹತ್ತಾರು ಪ್ರಶಸ್ತಿ ಪಡೆದರು. ಸ್ವಗ್ರಾಮ ಹೊಳೆಆಲೂರಿಗೆ ಬಂದು ಆರಂಭಿಸಿದ ಈ ಶಾಲೆ ಇಂದು ಅನೇಕ ವಿದ್ಯಾರ್ಥಿಗಳ ಪ್ರೇರಕ ಶಕ್ತಿಯಾಗಿದೆ. ಅವರಂತೆ ಬೈಲಪ್ಪ ಕಬ್ಬೇರಹಳ್ಳಿ ಎಂಬ ಅನಾಥ ವಿದ್ಯಾರ್ಥಿ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿ ಹಣವಿಲ್ಲದೆ ಪರದಾಡುತ್ತಿದ್ದಾಗ ತುಳಸಮ್ಮ ಕೆಲೂರ ತಮ್ಮ ಹೊಲ ಮಾರಿ ಅವರನ್ನು ವಿದೇಶಕ್ಕೆ ಕಳಿಸಿದರು. ಬೈಲಪ್ಪ ಅವರು ಭಾರತಕ್ಕೆ ಮೂರು ಚಿನ್ನದ ಪದಕ ತಂದರು. ಇಂಥ ಸಾಮಾಜಿಕ ಸೇವೆ ಪರಿಗಣಿಸಿ ರಾಜ್ಯ ಸರ್ಕಾರ 2016ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.