ಜೆಡಿಎಸ್ 3 ಸ್ಥಾನ ಗೆದ್ದರೆ ರಾಜಕೀಯ ನಿವೃತ್ತಿ

ತುಮಕೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ 3ಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ರಾಜಕೀಯ ನಿವೃತ್ತಿ ಹೊಂದುವುದಾಗಿ ಜಿಲ್ಲಾ ಕಾಂಗ್ರೆಸ್ ಪ್ರಭಾವಿ ನಾಯಕ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಸವಾಲು ಹಾಕಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರ ಸೇರಿ ಜೆಡಿಎಸ್​ಗೆ 8-12-16 ಹೀಗೆ ಎಷ್ಟೇ ಸೀಟು ಬಿಟ್ಟು ಕೊಟ್ಟರೂ ಗೆಲ್ಲೋದು 2-3 ಸೀಟು ಅಷ್ಟೇ. ಹಾಲಿ ಸಂಸದರ ಕ್ಷೇತ್ರ ತ್ಯಾಗ ಮಾಡುವುದಿಲ್ಲವೆಂದು ಹೈಕಮಾಂಡ್​ಗೆ ಸ್ಪಷ್ಟವಾಗಿ ಹೇಳಿದ್ದೇವೆ. ಸ್ಥಾನ ಹಂಚಿಕೆ ವಿಚಾರದಲ್ಲಿ ಇನ್ನೂ ಕಾಂಗ್ರೆಸ್ ಅಂತಿಮ ನಿರ್ಣಯ ಮಾಡಿಲ್ಲ. ಮಾ.16ರಂದು ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಮಂಡ್ಯ, ಹಾಸನದಲ್ಲೂ ಜೆಡಿಎಸ್ ಗೆಲುವು ಸುಲಭವಲ್ಲ. ರಾಜಕೀಯದಲ್ಲಿ ನಾವೇನೂ ಸನ್ಯಾಸಿಗಳಲ್ಲ. ಹಾಸನ, ಮಂಡ್ಯ, ಬೆಂಗಳೂರು ನಗರದ ರಾಜಕೀಯ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದೇವೆ. ನಮ್ಮ ಅನಿಸಿಕೆ ಕಾರ್ಯಗತ ಮಾಡೇ ತೀರುತ್ತೇವೆ ಎಂದು ಜೆಡಿಎಸ್ ಸೋಲಿಸಲು ರಣತಂತ್ರ ರೂಪಿಸುತ್ತಿರುವುದಾಗಿ ಪರೋಕ್ಷವಾಗಿ ಹೇಳಿದರು.

ಕಾಂಗ್ರೆಸ್ ಉಳಿವಿಗೆ ನನ್ನ ಸ್ಪರ್ಧೆ: ಹಾಲಿ ಕಾಂಗ್ರೆಸ್ ಸಂಸದರಿರುವ ಕ್ಷೇತ್ರ ತುಮಕೂರನ್ನು ಜೆಡಿಎಸ್​ಗೆ ಬಿಟ್ಟು ಕೊಟ್ಟರೆ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ನನ್ನ ಸ್ಪರ್ಧೆ ಕಾಂಗ್ರೆಸ್ ಉಳಿವಿಗೋಸ್ಕರ ಎಂದು ಕೆ.ಎನ್.ರಾಜಣ್ಣ ಹೇಳಿದರು.

ದೇವೇಗೌಡರನ್ನು ಪ್ರಧಾನಿ ಮಾಡಿದ್ದರಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿತ್ತು. ಈಗ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿ ಮತ್ತೊಮ್ಮೆ ಹಿನ್ನಡೆ ಅನುಭವಿಸುತ್ತಿದೆ. ಜೆಡಿಎಸ್​ನವರನ್ನು ಹೀಗೆ ಬಿಟ್ಟರೆ ಕಾಂಗ್ರೆಸ್ ಪೂರ್ಣ ನಿರ್ನಾಮ ಆಗಲಿದೆ. ಹಾಗಾಗಿ ಪಕ್ಷ ಉಳಿಸಲು ಏನು ಮಾಡಬೇಕು ಅದನ್ನೆಲ್ಲ ಮಾಡುತ್ತೇನೆ ಎಂದರು.

ಕಣ್ಣೀರಿಗೆ ದೇವೇಗೌಡರ ಕುಟುಂಬ ಹೆಸರುವಾಸಿ. ಅವರಿಗೆ ಅದೇ ಬಂಡವಾಳ. ಅಂತಹ ಕಣ್ಣೀರಿಗೆ ಜನ ಕರಗುವುದಿಲ್ಲ. ಇವರ ಕುಟುಂಬ ರಾಜಕಾರಣದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು.

| ಕೆ.ಎನ್.ರಾಜಣ್ಣ ಮಾಜಿ ಶಾಸಕ

ದೇವೇಗೌಡರು ಖಳನಾಯಕ !: ಸಂಸದ ಮುದ್ದಹನುಮೇಗೌಡ ಒಕ್ಕಲಿಗರಲ್ವಾ ಅಥವಾ ದೊಕ್ಕಲಿಗನಾ? ಇದು ದೇವೇಗೌಡರಿಗೆ ಗೊತ್ತಾಗಿಲ್ವ. ಮೊಮ್ಮಕ್ಕಳನ್ನು ಬೆಳೆಸಲು ಬೇರೆ ಒಕ್ಕಲಿಗರನ್ನು ತುಳಿದ ದೇವೇಗೌಡರು ಆ ಸಮಾಜದಲ್ಲೇ ಖಳನಾಯಕರಾಗಿದ್ದಾರೆ ಎಂದು ಕೆ.ಎನ್.ರಾಜಣ್ಣ ಆಕ್ರೋಶ ಹೊರಹಾಕಿದರು.