ಜೆಡಿಎಸ್-ಕಾಂಗ್ರೆಸ್​ನವರು ಮಕ್ಕಳ ಕಳ್ಳರಿದ್ದಂತೆ: ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ: ಜೆಡಿಎಸ್-ಕಾಂಗ್ರೆಸ್​ನವರು ಮಕ್ಕಳ ಕಳ್ಳರಿದ್ದಂತೆ. ಅವರಿಂದ ಪಾರು ಮಾಡಲು ನಮ್ಮ ಶಾಸಕರನ್ನು ರೆಸಾರ್ಟ್​ಗೆ ಕರೆದೊಯ್ಯಲಾಯಿತು. ನಾವು ನಮ್ಮ 104 ಶಾಸಕರನ್ನು ಕರೆದೊಯ್ದಿದ್ದು ನಿಜ. ಅದನ್ನು ಕೇಳಲು ಇವರ್ಯಾರು ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಶಾಸಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ನಮ್ಮ ಶಾಸಕರನ್ನು ಮೋಜು ಮಸ್ತಿಗೆ ಕರೆದೊಯ್ಯಲಿಲ್ಲ. ಲೋಕಸಭಾ ಚುನಾವಣೆ, ಪಕ್ಷ ಸಂಘಟನೆ ಕುರಿತು ರ್ಚಚಿಸಲು ಕರೆದೊಯ್ಯಲಾಗಿತ್ತು. ನಾಡುನುಡಿ ಸಂಸ್ಕೃತಿ ಬಗ್ಗೆಯೂ ರ್ಚಚಿಸಲಾಯಿತು. ಆದರೆ ಕಾಂಗ್ರೆಸ್​ನವರಂತೆ ಕಿತ್ತಾಡಿಕೊಳ್ಳಲು ಹೋಗಿಲ್ಲ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್​ನಲ್ಲಿ ಡಾ. ಜಿ. ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರಂತಹ ಒಳ್ಳೆಯವರೂ ಇದ್ದಾರೆ. ಆದರೆ ಸಿದ್ದರಾಮಯ್ಯ ಬಾಯಿಗೆ ಬಂದಂತೆ ನಾಲಿಗೆ ಹರಿಬಿಡುತ್ತಿದ್ದಾರೆ. ಕುಡುಕರಿಗೂ ಅವರಿಗೂ ವ್ಯತ್ಯಾಸವೇ ಇಲ್ಲದಂತಾಗಿದೆ. ಇನ್ನು ಮುಂದಾದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿಟ್ಟುಕೊಳ್ಳಲಿ ಎಂದರು.

ಸಿದ್ದರಾಮಯ್ಯ ಪಕ್ಷಾಂತರದ ಜನಕರಾಗಿದ್ದು, ಜೆಡಿಎಸ್​ನಿಂದ ಕಾಂಗ್ರೆಸ್​ಗೆ ಬರುವಾಗ ಎಷ್ಟು ಹಣ ಪಡೆದಿದ್ದರು ಎಂಬುದನ್ನು ಬಹಿರಂಗ ಪಡಿಸಬೇಕು ಹಾಗೂ ಸಿಎಂ ಕುಮಾರಸ್ವಾಮಿ ಆಳಂದ ಶಾಸಕ ಸುಭಾಷ್ ಸಿಂಗ್​ಗೆ ಹಣದ ಆಮೀಷವೊಡ್ಡಿಲ್ಲ ಎನ್ನುವುದನ್ನು ಸಾಬೀತುಪಡಿಸಬೇಕು ಎಂದು ಸವಾಲು ಹಾಕಿದರು.

ಕೊಲೆ ಯತ್ನ ಕೇಸ್ ದಾಖಲಿಸಲಿ: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಶಾಸಕ ಗಣೇಶ್ ಮೇಲೆ ಕೇಸ್ ದಾಖಲಿಸಬೇಕು. ಆದರೆ ಕಾಂಗ್ರೆಸ್​ನ ಒಬ್ಬೊಬ್ಬರು ಒಂದೊಂದು ಸುಳ್ಳು ಹೇಳುತ್ತಿದ್ದಾರೆ. ಆನಂದ್ ಸಿಂಗ್ ಮದುವೆಗೆ ಹೋಗಿದ್ದಾರೆಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರೆ, ಗೃಹ ಸಚಿವರು ಇನ್ನೊಂದು ಹಾಗೂ ಸಿದ್ದರಾಮಯ್ಯ ಮತ್ತೊಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಶಾಸಕರ ನಡುವೆ ಮಾರಾಮಾರಿ ನಡೆದ್ದರೂ ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ರೆಸಾರ್ಟ್​ನಲ್ಲಿ ಶಾಸಕರ ಮೇಲೆ ಹಲ್ಲೆ ನಡೆದರೂ ಗೃಹ ಮಂತ್ರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು ಸಾಮಾನ್ಯರ ಮೇಲೆ ಈ ರೀತಿ ಆದರೆ ಕ್ರಮ ಕೈಗೊಳ್ಳುತ್ತಾರಾ ಎಂದು ಪ್ರಶ್ನಿಸಿದರು. ಸರ್ಕಾರ ಇನ್ನೂ ಜೀವಂತವಾಗಿದ್ದರೆ ತಕ್ಷಣ ಆನಂದ್​ಸಿಂಗ್ ಮೇಲೆ ಹಲ್ಲೆ ಮಾಡಿದ ಶಾಸಕ ಗಣೇಶ್ ವಿರುದ್ಧ ಕೊಲೆ ಯತ್ನ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.

ಬರ ಅಧ್ಯಯನಕ್ಕೆ ಸರ್ಕಾರದ ತಾತ್ಸಾರ: ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ಬರ ನಿರ್ವಹಣೆ ಮಾಡುವಲ್ಲಿ ಸಮ್ಮಿಶ್ರ ಸರ್ಕಾರ ತಾತ್ಸಾರ ತೋರುತ್ತಿದೆ. ಖುರ್ಚಿ ಉಳಿಸಿಕೊಳ್ಳಲು ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ. ಸಿಎಂ ತಮ್ಮ ಜವಾಬ್ದಾರಿ ಮರೆತಿದ್ದಾರೆ. ಸಿದ್ದರಾಮಯ್ಯ ಅವರಿಗೂ ಸರ್ಕಾರ ಉಳಿಸಿಕೊಳ್ಳುವುದೇ ಚಿಂತೆಯಾಗಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು. ರಾಜ್ಯ ಸರ್ಕಾರ ಕೊಟ್ಟ ಭರವಸೆಗಳನ್ನು ಮರೆತಿದೆ. ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದೆ. ಇನ್ಮುಂದೆಯಾದರೂ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷರು ರೈತರ ಸಮಸ್ಯೆಗಳನ್ನು ಆಲಿಸಬೇಕು. ಬರ ಪರಿಶೀಲನೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.