ಜೋಡೆತ್ತು, 2 ಆಡು ಸಜೀವ ದಹನ

ಹೊಳೆಆಲೂರ: ಮಾಳವಾಡ ಗ್ರಾಮದ ಫಕೀರಪ್ಪ ಚಕ್ರದ ಹಾಗೂ ಭೀರಪ್ಪ ಗದಗಿನ ಎಂಬುವರ ಮನೆ ಮತ್ತು ದನದ ಕೊಟ್ಟಿಗೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಒಂದು ಜೋಡಿ ಎತ್ತು, ಎರಡು ಆಡು, ಲಕ್ಷಾಂತರ ಬೆಲೆ ಬಾಳುವ ಕೃಷಿ ಪರಿಕರ ಸುಟ್ಟು ಅಪಾರ ಹಾನಿಯಾಗಿದೆ.

ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಗ್ರಾಮದಲ್ಲಿ ಒಂದು ವರ್ಷದಿಂದ ಇಂತಹ ನಾಲ್ಕು ಘಟನೆಗಳು ಸಂಶಯಾಸ್ಪದವಾಗಿ ಜರುಗಿವೆ. ಗ್ರಾಮಸ್ಥರು ಇದು ದುಷ್ಕರ್ವಿುಗಳ ಕೃತ್ಯ ಇರಬಹದು ಎಂದು ಆತಂಕಗೊಡಿದ್ದಾರೆ. ಘಟನಾ ಸ್ಥಳದ ಸಮೀಪ ವಿದ್ಯುತ್ ಅಥವಾ ಯಾವುದೇ ಬೆಂಕಿ ಅನಾಹುತ ಸಂಭವಿಸುವ ಲಕ್ಷಣಗಳಿಲ್ಲ ಎನ್ನುವುದು ಅವರ ಅಭಿಪ್ರಾಯ.

ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಸಿ.ಸಿ. ಪಾಟೀಲ, ಜಿ.ಪಂ. ಸದಸ್ಯ ಶಿವಕುಮಾರ ನೀಲಗುಂದ, ಬಿಜೆಪಿ ಅಧ್ಯಕ್ಷ ಅಶೋಕ ಹೆಬ್ಬಳ್ಳಿ, ರೋಣ ಪಿಎಸ್​ಐ ಎಲ್.ಕೆ. ಜೋಲಕಟ್ಟಿ, ಸಿ.ಪಿ.ಐ. ಮಂಜುನಾಥ ನಡವಿನಮನಿ ಅವರಿಗೆ ಸಾರ್ವಜನಿಕರು ಘಟನೆಯ ಮಾಹಿತಿ ನೀಡಿದರು. ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಘಟನೆಗಳು ಜರುಗಿರುವುದುನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.