ಜೇಕಬ್ ನೆರವಿಗೆ ಬಂದ ದಾದಾ

ಕೋಲ್ಕತ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸಾವು-ಬದುಕಿನ ಹೋರಾಟದಲ್ಲಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ಜೇಕಬ್ ಮಾರ್ಟಿನ್​ರ ನೆರವಿಗೆ ಮಾಜಿ ನಾಯಕ ಸೌರವ್ ಗಂಗೂಲಿ ಮುಂದಾಗಿದ್ದಾರೆ. ಮಾರ್ಟಿನ್​ರ ಪತ್ನಿ ಬಿಸಿಸಿಐ ಹಾಗೂ ಬರೋಡ ಕ್ರಿಕೆಟ್ ಸಂಸ್ಥೆಗೆ ಬರೆದ ಪತ್ರದ ಸಹಾಯದಿಂದ ಈಗಾಗಲೇ ಸ್ವಲ್ಪ ಮಟ್ಟಿಗೆ ಹಣಕಾಸಿನ ನೆರವು ಸಿಕ್ಕಿದೆ. ಈಗ ಗಂಗೂಲಿ, ಮಾರ್ಟಿನ್ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ.

ಜೇಕಬ್ ಹಾಗೂ ನಾನು ಸಹ ಆಟಗಾರರಾಗಿದ್ದವರು. ತುಂಬಾ ಶಾಂತ ಹಾಗೂ ಅಂತಮುಖಿ ವ್ಯಕ್ತಿ ಅವರು. ಮಾರ್ಟಿನ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಇಂಥ ಕಷ್ಟದ ಸಮಯದಲ್ಲಿ ಅವರ ಕುಟುಂಬ ಏಕಾಂಗಿಯಾಗಿ ನಿಂತಿಲ್ಲ ಎಂದು ಹೇಳಲು ಬಯಸುತ್ತೇನೆ ಎಂದು ಗಂಗೂಲಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಡಿಸೆಂಬರ್ 28ರಂದು ನಡೆದ ಅಪಘಾತದಲ್ಲಿ ಶ್ವಾಸಕೋಶ ಹಾಗೂ ಲಿವರ್​ಗೆ ಗಂಭೀರ ಪ್ರಮಾಣದ ಪೆಟ್ಟು ತಿಂದಿರುವ 46 ವರ್ಷದ ಮಾರ್ಟಿನ್, ವಡೋದರದ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್​ನ ಸಹಾಯದಿಂದ ದಿನ ದೂಡುತ್ತಿದ್ದಾರೆ. ಬರೋಡ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಸಂಜಯ್ ಪಟೇಲ್ ಈಗಾಗಲೇ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿಗೂ ವಿಷಯ ತಿಳಿಸಿದ್ದು, ಭಾರತ ತಂಡದಿಂದಲೂ ನೆರವು ಸಿಗುವ ಸಾಧ್ಯತೆ ಇದೆ. ಅದಲ್ಲದೆ, ಮಾಜಿ ಆಟಗಾರ ಜಹೀರ್ ಖಾನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಹಾಗೂ ಮುನಾಫ್ ಪಟೇಲ್ ಕೂಡ ನೆರವು ನೀಡಿದ್ದಾರೆ. 1999ರ ಸೆಪ್ಟೆಂಬರ್​ನಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡದ ಪರವಾಗಿ ಪದಾರ್ಪಣೆ ಮಾಡಿದ್ದ ಜೇಕಬ್ ಮಾರ್ಟಿನ್, 10 ಏಕದಿನ ಪಂದ್ಯವಾಡಿದ್ದರು. 22.57ರ ಸರಾಸರಿಯಲ್ಲಿ 158 ರನ್ ಬಾರಿಸಿದ್ದ ಜೇಕಬ್, ಗಂಗೂಲಿ ನಾಯಕತ್ವದಲ್ಲಿ 5 ಪಂದ್ಯ ಹಾಗೂ ಸಚಿನ್ ತೆಂಡುಲ್ಕರ್ ನಾಯಕತ್ವದಲ್ಲಿ 5 ಪಂದ್ಯ ಆಡಿದ್ದರು. -ಏಜೆನ್ಸೀಸ್