More

  ಜೋರಾಯ್ತು ದಂ ಮಾರೋ ದಂ…

  ಶ್ರೀಧರ ಅಡಿ ಗೋಕರ್ಣ

  ಕರೊನಾ ಭೀತಿ, ಲಾಕ್​ಡೌನ್ ಕಾರಣದಿಂದಾಗಿ ಕಳೆದ ಮಾರ್ಚ್​ನಿಂದ ಪೂರ್ಣವಾಗಿ ಸ್ತಬ್ಧಗೊಂಡಿದ್ದ ಪ್ರವಾಸೋದ್ಯಮ ಚಟುವಟಿಕೆ ಇತ್ತೀಚೆಗಷ್ಟೆ ಆರಂಭವಾಗಿದೆ. ಇದರ ಜೊತೆಗೆ, ಮಾದಕ ದ್ರವ್ಯ ವ್ಯವಹಾರವೂ ಚಿಗುರೊಡೆಯುತ್ತಿರುವುದು ಬಹಿರಂಗವಾಗಿದೆ.

  ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಹೈಟೆಕ್ ಡ್ರಗ್ಸ್ ದಂಧೆಯ ನಂತರ ಕಳೆದ ಕೆಲ ದಿನಗಳಿಂದ ಮಾದಕ ದ್ರವ್ಯ ಚಲನವಲನದ ಬಗ್ಗೆ ಸ್ಥಳೀಯ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ಕಳೆದ ಬುಧವಾರವಷ್ಟೇ ಸ್ಥಳೀಯ ನಿವಾಸಿ ಶಂಕರ ಕೃಷ್ಣಾಗೌಡ ಎಂಬಾತನಿಂದ 1 ಕೆಜಿ 107 ಗ್ರಾಂ ಮೊತ್ತದ ಗಾಂಜಾ ವಶಪಡಿಸಿಕೊಂಡಿದ್ದರು. ಇದಾದ ಮರುದಿನವೇ ಗುರುವಾರದಂದು ಹುಬ್ಬಳ್ಳಿಯ ನೇಕಾರ ನಗರದ ಯುವಕ ವಿನಾಯಕ ಪ್ರೇಮನಾಥ ಹಬೀಬ ಎಂಬಾತನನ್ನು ಬಂಧಿಸಿ, 80 ಸಾವಿರ ರೂಪಾಯಿಗೂ ಹೆಚ್ಚಿನ ಬೆಲೆಯ 4 ಕೆಜಿ 130 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಗೋಕರ್ಣದಲ್ಲಿ ಮಾದಕ ದ್ರವ್ಯ ವ್ಯವಹಾರ ಚಿಗುರೊಡೆಯುತ್ತಿರುವುದನ್ನು ಈ ಎರಡೂ ಪ್ರಕರಣಗಳು ಸ್ಪಷ್ಟವಾಗಿ ಸೂಚಿಸುತ್ತಿವೆ.

  ಕಾರ್ಯಾಚರಣೆ ಫಲ: ಗೋಕರ್ಣದಲ್ಲಿ ಗರಿಷ್ಠ ಪ್ರಮಾಣದಲ್ಲಿ ಗಾಂಜಾ ಮತ್ತು ಸ್ವಲ್ಪ ಮಟ್ಟಿಗೆ ಚರಸ್ ಆವಕ ಜಾವಕ ಕಳೆದ ಹಲವು ದಶಕಗಳಿಂದ ಕಂಡುಬರುತ್ತಿದೆ. ಇದನ್ನು ಬಿಟ್ಟರೆ ಗೋವಾದಲ್ಲಿರುವಂತೆ ಅಫೀಮ್ ರೀತಿಯ ಸಿಂಥೆಟಿಕ್ ಡ್ರಗ್ಸ್​ಗಳು ಇಲ್ಲಿ ಪತ್ತೆಯಾಗಿಲ್ಲ. ಮಳೆಗಾಲ ಮುಗಿದ ನಂತರ ಪ್ರವಾಸಿಗಳ ಆಗಮನವಾಗುತ್ತಿದ್ದಂತೆ ಗಾಂಜಾ-ಚರಸ್ ಚಲನವಲನವೂ ಹೆಚ್ಚಾಗುತ್ತ ಸಾಗುತ್ತದೆ. ಈ ಬಗೆಯ ಮಾದಕ ದ್ರವ್ಯ ದಂಧೆ ಕಳೆದ ಮೂರು ದಶಕಗಳ ಹಿಂದೆ ಗೋಕರ್ಣದಲ್ಲಿ ಹೆಜ್ಜೆ ಇಡಲಾರಂಭಿಸಿದಾಗ ಅದು ಕೇವಲ ವಿದೇಶಿಯರನ್ನು ಮಾತ್ರ ಅವಲಂಬಿಸಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ದಂಧೆಯಲ್ಲಿ ಆಘಾತಕಾರಿ ಬದಲಾವಣೆ ಕಂಡುಬಂದಿದೆ. ವಾರಾಂತ್ಯದ ಮೋಜಿಗೆ ಇಲ್ಲಿಗೆ ಬರುವ ದೇಶೀಯ ಯುವಕರು ಕೂಡ ಇದರ ಹಿಂದೆ ಬಿದ್ದಿದ್ದಾರೆ ಎನ್ನಲಾಗಿದೆ.

  ಈ ಹಿನ್ನೆಲೆಯಲ್ಲಿ ಕಳೆದ ಅನೇಕ ದಿನಗಳಿಂದ ಸ್ಥಳೀಯ ಪೊಲೀಸರು ಈ ಹಿಂದೆ ಡ್ರಗ್ಸ್ ವ್ಯವಹಾರದಲ್ಲಿ ಸಿಕ್ಕು ಬಿದ್ದ ಹಳೆಯ ಆರೋಪಿಗಳಿಗೆ ಸಂಬಂಧಿಸಿದ 20ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ತಪಾಸಣೆ ಕೈಗೊಂಡಿದ್ದರು. ಇದಕ್ಕಾಗಿಯೇ ಪ್ರತ್ಯೇಕವಾದ ನಾರ್ಕೆಟಿಕ್ ಟೀಮ್ ಕೂಡ ರಚನೆಯಾಗಿತ್ತು.

  ಹೊರಜಿಲ್ಲೆಯ ನಂಟು: ಗುರುವಾರ ಪತ್ತೆಯಾದ ಭಾರಿ ಪ್ರಮಾಣದ ಗಾಂಜಾ ಪ್ರಕರಣವು, ಹೊರ ಜಿಲ್ಲೆಯಿಂದ ಇಲ್ಲಿಗೆ ಮಾದಕವಸ್ತು ಬರುತ್ತದೆ ಎನ್ನುವ ಪೊಲೀಸರ ಶಂಕೆಯನ್ನು ನಿಜವಾಗಿಸಿದೆ. ಗೋಕರ್ಣಕ್ಕೆ ಹುಬ್ಬಳ್ಳಿ, ಶಿವಮೊಗ್ಗ, ಸಾಗರ ಭಾಗದಿಂದ ಗಾಂಜಾ ಹಾಗೂ ಹಿಮಾಚಲ ಪ್ರದೇಶ, ನೇಪಾಳ ಭಾಗದಿಂದ ಚರಸ್ ಬರುತ್ತಿರುವುದನ್ನು ಪೊಲೀಸರು ದೃಢಪಡಿಸಿಕೊಂಡಿದ್ದಾರೆ. ಈಗ ಈ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಈ ದಂಧೆ ನಡೆಸುವ ಕಿಂಗ್​ಪಿನ್​ಗಳ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ.

  ಚೆಕ್ ಪೋಸ್ಟ್ ಸ್ಥಾಪನೆಗೆ ಚಿಂತನೆ: ಗೋಕರ್ಣಕ್ಕೆ ಇಂತಹ ಮಾದಕ ವಸ್ತುಗಳನ್ನು ಸಾಗಿಸಲು ಖಾಸಗಿ ವಾಹನಗಳಿಗಿಂತ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಗೋಕರ್ಣದ ಪ್ರವೇಶ ದ್ವಾರದ ಆಯಕಟ್ಟಿನ ಜಾಗದಲ್ಲಿ ಈ ಹಿಂದಿನಂತೆ ಮತ್ತೆ ಪೊಲೀಸ್ ಚೆಕ್ ಪೋಸ್ಟ್ ಪ್ರಾರಂಭಿಸಿ ಗೋಕರ್ಣದ ಒಳಗೆ ಬರುವ ಪ್ರತಿ ವಾಹನಗಳ ಕಟ್ಟುನಿಟ್ಟಿನ ತಪಾಸಣೆ ನಡೆಸುವ ಬಗ್ಗೆ ಪೊಲೀಸ್ ಇಲಾಖೆ ಚಿಂತನೆ ನಡೆಸುತ್ತಿದೆ.

  ಮಾದಕ ವಸ್ತು ಸಾಗಾಟ ಹಾಗೂ ಮಾರಟ ಕುರಿತಂತೆ ಕಳೆದ ಒಂದು ತಿಂಗಳಿಂದ 20 ಕ್ಕೂ ಹೆಚ್ಚು ಪ್ರಕರಣ ದಾಖಲಿಸಿದ್ದೇವೆ. ಗೋಕರ್ಣದಲ್ಲಿ ಪ್ರವಾಸಿಗರ ಆಗಮನ ಶುರುವಾಗುತ್ತಿದ್ದಂತೆ ಮಾದಕ ಜಾಲವೂ ಚುರುಕಾದಂತೆ ಕಾಣುತ್ತದೆ. ಗೋಕರ್ಣವನ್ನು ನಾವು ಫೋಕಸ್ ಮಾಡುತ್ತಿದ್ದೇವೆ. ಅಲ್ಲಿನ ಹೋಟೆಲ್ ಮಾಲೀಕರಲ್ಲೂ ಮಾಹಿತಿ ಹಂಚಿಕೊಳ್ಳಲು ಸೂಚಿಸಿದ್ದೇವೆ. ಹೋಟೆಲ್ ಅಥವಾ ರೆಸಾರ್ಟ್​ಗಳಲ್ಲಿ ಮಾದಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟರೆ ನಾವು ಅವರ ಮೇಲೂ ಕ್ರಮ ವಹಿಸುತ್ತೇವೆ. ಸಾರ್ವಜನಿಕರು ಯಾವುದೇ ಮಾಹಿತಿ ಇದ್ದರೆ ಪೊಲೀಸ್ ಇಲಾಖೆಗೆ ನೀಡಬೇಕು. | ಶಿವಪ್ರಕಾಶ ದೇವರಾಜು ಎಸ್​ಪಿ, ಉತ್ತರ ಕನ್ನಡ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts