ಬಸವಕಲ್ಯಾಣ: ಪಠ್ಯದ ಜತೆಗೆ ಸಂಶೋಧನೆಗೆ ಒತ್ತು ನೀಡಬೇಕು. ಜ್ಞಾನದ ಜತೆಗೆ ಕೌಶಲ ಅವಶ್ಯಕ ಎಂದು ಎಸ್‌ಎಸ್‌ಕೆಬಿ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ಎವಲೆ ಹೇಳಿದರು.
ನಗರದ ಎಸ್‌ಎಸ್‌ಕೆ ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಸ್ನಾತಕೋತ್ತರ ಪ್ರಥಮ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಥೆಯಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಬೋಧನಾ ಕೌಶಲ ಬೆಳೆಸಿಕೊಳ್ಳಬೇಕು. ಕಂಪ್ಯೂಟರ್ ಜ್ಞಾನ ಪಡೆಯಬೇಕು. ನಿಮಗೆ ಇಷ್ಟವಿರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸಾಧನೆಗೆ ಮುಂದಾಗಬೇಕು ಎಂದರು.
ಐಕ್ಯೂಎಸಿ ಸಂಯೋಜಕ ಡಾ.ಶಿವಕುಮಾರ ಪಾಟೀಲ್ ಮಾತನಾಡಿ, ಪರಿಶ್ರಮ, ಪ್ರಾಮಾಣಿಕತೆ ಮತ್ತು ಸ್ವಾಭಿಮಾನ ಇದ್ದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಸಮಾಜಕ್ಕೆ ಮತ್ತು ದೇಶಕ್ಕೆ ಕೊಡುಗೆ ನೀಡಲು ಸಾಧ್ಯ ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಕಲ್ಯಾಣಪ್ಪ ನಾವದಗಿ, ಗಣಿತ ವಿಭಾಗದ ಮುಖ್ಯಸ್ಥ ಇಂದ್ರಜಿತ್ ರೆಡ್ಡಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅಶ್ವಿನಿ ಜಲಾದೆ, ಪ್ರೊ.ಲಕ್ಷ್ಮೀಬಾಯಿ ಭಂಕೂರ, ಗ್ರಂಥಪಾಲಕರಾದ ಸೂರ್ಯಕಾಂತ್ ನಾಸೆ, ಭಾರತಿ ಮಠ, ದೀಪಕ ಕಾಡದೆ, ಶರಣು ಮಠಪತಿ, ಶಿವಾನಂದ ಬಿರಾದಾರ, ಭೀಮಾಶಂಕರ ಪೂಜಾರಿ, ರಂಜಿತಾ, ಪ್ರಿಯಾಂಕಾ ಇದ್ದರು.
ವಿದ್ಯಾರ್ಥಿ ಸಿದ್ಧಾಂತ ಪಾಟೀಲ್ ಸ್ವಾಗತಿಸಿದರು, ವಿದ್ಯಾರ್ಥಿನಿಯರಾದ ರೇಷ್ಮಾ ಮತ್ತು ಪ್ರಿಯಾಂಕ ನಿರೂಪಣೆ ಮಾಡಿದರು. ಪ್ರಿಯಾಂಕಾ ಪ್ರಾರ್ಥನಾ ಗೀತೆ ಹಾಡಿದರು. ವಿದ್ಯಾರ್ಥಿನಿಯರಾದ ರೇಣುಕ, ಭಾಗ್ಯಶ್ರೀ ಅನಿಸಿಕೆ ವ್ಯಕ್ತಪಡಿಸಿದರು.
