ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ರಾಜ್ಯದ ಎಲ್ಲ ಕಾರಾಗೃಹಗಳ ಕೈದಿಗಳಿಗೆ ಫ್ಯಾನ್ ಸೌಲಭ್ಯದಲ್ಲಿ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಕಾರಾಗೃಹಗಳ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಲ್ಲಿ ಈಚೆಗೆ 2 ದಿನಗಳ ಕಾಲ ನಡೆದ ಮಹಿಳಾ ಸಿಬ್ಬಂದಿ ಸುರಕ್ಷತೆ ಕುರಿತ ಕಾರ‌್ಯಾಗಾರ ಮತ್ತು ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ
ಬೇಸಿಗೆ ತಾಪಮಾನ ಅಧಿಕವಾಗುತ್ತಿದ್ದು, ರಾಜ್ಯದ 9 ಕೇಂದ್ರ ಕಾರಾಗೃಹಗಳು, ಜಿಲ್ಲಾ, ತಾಲೂಕು ಮತ್ತಿತರ ವಿಶೇಷ ಕಾರಾಗೃಹಗಳ ಅಧಿಕಾರಿಗಳಿಗೆ, ಫ್ಯಾನ್ ಸೌಲಭ್ಯ ಸಿಗಬೇಕು. ಈಗಾಗಲೇ ಇರುವಂಥ ಫ್ಯಾನ್ ಹಾಳಾಗಿದ್ದರೆ ದುರಸ್ತಿ ಮಾಡಿಸಬೇಕು ಅಥವಾ ಹೊಸದಾಗಿ ಅಳವಡಿಸಬೇಕು. ಭದ್ರತೆ ವಿಚಾರದಲ್ಲೂ ಲೋಪವಾಗಬಾರದು. ಇಲಾಖೆಗೆ ಮುಜುಗರ ತರುವ ಘಟನೆಗಳಿಗೆ ಅಧಿಕಾರಿಗಳು ಅವಕಾಶ ಮಾಡಿಕೊಡಬಾರದು ಎಂದು ಕಿವಿಮಾತು ಹೇಳಿದ್ದಾರೆ.
ಅಗತ್ಯವಿದ್ದಲ್ಲಿ ಹೆಚ್ಚುವರಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷೃ ಮಾಡಬಾರದು. ದಿನದ 24 ಗಂಟೆ ಭದ್ರತೆ ಮತ್ತು ಬೆಳಕಿನ ದೃಷ್ಟಿಯಿಂದ ವಿದ್ಯುತ್ ಪೂರೈಕೆ ಸಮರ್ಪಕವಾಗಿರಬೇಕು. ಜನರೇಟರ್‌ಗಳು ಸುಸ್ಥಿತಿಯಲ್ಲಿರುವಂತೆ ಗಮನಿಸಬೇಕು. ಪ್ರಧಾನ ಕಚೇರಿಗೆ ಪತ್ರ ವ್ಯವಹಾರ ಮಾಡಿ ಕಾಲಹರಣ ಮಾಡದೆ, ತಮಗಿರುವ ವಿತ್ತೀಯ ಅಧಿಕಾರ ಬಳಸಿ ಫ್ಯಾನ್, ಸಿಸಿ ಟಿವಿ ಕ್ಯಾಮ ರಾಗಳ ಖರೀದಿ ಹಾಗೂ ಮತ್ತಿತರ ಮೂಲ ಸೌಕರ್ಯಗಳ ಸುಧಾರಣೆ ಮಾಡಬೇಕು. ಇದಕ್ಕೆ ತಮಗಿರುವ ಆರ್ಥಿಕ ವೆಚ್ಚದ ಇತಿಮಿತಿ ಮೀರುವಂತೆ ಕಂಡು ಬಂದರೆ ಮೇಲಧಿಕಾರಿಗಳ ಒಪ್ಪಿಗೆ ಪಡೆಯುವಂತೆ ಕಾರಾಗೃಹಗಳ ಮುಖ್ಯಸ್ಥರಿಗೆ ಡಿಜಿಪಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಖಾಲಿ ಹುದ್ದೆ ಭರ್ತಿಗೆ ಕ್ರಮ
ಕಾರಾಗೃಹ ಇಲಾಖೆಯಲ್ಲಿ 3583 ಮಂಜೂರು ಹುದ್ದೆಗಳಿವೆ. ಈ ಪೈಕಿ 109 ಅಸಿಸ್ಟೆಂಟ್ ಜೈಲರ್, 586 ಹೆಡ್‌ವಾರ್ಡರ್ ಸಹಿತ ಖಾಲಿ ಇರುವ 735 ಹುದ್ದೆಗಳ ಭರ್ತಿಗೂ ತ್ವರಿತ ಕ್ರಮದ ಭರವಸೆ ದೊರಕಿದೆ. ಇಲಾಖೆಯ ಮಹಿಳಾ ಅಧಿಕಾರಿ, ಸಿಬ್ಬಂದಿ ಸುರಕ್ಷತೆಗೆ ಸಂಬಂಧಿಸಿ ದಂತೆ ಕಾರ‌್ಯಾಗಾರದಲ್ಲಿ ಸೂಕ್ತ ಮಾರ್ಗದರ್ಶನ ನೀಡಲಾಗಿದೆ.
ಪ್ರೋತ್ಸಾಹ ಧನ, ನಗದು ಪುರಸ್ಕಾರ
ಉತ್ತಮ ಕಾರ‌್ಯನಿರ್ವಹಣೆಗೆ ಕಾರಾಗೃಹ ಅಧಿಕಾರಿ, ಸಿಬ್ಬಂದಿಗೆ ಕೊಡುತ್ತಿದ್ದ ಪ್ರೋತ್ಸಾಹಧನ, ನಗದು ಬಹುಮಾನವನ್ನು 2024-25ನೇ ಸಾಲಿನಿಂದ ಮರು ಆರಂಭಿಸಲಾಗಿದೆ. ಈ ಯೋಜನೆ 2017-18 ನೇ ಸಾಲಿನಿಂದ ಸ್ಥಗಿತಗೊಂಡಿತ್ತು.

*ಸರ್‌ಪ್ರೈಜ್ ವಿಜಿಟ್‌ಗೆ ತಾಕೀತು
ಮೊಬೈಲ್ ಫೋನ್, ಬೀಡಿ, ಸಿಗರೇಟ್, ಗಾಂಜಾ ಮತ್ತಿತರ ನಿಷೇಧಿತ ವಸ್ತುಗಳ ಪತ್ತೆಗೆ ಸಂಬಂಧಿಸಿದ ಇಲಾಖೆ ಹಿರಿಯ ಅಧಿಕಾರಿಗಳು, ಕಾಲಕಾಲಕ್ಕೆ ಕಾರಾಗೃಹಗಳಿಗೆ ಹಠಾತ್ ಭೇಟಿ ನೀಡಿ ಪರಿಶೀಲಿಸಬೇಕು. ಒಂದು ವೇಳೆ ಅಂತಹ ವಸ್ತು ಕಂಡು ಬಂದರೆ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸಭೆಯಲ್ಲಿ ಡಿಜಿಪಿ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.