More

  ಜೋಡಿ ಕರುಗಳ ಚಕ್ಕಡಿ ಓಟದ ಸ್ಪರ್ಧೆ ಸಂಭ್ರಮ

  ಶ್ರೀರಂಗಪಟ್ಟಣ: ತಾಲೂಕಿನ ದರಸಗುಪ್ಪೆ ಗ್ರಾಮದಲ್ಲಿ ಶುಕ್ರವಾರ ನಡೆದ ಜೋಡಿ ಕರುಗಳ ಚಕ್ಕಡಿ ಓಟದ ಸ್ಪರ್ಧೆ ದೇಸಿ ಕ್ರೀಡಾಸಕ್ತರ ಗಮನ ಸೆಳೆಯಿತು.

  ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅಭಿಮಾನಿಗಳು ಹಾಗೂ ನಿಖಿಲ್ ಕುಮಾರಸ್ವಾಮಿ ಯುವ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದೇಸಿ ಕ್ರೀಡಾಕೂಟಕ್ಕೆ ಗೀತಾ ರವೀಂದ್ರ ಶ್ರೀಕಂಠಯ್ಯ ಚಾಲನೆ ನೀಡಿದರು.

  ತಾಲೂಕಿನ ಪಾಂಡಪುರ ಸಕ್ಕರೆ ಕಾರ್ಖಾನೆ ಹಿಂಭಾಗದ ಕಪರನಕೊಪ್ಪಲು ದರಸಗುಪ್ಪೆ ನಡುವಿನ ವಿಶಾಲವಾದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಜೋಡಿ ಎತ್ತಿನ ಕರುಗಳ ಚಕ್ಕಡಿ ಓಟದ ಸ್ಪರ್ಧೆಗೆ ಮಂಡ್ಯ, ಹಾಸನ, ಮೈಸೂರು, ಚಿಕ್ಕಮಗಳೂರು, ತುಮಕೂರು, ರಾಮನಗರ ಜಿಲ್ಲೆಗಳ ವಿವಿಧ ತಾಲೂಕುಗಳಿಂದ ಸುಮಾರು 52ಕ್ಕೂ ಹೆಚ್ಚು ತಂಡಗಳು ಆಗಮಿಸಿದ್ದವು.

  ಮೈದಾನದ ಎರಡು ಬದಿಯಲ್ಲಿ ಮೈ ಕೈ ತುಂಬಿಕೊಂಡಿದ್ದ ದಷ್ಟಪುಟ್ಟ ಕರುಗಳು ಗೆಲುವಿಗಾಗಿ ರಣೋತ್ಸಾಹದಿಂದ ಸೆಣಸಾಡಿ ಮುನ್ನುಗ್ಗಿ ಓಡುತ್ತಿದ್ದದ್ದು ಮೈ ರೋಮಾಂಚನಗೊಳಿಸಿತು. ಈ ವೇಳೆ ವಿವಿಧ ಜಿಲ್ಲೆಗಳಿಂದ ಆಗಮಿಸಿ ಜಮಾಯಿಸಿದ್ದ ಸಹಸ್ರಾರು ಕ್ರೀಡಾಸಕ್ತರು ಹಾಗೂ ದೇಸಿ ಕ್ರೀಡಾ ರಸಿಕರು ಶಿಳ್ಳೆ, ಕೇಕೆ ಹಾಕಿ ಚಪ್ಪಾಳೆ ತಟ್ಟಿ ಕರುಗಳಿಗೆ ಕೂಗಿ ಉತ್ಸಾಹ ತುಂಬುತ್ತಿದ್ದದ್ದು ಕಂಡು ಬಂದಿತು.

  ಸ್ಪರ್ಧೆಯಲ್ಲಿ ಭಾಗಿಯಾಗುವ ತಂಡಕ್ಕೆ ಪ್ರವೇಶ ಶುಲ್ಕವಾಗಿ 2,200 ರೂ. ನಿಗದಿಪಡಿಸಿದ್ದು, ಒಟ್ಟು 5 ವಿಭಾಗಗಳಲ್ಲಿ ಓಟದ ಸ್ಪರ್ಧೆ ಮಧ್ಯರಾತ್ರಿಯವರೆಗೂ ನಡೆಯಿತು. ಪ್ರಥಮ ಸ್ಥಾನಗಳಿಸಿದ ಎತ್ತಿನ ಕರುಗಳ ತಂಡಕ್ಕೆ 30 ಸಾವಿರ ರೂ., ದ್ವೀತಿಯ ಸ್ಥಾನಕ್ಕೆ 25 ಸಾವಿರ ರೂ., ತೃತೀಯ ಸ್ಥಾನಕ್ಕೆ 20 ಸಾವಿರ ರೂ., 4ನೇ ಸ್ಥಾನ 15 ಸಾವಿರ ರೂ. ಹಾಗೂ 5ನೇ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ರೂ.ಗಳ ಬಹುಮಾನ ನಿಗದಿ ಮಾಡಲಾಗಿತ್ತು.

  See also  ನೀರು ಪೂರೈಕೆಯಲ್ಲಿ ತೊಂದರೆಯಾಗದಿರಲಿ

  ಕ್ರೀಡಾಕೂಟಕ್ಕೆ ಡಾ. ವಿದ್ಯಾಶ್ರೀ ಚಿಕ್ಕರಾಮಂಜೇಗೌಡ, ಗ್ರಾಮದ ಮುಖಂಡರಾದ ಪಟೇಲ್ ರಂಗೇಗೌಡ, ಚಿಕ್ಕರಾಮಂಜೇಗೌಡ, ಮಹೇಶ್, ಧನಂಜಯ ಹಾಗೂ ಕ್ರೀಡಾಕೂಟದ ಆಯೋಜಕರಾದ ರಾಕಿ, ಬಾಬು, ಶರತ್, ಸಾಗರ್ ಪಾಲ್ಗೊಂಡಿದ್ದರು. ತೀರ್ಪುಗಾರರಾಗಿ ನೀತು, ಆನಂದ್, ಕಿರಣ್ ಇತರರು ಆಗಮಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts