ಜೈಲಿಂದ ಬಂದ 2 ತಿಂಗಳಲ್ಲಿ 18 ಮನೆಗೆ ಕನ್ನ

ಬೆಂಗಳೂರು: ಜೈಲಿನಿಂದ ಹೊರ ಬಂದ 2 ತಿಂಗಳಲ್ಲಿ 18 ಮನೆಗಳವು ಮಾಡಿದ್ದ ಕುಖ್ಯಾತ ಮನೆಗಳ್ಳ ಜಪಾನ್ ರಾಜ ಹಾಗೂ ಆತನ ಇಬ್ಬರು ಸಹಚರರನ್ನು ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಬಿಳೇಕಹಳ್ಳಿ ನಿವಾಸಿ ರಾಜ ಅಲಿಯಾಸ್ ಜಪಾನ್ ರಾಜ (40), ಈತನ ಸಹೋದರ ಗೋಪಿ (43) ಹಾಗೂ ಸಹಚರ ಡೇವಿಡ್ (34) ಬಂಧಿತರು. ಆರೋಪಿಗಳಿಂದ 35 ಲಕ್ಷ ರೂ. ಬೆಲೆ ಬಾಳುವ 1.1 ಕೆಜಿ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮನೆಗಳ್ಳ ರಾಜನನ್ನು ಕೆ.ಪಿ. ಅಗ್ರಹಾರ ಠಾಣೆ ಪೊಲೀಸರು 2018ರ ಡಿ.12ರಂದು ಬಂಧಿಸಿದ್ದರು. ಆ ವೇಳೆ ನಗರದ ವಿವಿಧ ಠಾಣೆಗಳಲ್ಲಿ ನಡೆದಿದ್ದ 42 ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿತ್ತು. ಫೆ.16 ರಂದು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಸಹೋದರ ಮತ್ತು ಸಹಚರನ ಜತೆ ಸೇರಿ ನಗರದ ವಿವಿಧೆಡೆ 18 ಕನ್ನಗಳವು ನಡೆಸಿ ಚಿನ್ನಾಭರಣ ಮತ್ತು ನಗದು ದೋಚಿದ್ದ.

ಪತ್ನಿಯರಿಂದ ಚಿನ್ನ ಮಾರಾಟ: ರಾಜ ಇಬ್ಬರನ್ನು ವಿವಾಹವಾಗಿದ್ದು, ಓರ್ವ ಪತ್ನಿ ಕೊಯಮತ್ತೂರಿನಲ್ಲಿ ಹಾಗೂ ಮತ್ತೋರ್ವ ಪತ್ನಿ ಬನ್ನೇರುಘಟ್ಟದಲ್ಲಿ ನೆಲೆಸಿದ್ದಾರೆ. ಕದ್ದ ಚಿನ್ನಾಭರಣಗಳನ್ನು ಪತ್ನಿಯರ ಮೂಲಕ ಗಿರವಿ ಅಂಗಡಿಗೆ ಮಾರಾಟ ಮಾಡಿಸುತ್ತಿದ್ದ. ಬಂದ ಹಣದಲ್ಲಿ ಮೋಜು ಮಾಡುತ್ತಿದ್ದ. ಕೆಲ

ವರ್ಷಗಳ ಹಿಂದೆ ಒಂಟಿಯಾಗಿ ಮನೆಗಳ್ಳತನ ನಡೆಸುತ್ತಿದ್ದ ಈತ ರಸ್ತೆ ಅಪಘಾತದಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದ. ಆ ನಂತರ ಸಹೋದರ ಗೋಪಿ ಹಾಗೂ ಡೇವಿಡ್ ಎಂಬಾತನೊಂದಿಗೆ ಕಳ್ಳತನಕ್ಕೆ ಇಳಿಯುತ್ತಿದ್ದ. ಕದ್ದ ಹಣದಲ್ಲಿ ಅವರಿಗೂ ಪಾಲು ಕೊಡುತ್ತಿದ್ದ.

ಮನೆಗಳ ಬೀಗ ಒಡೆಯಲೆಂದೇ ರಾಜ ಮೂರು ರಾಡ್​ಗಳನ್ನು ಮಾಡಿಸಿಕೊಂಡಿದ್ದ. ಈ ಉಪಕರಣದ ಮೂಲಕ ಲಾಕ್​ಗಳನ್ನು ಸಲೀಸಾಗಿ ತೆಗೆದು ಮನೆ ದೋಚುತ್ತಿದ್ದ. ಸಿಕ್ಕಿಬಿದ್ದು ಜೈಲುಪಾಲಾದರೆ ಕೆಲವೇ ದಿನಗಳಲ್ಲಿ ಜಾಮೀನು ಪಡೆದು ಹೊರಬಂದು ಮತ್ತೆ ತನ್ನ ಹಳೆಯ ಚಾಳಿ ಮುಂದುವರಿಸುತ್ತಿದ್ದ.

ಸಿಕ್ಕಿಬಿದ್ದಿದ್ದು ಹೀಗೆ..

ಕಳೆದ ಜ.26ರಂದು ಮರಿಯಪ್ಪನ ಪಾಳ್ಯದ ನಿವಾಸಿ ವೆಂಕಟೇಶ್ ಕುಟುಂಬ ಸಮೇತ ಹೊರಹೋಗಿದ್ದರು. ಮರುದಿನ ಮನೆಗೆ ಹಿಂದಿರುಗಿದಾಗ ಬಾಗಿಲು ಒಡೆದು 2.4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವುದು ಬೆಳಕಿಗೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನುಮಾನದ ಮೇರೆಗೆ ಡೇವಿಡ್​ನನ್ನು ಬಂಧಿಸಿ ವಿಚಾರಿಸಿದಾಗ ಜಪಾನ್ ರಾಜನ ಕೃತ್ಯ ಎಂಬುದು ಬೆಳಕಿಗೆ ಬಂದಿತ್ತು. ಆತ ನೀಡಿದ ಸುಳಿವಿನ ಮೇರೆಗೆ ರಾಜ ಮತ್ತು ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನದ ಶೈಲಿಯೇ ವಿಭಿನ್ನ..

ಚಿಕ್ಕ ವಯಸ್ಸಿನಲ್ಲಿ ರಾಜ ನೋಡಲು ಕುಳ್ಳಗಿದ್ದ. ಆತನ ಕಣ್ಣುಗಳು ಹಾಗೂ ದೇಹ ಜಪಾನ್​ನ ಜನರಂತೆ ಕಾಣುತ್ತಿತ್ತು. ಈ ಹಿನ್ನೆಲೆಯಲ್ಲಿ ನೆರೆ ಹೊರೆಯವರು ಆತನನ್ನು ಜಪಾನ್ ರಾಜಾ ಎಂದು ಕರೆಯುತ್ತಿದ್ದರು. ನಂತರ ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜಪಾನ್ ರಾಜ ಎಂದೇ ಕುಖ್ಯಾತಿ ಪಡೆದಿದ್ದಾನೆ. ಈತನ ಕಳ್ಳತನದ ಶೈಲಿಯೇ ಭಿನ್ನವಾಗಿದೆ. ಈತ ಕಬ್ಬಿಣದ ರಾಡ್​ನಿಂದ ಬಾಗಿಲು ಲಾಕ್ ಮುರಿದರೆ, ಪೊಲೀಸರು ಇದು ಜಪಾನ್ ರಾಜನ ತಂಡದ ಕೃತ್ಯ ಎಂದು ಸುಲಭವಾಗಿ ಕಂಡುಹಿಡಿಯುತ್ತಾರೆ. ಮನೆಗೆ ಕನ್ನ ಹಾಕಿದ ನಂತರ 3 ದಿನ ನಗರದಲ್ಲಿ ಓಡಾಡುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇಮೇಲ್ ಹ್ಯಾಕ್, 14 ಲಕ್ಷ ರೂ. ಧೋಖಾ

ಬೆಂಗಳೂರು: ಸಿದ್ಧ ಉಡುಪು ತಯಾರಿಕಾ ಕಂಪನಿ ಇ-ಮೇಲ್ ಹ್ಯಾಕ್ ಮಾಡಿದ ಸೈಬರ್ ಖದೀಮರು ತಮ್ಮ ಬ್ಯಾಂಕ್ ಖಾತೆಗೆ 14.03 ಲಕ್ಷ ರೂ. ಜಮೆ ಮಾಡಿಸಿಕೊಂಡು ವಂಚಿಸಿದ್ದಾರೆ.

ಯಶವಂತಪುರದ ಕರ್ಲೆ ಇಂಟರ್​ನ್ಯಾಷನಲ್ ಪ್ರೖೆ.ಲಿ. ಕಂಪನಿ ವಂಚನೆಗೆ ಒಳಗಾಗಿದ್ದು, ಅಧಿಕಾರಿ ಬಿ. ನಾಗೇಂದ್ರ ರಾವ್ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಸಿಐಡಿ ಸೈಬರ್ ಕ್ರೖೆಂ ಪೊಲೀಸರು ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗಾರ್ವೆಂಟ್ಸ್ ಉದ್ಯಮದಲ್ಲಿ ಜಾಗತಿಕ ಮಟ್ಟದಲ್ಲಿ ವ್ಯವಹಾರ ಹೊಂದಿರುವ ಕರ್ಲೆ ಕಂಪನಿ ಅಧಿಕಾರಿಗಳು, ಎಲ್ಲ ವ್ಯವಹಾರವನ್ನು ಅಧಿಕೃತ ಇಮೇಲ್ ಐಡಿಯಿಂದ ನಡೆಸುತ್ತಿದ್ದರು. ಇಂಡೋನೇಷ್ಯಾದ ಆಗ್ರೋ ಪ್ಲಾಂಟ್ಸ್ ಎಂಬ ಕಂಪನಿಗೆ ಕಚ್ಚಾ ವಸ್ತುಗಳನ್ನು ಕಳುಹಿಸುವಂತೆ ಇಮೇಲ್​ನಲ್ಲಿ ಕೋರಿದ್ದರು. ಅದನ್ನು ಹ್ಯಾಕ್ ಮಾಡಿದ ಸೈಬರ್ ಖದೀಮರು, ವ್ಯವಹಾರ ವನ್ನು ತಿಳಿದುಕೊಂಡಿದ್ದರು. ಬಳಿಕ ಆಗ್ರೋ ಪ್ಲಾಂಟ್ಸ್ ಕಂಪನಿಯ ಇಮೇಲ್ ನಕಲಿ ಮಾಡಿ ಕರ್ಲೆ ಇಂಟರ್ ನ್ಯಾಷನಲ್ ಕಂಪನಿಗೆ ಇನ್​ವಾಯ್್ಸ ಕಳುಹಿಸಿ, ಮೊದಲು ಜಮೆ ಮಾಡುತ್ತಿದ್ದ ಬ್ಯಾಂಕ್ ಖಾತೆಗೆ ಈ ಬಾರಿ ಹಣವನ್ನು ವರ್ಗಾವಣೆ ಮಾಡಬೇಡಿ. ಬದಲಿಗೆ ಬದಲಾದ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ತಮ್ಮ ಬ್ಯಾಂಕ್ ಖಾತೆ ನಂಬರ್ ಅನ್ನು ಕಳುಹಿಸಿದ್ದರು. ಅದನ್ನು ನಿಜ ಎಂದು ನಂಬಿದ ಕರ್ಲೆ ಅಧಿಕಾರಿಗಳು ಆ ಖಾತೆಗೆ 14.03 ಲಕ್ಷ ರೂ. ಜಮೆ ಮಾಡಿದ್ದರು. ಹಣ ಬಾರದೆ ಇದ್ದಾಗ ಆಗ್ರೋ ಪ್ಲಾಂಟ್ಸ್ ಕಂಪನಿ ಅಧಿಕಾರಿಗಳು, ಕರ್ಲೆ ಕಂಪನಿಗೆ ಮರು ಸಂದೇಶ ರವಾನಿಸಿ ಹಣ ಇನ್ನೂ ತಲುಪಿಲ್ಲ ಎಂದು ತಿಳಿಸಿದ್ದರು.

ದುಬೈನ ಬ್ಯಾಂಕ್ ಖಾತೆಗೆ ಜಮೆ

ನೈಜ ಕಂಪನಿಗೆ ಹಣ ತಲುಪಿಲ್ಲ ಎಂದು ತಿಳಿದು ಗಾಬರಿಗೊಂಡ ಕರ್ಲೆ ಅಧಿಕಾರಿಗಳು, ಹಣ ವರ್ಗಾವಣೆ ಮಾಡಿರುವುದಾಗಿ ಸೈಬರ್ ಕಳ್ಳರು ಕಳುಹಿಸಿದ್ದ ಇಮೇಲ್ ಸಂದೇಶ ರವಾನಿಸಿದ್ದರು. ಪರಿಶೀಲಿಸಿದ ಆಗ್ರೋ ಪ್ಲಾಂಟ್ಸ್ ಅಧಿಕಾರಿಗಳು ತಮ್ಮದಲ್ಲದ ಬ್ಯಾಂಕ್ ಖಾತೆಗೆ ಜಮೆ ಮಾಡಿರುವುದಾಗಿ ದೃಢಪಡಿಸಿದ್ದಾರೆ. ದುಬೈನ ಖಾಸಗಿ ಬ್ಯಾಂಕ್ ಖಾತೆಗೆ ಜಮೆ ಆಗಿರುವುದು ಗೊತ್ತಾಗಿದೆ. ಕ್ರಮ ತೆಗೆದುಕೊಳ್ಳುವಂತೆ ಕರ್ಲೆ ಅಧಿಕಾರಿಗಳು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಬಿಡಿಎ ಅಧಿಕಾರಿಗಳಿಗೆ ಹಲ್ಲೆ ನಡೆಸಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಅಕ್ರಮ ಕಟ್ಟಡ ತೆರವುಗೊಳಿಸಲು ಹೋದ ಬಿಡಿಎ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಜೀವನ್ ಬಿಮಾನಗರ ಪೊಲೀಸರು ಬಂಧಿಸಿದ್ದಾರೆ.

ಸಂತೋಷ್ (40) ಬಂಧಿತ. ತಲೆಮರೆಸಿ ಕೊಂಡಿರುವ ಶ್ರೀನಿವಾಸ್ ರೆಡ್ಡಿ ಹಾಗೂ ವಿಶ್ವನಾಥ್ ರೆಡ್ಡಿಯನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಿಡಿಎ ಟಾಸ್ಕ್ ಫೋರ್ಸ್ ರಾಜೇಶ್ ಹಾಗೂ ಮಹಾಲಿಂಗೇಗೌಡ ಹಲ್ಲೆಗೊಳಗಾದವರು. ತಿಪ್ಪಸಂದ್ರದ ಕೃಷ್ಣಭವನ್ ಹೋಟೆಲ್ ಬಳಿ ಬಿಡಿಎಗೆ ಸೇರಿದ 60/80 ಜಾಗವನ್ನು ಆರೋಪಿಗಳು ಅಕ್ರಮವಾಗಿ ಒತ್ತುವರಿ ಮಾಡಿ ಕಟ್ಟಡ ನಿರ್ವಿುಸಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮಂಗಳವಾರ (ಮೇ 14) ಬೆಳಗ್ಗೆ 9.30ರಲ್ಲಿ ಸರ್ವೆ ಮಾಡಿ ಜಾಗ ತೆರವುಗೊಳಿಸಲು ಮುಂದಾದ ರಾಜೇಶ್ ಮತ್ತು ಮಹಾಲಿಂಗೇಗೌಡರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು.

Leave a Reply

Your email address will not be published. Required fields are marked *