ಜೇವರ್ಗಿಯಲ್ಲಿ ಹನಿ ನೀರಿಗಾಗಿ ಹಾಹಾಕಾರ

ಪ್ರಕಾಶ ಆಲಬಾಳ ಜೇವರ್ಗಿ
ಪ್ರಸಕ್ತ ಸಾಲಿನಲ್ಲಿ ಭೀಕರ ಬರ ಎದುರಾಗಿದ್ದು, ಹನಿ ನೀರಿಗಾಗಿಯೂ ಪರದಾಡುವಂತ ಸ್ಥಿತಿ ಎಲ್ಲೆಡೆ ನಿರ್ಮಾಣವಾಗಿದೆ. ಆದರೆ ನೀರಿನ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ.

ಹೌದು. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಜೇವರ್ಗಿಯ ಸ್ಥಿತಿಯಾಗಿದೆ. ಸುಮಾರು 40 ಸಾವಿರ ಜನಸಂಖ್ಯೆ ಹೊಂದಿದ ಜೇವರ್ಗಿಯ ಪ್ರತಿ ಬಡಾವಣೆಗಳಲ್ಲು ನೀರಿಗಾಗಿ ಹಾಹಾಕಾರ ಉಂಟಾಗಿದೆ. ಇಲ್ಲಿನ ಜನತೆ ಸುಡು ಬಿಸಿಲನ್ನು ಲೆಕ್ಕಿಸಿದೇ ಕೊಡ ನೀರಿಗಾಗಿ ಅಲೆದಾಡುತ್ತಿದ್ದಾರೆ. ಇನ್ನು ಕಳೆದ 15 ದಿನಗಳಿಂದ ಸಮಸ್ಯೆ ದ್ವಿಗುಣವಾಗಿದೆ. ಇಷ್ಟಾದರೂ ಟ್ಯಾಂಕರ್ ನೀರು ಒದಗಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಜನ ಪುರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಪಟ್ಟಣಕ್ಕೆ ಪಕ್ಕದ ಭೀಮಾ ನದಿಯಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ ಸಮರ್ಪಕ ಮಳೆಯಾಗದಿರುವುದರಿಂದ ಭೀಮೆಯ ಒಡಲು ಸಂಪೂರ್ಣ ಖಾಲಿಯಾಗಿದೆ. ಇದೆಲ್ಲ ಅಧಿಕಾರಿಗಳಿಗೆ ಮಾಹಿತಿಯಿದ್ದು, ನದಿ ನೀರನ್ನು ಸಂಗ್ರಹಿಸಲು ತಾತ್ಕಾಲಿಕ ತಡೆಗೋಡೆ ನಿಮರ್ಿಸಿ ನೀರು ಸಂಗ್ರಹಿಸಬಹುದಾಗಿತ್ತು. ಆದರೆ ಯಾವುದೇ ಮುಂಜಾಗೃತಾ ಕ್ರಮ ಕೈಗೊಳ್ಳದಿರುವುದರಿಂದ ಸಮಸ್ಯೆ ತಲೆದೋರಿದೆ ಎಂಬುದು ಜನರ ಆರೋಪವಾಗಿದೆ.

ಇಲ್ಲಿ ನೀರಿದ್ದರೂ ಬರ: ಪಟ್ಟಣದ ಲಕ್ಷ್ಮೀ ಚೌಕ್ ಬಡಾವಣೆಯಲ್ಲಿ ಅಂತರ್ಜಲಮಟ್ಟ ಉತ್ತಮವಾಗಿದೆ. ಇಲ್ಲಿನ ಕೊಳವೆ ಬಾವಿಗೆ ಹೆಚ್ಚುವರಿ ಪೈಪ್ ಅಳವಡಿಸಿದರೆ, ಸಮಸ್ಯೆಗೆ ಪರಿಹಾರ ಕಲ್ಪಿಸಬಹುದಿತ್ತು. ಆದರೆ ಕಳೆದ 10 ದಿನಗಳಿಂದ ಯಂತ್ರ ದುರಸ್ತಿ ನೆಪದಲ್ಲಿ ನೀರು ಪೂರೈಸುವುದನ್ನೇ ಸ್ಥಗಿತಗೊಳಿಸಲಾಗಿದೆ. ಸಣ್ಣ- ಪುಟ್ಟ ಸಮಸ್ಯೆಗಳನ್ನು ಪುರಸಭೆ ಅಧಿಕಾರಿಗಳು ಇತ್ಯರ್ಥಗೊಳಿಸದಿದ್ದರೆ ಹೇಗೆ ? ಹೀಗಾದಲ್ಲಿ ಜನರ ಗೋಳು ಕೇಳುವವರು ಯಾರು ? ಎಂಬ ಪ್ರಶ್ನೆ ಎದುರಾಗಿದೆ.

ಜನ ಪ್ರತಿನಿಧಿಗಳು ಲೋಕಸಭಾ ಚುನಾವಣೆಯಲ್ಲಿ ತಲ್ಲೀನರಾಗಿದ್ದು, ಹೀಗಾಗಿ ಅಧಿಕಾರಿಗಳು ಆಡಿದ್ದೇ ಆಟ, ನಡೆದಿದ್ದೇ ದಾರಿ ಎಂಬ ಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಸಂಬಂಧಿತರು ಇತ್ತ ಗಮನಹರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ.

ಭೀಮಾ ನದಿಗೆ ಕೃಷ್ಣಾ ಕಾಲುವೆ ನೀರು ಬರುವ ಸಾಧ್ಯತೆ ಇದ್ದು, ಇದರಿಂದ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಗಲಿದೆ. ಪರ್ಯಾಯವಾಗಿ ಪಟ್ಟಣದ ಹೊರವಲಯದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಹಿರೇಗೌಡರ ಹೊಲದಲ್ಲಿ ಕೊಳವೆ ಬಾವಿ ಕೊರೆಯಲಾಗಿದ್ದು, ಅಲ್ಲಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ.
| ನಾನಾಸಾಬ ಮಡಿವಾಳಕರ್ ಪುರಸಭೆ ಕಿರಿಯ ಇಂಜಿನಿಯರ್, ಜೇವರ್ಗಿ