ಜೆಡಿಎಸ್​ಗೆ ಆಪರೇಷನ್ ಭಯವಿಲ್ಲವೇಕೆ?

| ಶಿವಕುಮಾರ ಮೆಣಸಿನಕಾಯಿ

ಬೆಂಗಳೂರು: ಒಂದೆಡೆ ಶಾಸಕರನ್ನು ಸೆಳೆದು ಸರ್ಕಾರ ರಚಿಸುವ ಸಲುವಾಗಿ ಸ್ವತಃ ತನ್ನ ಶಾಸಕರನ್ನೇ ವಾರಗಳ ಕಾಲ ರೆಸಾರ್ಟ್​ನಲ್ಲಿ ಬಂಧಿಯಾಗಿಸಿದ್ದ ಬಿಜೆಪಿ, ಮತ್ತೊಂದೆಡೆ ಪಕ್ಷಾಂತರ ಭೀತಿಯಿಂದ ತನ್ನೆಲ್ಲ ಶಾಸಕರನ್ನು ರೆಸಾರ್ಟ್​ಗೆ ಕರೆದೊಯ್ದು ಗುದ್ದಾಟ ಹಚ್ಚಿರುವ ಕಾಂಗ್ರೆಸ್. ಆದರೆ ಇರುವ 37 ಶಾಸಕರು ಬಿಟ್ಟು ಹೋದಾರೆಂಬ ಭಯವೇ ಇಲ್ಲದೆ ಕೂಲ್ ಕೂಲ್ ಆಗಿರುವ ಜೆಡಿಎಸ್!

ಶನಿವಾರ ರಾತ್ರಿ ಮೈಸೂರಿನ ರೆಸಾರ್ಟ್​ವೊಂದರಲ್ಲಿ ಜೆಡಿಎಸ್​ನ ಕೆಲ ಶಾಸಕರು ಸಭೆ ನಡೆಸಿದ್ದಾರಾದರೂ, 37 ಶಾಸಕರನ್ನು ರೆಸಾರ್ಟ್​ನಲ್ಲಿ ಕೂಡಿ ಹಾಕುವ ಪ್ರಯತ್ನ ಮಾಡಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಕೂಡ ಶಾಸಕರನ್ನು ರೆಸಾರ್ಟ್​ಗೆ ಕರೆದೊಯ್ಯುವ ಚಿಂತನೆ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಕೈಕೊಟ್ಟರೆ ಗೆಲ್ಲಲ್ಲ!: ಜೆಡಿಎಸ್​ನಿಂದಲೂ ಕೆಲವು ಶಾಸಕರು ಬಿಜೆಪಿಗೆ ‘ಮಂಕಿ ಜಂಪ್’ ಮಾಡುವ ಸಾಧ್ಯತೆಗಳು ಇಲ್ಲವೇ ಇಲ್ಲ ಎಂದೇನಿಲ್ಲ. ಒಂದೊಮ್ಮೆ ರಾಜಿನಾಮೆ ಕೊಟ್ಟು ಬಿಜೆಪಿಗೆ ಹೋದರೆ ಮುಂದೆ ಗೆಲುವು ಅಷ್ಟು ಸುಲಭವಲ್ಲ ಎಂಬುದೇ ಜೆಡಿಎಸ್ ಶಾಸಕರು ಹಿಂದೇಟು ಹಾಕಲು ಬಹುಮುಖ್ಯ ಕಾರಣ. ಯಾಕೆಂದರೆ ಜೆಡಿಎಸ್​ನಿಂದ ಗೆದ್ದಿರುವ 37 ಶಾಸಕರ ಪೈಕಿ 31 ಮಂದಿ ಹಳೇ ಮೈಸೂರು ಭಾಗದವರು. ನಾಗಠಾಣ, ಸಿಂಧಗಿ, ಬೀದರ್ ದಕ್ಷಿಣ, ಗುರುಮಿಟ್ಕಲ್, ಮಾನ್ವಿ ಹಾಗೂ ಸಿಂಧನೂರು ಕ್ಷೇತ್ರದಿಂದ ಆಯ್ಕೆಯಾಗಿರುವ 6 ಮಂದಿ ಮಾತ್ರ ಉತ್ತರ ಕರ್ನಾಟಕದವರು.

ಹಳೇ ಮೈಸೂರು ಭಾಗದ ಶಾಸಕರಲ್ಲಿ ಒಬ್ಬಿಬ್ಬರ ಹೆಸರು ಆಪರೇಷನ್ ಕಮಲದಲ್ಲಿ ಕೇಳಿ ಬಂದಿದ್ದರೂ ಅವರು ಪಕ್ಷ ಬಿಟ್ಟು ಹೋಗುವ ಧೈರ್ಯ ಮಾಡುವುದಿಲ್ಲ ಎಂಬುದು ಪಕ್ಷದ ದೃಢವಾದ ನಂಬಿಕೆ. ಎಚ್.ಡಿ.ದೇವೇಗೌಡರ ಪ್ರಭಾವ, ಎಚ್.ಡಿ.ಕುಮಾರಸ್ವಾಮಿ ತಂತ್ರಗಾರಿಕೆ ಹಾಗೂ ಬಹುಸಂಖ್ಯಾತ ಒಕ್ಕಲಿಗ ಸಮುದಾಯದ ಬೆಂಬಲ.. ಈ ಮೂರು ಕಾರಣಗಳಿಂದಾಗಿ ಜೆಡಿಎಸ್​ನಿಂದ ಹೊರಹೋದರೆ ಗೆಲುವು ಕಷ್ಟ ಎಂಬುದು ಶಾಸಕರ ನಿಜವಾದ ಆತಂಕವಾಗಿದ್ದು, ಪಕ್ಷ ಬಿಡುವ ಸ್ಥಿತಿಯಲ್ಲಿಲ್ಲ.

ಉತ್ತರ ಕರ್ನಾಟಕದ ಆರು ಶಾಸಕರಲ್ಲಿ ಮೂವರು ಸಚಿವರಾಗಿದ್ದಾರೆ. ಬಂಡೆಪ್ಪ ಖಾಶೆಂಪುರ, ಎಂ.ಸಿ.ಮನಗೂಳಿ ಹಾಗೂ ವೆಂಕಟರಾವ್ ನಾಡಗೌಡ ಸಂಪುಟದಲ್ಲಿ ಇರಲಿ, ಇಲ್ಲದಿರಲಿ ಪಕ್ಷ ಬಿಡುವುದಿಲ್ಲ. ಇನ್ನುಳಿದ ದೇವಾನಂದ ಚವಾಣ, ನಾಗನಗೌಡ ಕಂದಕೂರ್ ಹಾಗೂ ರಾಜಾ ವೆಂಕಟಪ್ಪ ನಾಯಕ್ ಪಕ್ಷ ಬಿಡಲು ಮುಂದಾದರೂ ಸ್ಥಳೀಯ ರಾಜಕಾರಣ ಅವರಿಗೆ ಪೂರಕವಾಗಿಲ್ಲ. ಈಗಾಗಲೇ ಆಯಾ ಕ್ಷೇತ್ರಗಳಲ್ಲಿ ಬಿಜೆಪಿ ಬೇರೂರಿದ್ದು, ಆಕಸ್ಮಿಕ ಎಂಬಂತೆ ಗೆದ್ದಿದ್ದಾರೆ ಎಂದು ಸ್ವತಃ ಶಾಸಕರೇ ನಂಬಿಕೊಂಡಿದ್ದಾರೆ. ಹೀಗಾಗಿ ಬಿಜೆಪಿಗೆ ಹೋದರೆ, ಮುಂದಿನ ಬಾರಿ ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಗೆಲುವು ಸುಲಭದ ತುತ್ತಲ್ಲ.

ಮುಜುಗರ ತಪ್ಪಿಸಿಕೊಳ್ಳುವ ಯತ್ನ

ಒಂದೊಮ್ಮೆ ಜೆಡಿಎಸ್ ಶಾಸಕರು ಪಕ್ಷ ತೊರೆದರೆ ರಾಜಕೀಯ ಭವಿಷ್ಯ ಡೋಲಾಯಮಾನ ಎಂಬಂತೆ ಇರುವುದರಿಂದ ಪಕ್ಷದ ವರಿಷ್ಠರು ಯಾರನ್ನೂ ರೆಸಾರ್ಟ್​ಗೆ ಕರೆದೊಯ್ದು ದಿಗ್ಬಂಧನ ವಿಧಿಸುತ್ತಿಲ್ಲ. ಒಂದು ವೇಳೆ ರೆಸಾರ್ಟ್​ಗೆ ಎಲ್ಲರನ್ನೂ ಕರೆದರೆ ಒಬ್ಬಿಬ್ಬರು ಕೈಕೊಟ್ಟರೆ, ಕಾಂಗ್ರೆಸ್ ರೀತಿ ಪಕ್ಷವೇ ಅದನ್ನು ಜಗಜ್ಜಾಹೀರು ಮಾಡಿದಂತೆ ಆಗುತ್ತದೆ. ಕನಿಷ್ಠ ಪಕ್ಷ ಆ ಮುಜುಗರವಾದರೂ ತಪು್ಪತ್ತದೆ ಎಂಬ ಕಾರಣಕ್ಕೂ ರೆಸಾರ್ಟ್ ಬುಕ್ ಮಾಡುವ ಗೋಜಿಗೆ ಹೋಗಿಲ್ಲ ಎನ್ನುತ್ತವೆ ಪಕ್ಷದ ಮೂಲಗಳು.

Leave a Reply

Your email address will not be published. Required fields are marked *