ಮಾಂಜರಿ: ಮಠ-ಮಂದಿರಗಳಲ್ಲಿ ಜರಗುವ ದೀಪೋತ್ಸವ ಸಮಾಜದಲ್ಲಿ ಜ್ಞಾನದ ಬೆಳಕು ಪಸರಿಸುವುದರ ಜತೆಗೆ ಧಾರ್ಮಿಕ ಭಾವನೆಗಳ ಮೂಲಕ ಶಾಂತಿ ನೆಲೆಸುವಂತೆ ಮಾಡುತ್ತದೆ ಎಂದು ಶ್ರೀಶೈಲ್ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಸುಕ್ಷೇತ್ರ ಯಡೂರು ಕಾಡಸಿದ್ದೇಶ್ವರ ಸಂಸ್ಥಾನಮಠಲ್ಲಿ ಗುರುಕುಲ ಪಾಠಶಾಲೆಯ ಸಂಯುಕ್ತಾಶ್ರಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಲಕ್ಷ ದೀಪೋತ್ಸವ ಹಾಗೂ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಅಂಧಕಾರ ಕಳೆಯಲು ದೀಪಬೇಕು. ಅಜ್ಞಾನವೆಂಬ ಕತ್ತಲೆ ಕಳೆಯಲು ಗುರು ಬೇಕು. ಹೀಗಾಗಿ, ಅರಿವು ಹಾಗೂ ಆದರ್ಶಗಳ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುತ್ತದೆ. ಕಾರ್ತಿಕ ಮಾಸದ ಲಕ್ಷದೀಪೋತ್ಸವ ಪರಮಾತ್ಮನಿಗೆ ಪ್ರಿಯವಾದ ಸೇವೆ. ಸತ್ಸಂಗ ಹಾಗೂ ಧಾರ್ಮಿಕ ಕಾರ್ಯ ಭಕ್ತರ ಜ್ಞಾನದ ಹಸಿವನ್ನು ನೀಗಿಸಿ ಸುಜ್ಞಾನ ಜ್ಯೋತಿ ಬೆಳಗಿಸಿ ಸುಂದರ ಬದುಕನ್ನು ಕರುಣಿಸುತ್ತದೆ ಎಂದು ತಿಳಿಸಿದರು.
ವಿಜಯಪುರದ ಸಿದ್ದೇಶ್ವರ ದೇವರು ಮಾತನಾಡಿ, ಕಾರ್ತಿಕ ದೀಪೋತ್ಸವ ಜ್ಞಾನದ ಸಂಕೇತವಾಗಿದೆ. ಮನಸಿಗೆ ಬೆಳಕಿನ ಆಶಾಭಾವ ಮೂಡಿಸುವ ಜತೆಗೆ ಉತ್ತಮ ಆಚಾರ-ವಿಚಾರ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಾಡಸಿದ್ದೇಶ್ವರ ಸಂಸ್ಥಾನಮಠದ ಅಡವಯ್ಯ ಅರಳಿಕಟ್ಟಿಮಠ, ಡಾ.ಪ್ರಭಾಕರ ಕೋರೆ ಕೋ-ಆ್ ಸೊಸೈಟಿ ನಿರ್ದೇಶಕ ಶ್ರೀಕಾಂತ ಉಮರಾಣಿ, ಈರಯ್ಯ ಮಠಪತಿ, ಮುತ್ತಯ್ಯ ಮಠದ, ಈಶ್ವರ ಹಿರೇಮಠ ಹಾಗೂ ಗುರುಕುಲ ಪೀಠದ ವಿದ್ಯಾರ್ಥಿಗಳು, ಭಕ್ತರು ಪಾಲ್ಗೊಂಡಿದ್ದರು.