ಜೆಡಿಎಸ್ ಗೂಂಡಾ ವರ್ತನೆಗೆ ಬಿಜೆಪಿ ಖಂಡನೆ

ಯಲ್ಲಾಪುರ: ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಮನೆಯ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಿ, ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಗೂಂಡಾ ಸಂಸ್ಕೃತಿಯನ್ನು ಬಿಜೆಪಿ ರಾಜ್ಯ ವಕ್ತಾರ ಪ್ರಮೋದ ಹೆಗಡೆ ಖಂಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ನಾಯಕತ್ವದಲ್ಲಿ ನಡೆಯುತ್ತಿರುವ ತಾಲಿಬಾನ್ ಮಾದರಿಯ ಘಟನೆ ಇದೇ ಮೊದಲಲ್ಲ. ಈ ಹಿಂದೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮೇಲೆಯೂ ಹಾಸನದಲ್ಲಿ ಕಲ್ಲು ತೂರಲಾಗಿತ್ತು. ದೇವೇಗೌಡರು ಪ್ರಧಾನಿಯಾಗಿದ್ದಾಗ ರಾಮಕೃಷ್ಣ ಹೆಗಡೆ ಅವರನ್ನು ಪಕ್ಷದಿಂದ ತೆಗೆಯಲಾಗಿತ್ತು. 1994 ರಲ್ಲಿ ವಿಧಾನಸೌಧದಲ್ಲಿ ರಾಮಕೃಷ್ಣ ಹೆಗಡೆ ಅವರ ಮೇಲೆ ಚಪ್ಪಲಿ ತೂರಿ ಹಲ್ಲೆ ನಡೆಸಲಾಗಿತ್ತು. ಅದರಂತೆ ಎಂಎಲ್​ಸಿ ಬಿ.ಜೆ. ಪುಟ್ಟಸ್ವಾಮಿ ಅವರ ಮನೆಯ ಮೇಲೆ ಕಲ್ಲು ತೂರಿ ಗಾಜು ಒಡೆಯಲಾಗಿತ್ತು. ಅದೇ ರೀತಿ ಈಗ ನಡೆದಿರುವ ಕ್ರೌರ್ಯಕ್ಕೆ ಜೆಡಿಎಸ್ ಪಕ್ಷದ ದೇವೇಗೌಡರು, ರೇವಣ್ಣ, ಕುಮಾರಸ್ವಾಮಿ ಅವರೇ ಹೊಣೆ ಎಂದರು.

ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುವ ವಿಷಯದಲ್ಲಿ ಜೆಡಿಎಸ್​ಗೆ ನೈತಿಕತೆ ಇಲ್ಲ. ವಿಜು ಗೌಡರನ್ನು ಎಂಎಲ್​ಸಿ ಮಾಡಲು 25 ಕೋಟಿ ರೂ. ಕೇಳಿರುವ ಬಗ್ಗರ ಆಧಾರವಿದೆ. ಸ್ವತಃ ಪ್ರಜ್ವಲ್ ರೇವಣ್ಣ ಅವರೇ ಜೆಡಿಎಸ್​ನಲ್ಲಿ ಸೂಟಕೇಸ್ ಇದ್ದವರಿಗೆ ಮಣೆ ಹಾಕಲಾಗುತ್ತದೆ ಎಂದು ಹೇಳಿದ್ದರು. ಅವರೇ ಹೇಳಿದ ಮೇಲೆ ಮತ್ತೆ ಬೇರೆ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದರು.

ಕಾರವಾರ ವರದಿ: ಹಾಸನದಲ್ಲಿ ಶಾಸಕ ಪ್ರೀತಂ ಗೌಡ ಅವರ ಮನೆ ಮೇಲೆ ದಾಳಿ ನಡೆಸಿದ ಜೆಡಿಎಸ್ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಕಾರವಾರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ವಕ್ತಾರ ರಾಜೇಶ ನಾಯಕ, ರಾಜ್ಯ ಯುವಮೋರ್ಚಾ ಸದಸ್ಯ ಗುರು ಪ್ರಸಾದ ಹೆಗಡೆ, ನಗರ ಅಧ್ಯಕ್ಷ ಮನೋಜ್ ಭಟ್, ಭಾಸ್ಕರ ನಾರ್ವೆಕರ್, ನಾಗೇಶ ಕುರ್ಡೆಕರ್, ಸುನೀಲ ತಾಮಸೆ, ವಿನಾಯಕ ದುದಾಳ್ಕರ, ಉದಯ ಶೆಟ್ಟಿ, ಪ್ರದೀಪ ಗುನಗಿ, ರವಿ ಅಂಕೋಲೆಕರ, ದಿಗಂಬರ ಹಳದನಕರ ಇತರರಿದ್ದರು.