ಜೋರಾಗಿದೆ ಕುಡಿಯುವ ನೀರಿನ ದಂಧೆ

ಹುಬ್ಬಳ್ಳಿ: ನಿಗದಿತ ಸಮಯಕ್ಕೆ ಜಲಮಂಡಳಿ ನೀರು ಸರಬರಾಜು ಮಾಡುತ್ತಿಲ್ಲ. ಇದನ್ನೇ ನೆಪ ಮಾಡಿಕೊಂಡ ಖಾಸಗಿಯಾಗಿ ನೀರು ಸರಬರಾಜು ಮಾಡುವವರು ದುಪ್ಪಟ್ಟು ಬೆಲೆ ಪಡೆಯುತ್ತಿದ್ದಾರೆ. ಜಲಮಂಡಳಿಯೂ ಇದಕ್ಕೆ ಪರೋಕ್ಷವಾಗಿ ಸಾಥ್ ನೀಡುತ್ತಿರುವಂತಿದೆ.

ಹುಬ್ಬಳ್ಳಿಯ ಜನರಿಗೆ 9 ಇಲ್ಲವೇ 10 ದಿನಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಬೇಸಿಗೆ ಇರುವುದರಿಂದ ಮತ್ತಷ್ಟು ನೀರು ಬೇಕೆಂಬ ಬೇಡಿಕೆ ನಿವಾಸಿಗಳಿಂದ ವ್ಯಕ್ತವಾಗುತ್ತಿದೆ. ನಿತ್ಯ ಜಲಮಂಡಳಿ ವಾಹನಗಳಿಂದ 110ರಿಂದ 115 ಟ್ರಿಪ್ (1 ಟ್ರಿಪ್​ಗೆ 3000 ಲೀ) ನೀರು ಪೂರೈಕೆ ಮಾಡಲಾಗುತ್ತಿದೆ. ಮಾಹಿತಿ ಪ್ರಕಾರ ಖಾಸಗಿಯವರು 80 ಟ್ರಿಪ್ ನೀರನ್ನು ಜಲಮಂಡಳಿಯಿಂದ ಪಡೆದು ಪೂರೈಕೆ ಮಾಡುತ್ತಿದ್ದಾರೆ. ಕೆಲವರು ತಾವೇ ಬೋರ್​ವೆಲ್ ಕೊರೆಯಿಸಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ನೀರು ಪೂರೈಕೆ ಮಾಡುತ್ತಿದ್ದಾರೆ. ಒಟ್ಟಾರೆ ನಿತ್ಯವೂ ಖಾಸಗಿಯವರಿಂದ 200 ಟ್ರಿಪ್ ನೀರು ನಗರಕ್ಕೆ ಸರಬರಾಜು ಆಗುತ್ತಿದೆ ಎನ್ನುತ್ತಿವೆ ಮೂಲಗಳು.

ಈ ಮೊದಲು ಖಾಸಗಿಯವರು ಜಲಮಂಡಳಿ ನೀರು ಪಡೆಯಲು 150 ರೂ. (3 ಸಾವಿರ ಲೀಟರ್​ಗೆ) ಕೊಡುತ್ತಿದ್ದರು. ತಿಂಗಳ ಹಿಂದೆ 200 ರೂ. ಹೆಚ್ಚಳ ಮಾಡಲಾಗಿದೆ. ಅಂದರೆ 150ರ ಬದಲು 350 ರೂ. ತೆರಬೇಕಾಗಿದೆ. ಜಲಮಂಡಳಿ 6 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕರ್ ಸಹ ಹೊಂದಿದೆ. ಅದಕ್ಕೆ ಮೊದಲು 350 ರೂ. ಇದ್ದದ್ದು, ಪರಿಷ್ಕರಣೆ ನಂತರ 550 ರೂ.ಗೆ ಏರಿಕೆಯಾಗಿದೆ. ಟ್ರ್ಯಾಕ್ಟರ್ ಬಾಡಿಗೆ, ಚಾಲಕನ ಸಂಬಳ, ಡೀಸೆಲ್ ಬೆಲೆ ಆಧರಿಸಿ ಪರಿಷ್ಕರಣೆ ಮಾಡಲಾಗಿದೆ ಎನ್ನುವುದು ಜಲಮಂಡಳಿ ಅಧಿಕಾರಿಗಳ ವಿವರಣೆ.

3 ಸಾವಿರ ಲೀ. ಟ್ಯಾಂಕರ್​ಗೇ ಹೆಚ್ಚು ಬೇಡಿಕೆ ಇದೆ. 6 ಸಾವಿರ ಲೀ. ತರಿಸಿಕೊಂಡರೆ ಮನೆಯ ಸಂಪಿನಲ್ಲಿ ಹಿಡಿಯುವುದಿಲ್ಲ. ವರ್ಷದ ಹಿಂದೆಲ್ಲ 3ರಿಂದ 5 ದಿನಕ್ಕೊಮ್ಮೆ ನೀರು ಬರುತ್ತಿತ್ತು. ಹಾಗಾಗಿ ದೊಡ್ಡ ಅಳತೆಯ ಸಂಪು ಕಟ್ಟಿಸಿಕೊಂಡವರ ಸಂಖ್ಯೆ ಕಡಿಮೆ ಇದೆ. ಓವರ್​ಹೆಡ್ ಟಾಕಿ ಸಹ ಸಾವಿರ ಲೀ. ಸಾಮರ್ಥ್ಯದ್ದೇ ಜಾಸ್ತಿ ಇವೆ.

ಖಾಸಗಿಯವರ ದರ್ಬಾರ್: ನಗರದಲ್ಲಿ ಹಾಗೂ ನಗರದ ಹೊರಭಾಗದಲ್ಲಿ ಬೋರ್​ವೆಲ್ ಕೊರೆಯಿಸಿದ ಕೆಲವರು ಬೇಸಿಗೆ ವೇಳೆ ನೀರಿನ ದಂಧೆ ನಡೆಸುತ್ತಿದ್ದಾಎರ. ನಗರದಲ್ಲಿ 200ಕ್ಕೂ ಹೆಚ್ಚು ಖಾಸಗಿ ವಾಹನಗಳೇ ಗ್ರಾಹಕರ ಮನೆ ಬಾಗಿಲಿಗೆ ನೀರು ತಲುಪಿಸುತ್ತಿವೆ. ಕಾರಣ ಇಷ್ಟೇ, ಜಲಮಂಡಳಿ ನೀರು ಪೂರೈಸುವಂತೆ ಕೇಳಬೇಕೆಂದರೆ 2ರಿಂದ 3 ದಿನ ಸರತಿ ಹಚ್ಚಬೇಕು. ಅಲ್ಲಿಯವರೆಗೆ ನೀರಿನ ಬವಣೆ ಅನುಭವಿಸುವುದು ಅಸಾಧ್ಯ. ಹಾಗಾಗಿಯೇ ಖಾಸಗಿಯವರನ್ನು ಅವಲಂಬಿಸುವುದು ಅನಿವಾರ್ಯ ಎನ್ನುತ್ತಾರೆ ಜನರು.

ಜಲಮಂಡಳಿ ಹಾಕಿಕೊಂಡಿರುವ ಮಿತಿ ಖಾಸಗಿ ನೀರು ಸರಬರಾಜುಗಾರರಿಗೆ ವರವಾಗಿ ಪರಿಣಮಿಸಿದೆ. ಹೇಳಿದ ಸಮಯಕ್ಕೆ ನೀರು ತಲುಪಿಸಿದರೆ ಆಗಿಂದಾಗ್ಗೆ ಹಣ ಎಣಿಸಿಕೊಂಡು ಬರಬಹುದು. 3 ಸಾವಿರ ಲೀ. ಬೋರವೆಲ್ ನೀರಿಗೆ 70 ರೂ. ದರವನ್ನು ಬೋರವೆಲ್ ಮಾಲೀಕರು ಪಡೆಯುತ್ತಾರೆ. ಅಷ್ಟು ನೀರನ್ನು ವಾಹನ ಮೂಲಕ ಗ್ರಾಹಕರ ಮನೆಗೆ ತಲುಪಿಸುವವರು ಒಟ್ಟು 800 ರೂ.ವರೆಗೆ ಪಡೆಯುತ್ತಿದ್ದಾರೆ.

ನೀರಿದ್ದರೂ ತಣಿಯದ ದಾಹ: ನೃಪತುಂಗ ಬೆಟ್ಟದ ಕೆಳಗೆ ಮೂರು ನೆಲಮಟ್ಟದ ಜಲಸಂಗ್ರಹಾಲಯಗಳಿವೆ. 7 ಲಕ್ಷ ಗ್ಯಾಲನ್, 10 ಲಕ್ಷ ಹಾಗೂ 17 ಲಕ್ಷ ಗ್ಯಾಲನ್ ನೀರು ಸಂಗ್ರಹವಾಗುತ್ತಿದೆ. ಕೃಷ್ಣಾಪುರ ಜಲ ಸಂಗ್ರಹಾಲಯದಲ್ಲಿ 2 ಲಕ್ಷ ಗ್ಯಾಲನ್ ನೀರಿದೆ. ಮಲಪ್ರಭಾ ನದಿ ನೀರನ್ನೇ ನೆಚ್ಚಿಕೊಳ್ಳಲಾಗಿದ್ದು, ಗ್ರಾಹಕರ ದಾಹ ನೀಗಿಸಲು ಸಾಧ್ಯವಾಗುತ್ತಿಲ್ಲ.

ಟ್ರೇಡ್ ಲೈಸನ್ಸ್​ಗೆ ಒಲವಿಲ್ಲ: ಖಾಸಗಿಯವರ ದರ್ಬಾರ್ ತಡೆಯಲು ಬೆಂಗಳೂರಿನ ಬಿಬಿಎಂಪಿಯಂತೆ ಟ್ರೇಡ್ ಲೈಸನ್ಸ್ ಕೊಡಲು ಜಲ ಮಂಡಳಿ ತಯಾರಿಲ್ಲ. ಪರೋಕ್ಷವಾಗಿ ಜಲಮಂಡಳಿಯವರೇ ಖಾಸಗಿಯವರಿಗೆ ಬೆಂಬಲ ನೀಡುತ್ತಿವೆ ಎನ್ನುವ ಆರೋಪಗಳಿವೆ. ಒಂದು ವೇಳೆ ಟ್ರೇಡ್ ಲೈಸನ್ಸ್ ನೀಡಿದರೆ ನೀರಿನ ಗುಣಮಟ್ಟ, ದರವನ್ನು ಜಲಮಂಡಳಿಯೇ ನಿರ್ಧರಿಸಿ ಗ್ರಾಹಕರ ಸುರಕ್ಷೆಯನ್ನು ಕಾಪಾಡಬಹುದು.

ನಮ್ಮಲ್ಲಿರುವ ವಾಹನಗಳನ್ನು ಬಳಸಿಯೇ ಗ್ರಾಹಕರ ಮನೆ ಬಾಗಿಲಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ನಮಿಂದ ನೀರು ಪಡೆದು ಕೆಲ ಖಾಸಗಿಯವರೂ ಪೂರೈಕೆ ಮಾಡುತ್ತಿದ್ದಾರೆ. ಬೇಸಿಗೆ ವೇಳೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.
| ಉಮೇಶ, ಜಲಮಂಡಳಿ ಎಇಇ

Leave a Reply

Your email address will not be published. Required fields are marked *