ಎಂ.ಕೆ.ಹುಬ್ಬಳ್ಳಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ತಂದರೆ, ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲ ಮನ್ನಾ, ಗ್ರಾಪಂ ಮಟ್ಟದಲ್ಲೊಂದು ಹೈಟೆಕ್ ಆಸ್ಪತ್ರೆ ಸೇರಿ ಬಡಜನರ ಉದ್ಧಾರಕ್ಕೆ ಬೇಕಿರುವ ಅಗತ್ಯ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಖಾನಾಪುರ ತಾಲೂಕಿನ ಇಟಗಿ ಗ್ರಾಮದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜೆಡಿಎಸ್ ಪಂಚರತ್ನ ರಥಯಾತ್ರೆ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು. 75 ವರ್ಷದಲ್ಲಿ ಅಧಿಕಾರ ನಡೆಸಿದ ಸರ್ಕಾರಗಳು ಬಡವರ ಬಗ್ಗೆ ಕಾಳಜಿ ಮಾಡಲಿಲ್ಲ. ಅಪಾರ ಮಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಕುಸಿದ ಬಡವರ ಮನೆಗಳಿಗೆ ಬಿಜೆಪಿ ಸರ್ಕಾರ ಘೋಷಿಸಿದ 5 ಲಕ್ಷ ರೂ.ಪರಿಹಾರ ಮುಟ್ಟಿಲ್ಲ. ಕೋವಿಡ್ ವೇಳೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರ 1 ಲಕ್ಷ ರೂ. ಘೋಷಿಸಿದ ಪರಿಹಾರವನ್ನು ಸರಿಯಾಗಿ ನೀಡಿಲ್ಲ ಎಂದು ಆರೋಪಿಸಿದರು. ರಾಜ್ಯದ ಜನರು ಪಾವತಿಸಿದ ತೆರಿಗೆ ಹಣ ದುರ್ಬಳಕೆ ಮಾಡಿದ ಸರ್ಕಾರದ ಬಗ್ಗೆ ಜನರಿಗೆ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಜನರ ಹಿತ ಬಯಸದ ಸರ್ಕಾರಗಳಿಗೆ ಜನರು ಈ ಬಾರಿ ಸೋಲಿನ ಉತ್ತರ ನೀಡಬೇಕು. ರಾಜ್ಯದ ಜನರ ಹಿತ ಮತ್ತು ಉದ್ಧಾರಕ್ಕಾಗಿ ಪಂಚರತ್ನ ಯೋಜನೆ ಜಾರಿಗೆ ತರಲು ಮುಂದಾಗಿರುವ ಜೆಡಿಎಸ್ ಪಕ್ಷಕ್ಕೆ ಜನರು ಆಶೀರ್ವದಿಸಬೇಕು. 65 ವರ್ಷ ಮೇಲ್ಪಟ್ಟ ಹಿರಿಯರಿಗೆ ಪ್ರತಿ ತಿಂಗಳು 5 ಸಾವಿರ ರೂ. ಗೌರವ ಧನ ಸೇರಿ ಈಗಿರುವ ವಿವಿಧ ಪಿಂಚಣಿ, ಗೌರವ ಧನ ಹೆಚ್ಚಳ ಮಾಡಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರ ಇಲ್ಲದಿದ್ದರೂ ಖಾನಾಪುರ ತಾಲೂಕಿನಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಬಡವರ ಹಾಗೂ ರೈತರ ಸೇವೆ ಮಾಡುತ್ತಿರುವ ನಮ್ಮ ಪಕ್ಷದ ಅಭ್ಯರ್ಥಿ ನಾಸೀರ್ ಬಾಗವಾನ ಅವರು, ಬರುವ ವಿಧಾಸಭಾ ಚುನಾವಣೆಯಲ್ಲಿ ಶಕ್ತಿ ತುಂಬಿ ಹೆಚ್ಚಿನ ಸೇವೆಗೆ ಆಶೀರ್ವದಿಸಬೇಕು. ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಕೈಜೊಡಿಸಬೇಕು. ನಾಸೀರ್ ಬಾಗವಾನ ಅವರನ್ನು ಅಧಿಕಾರಕ್ಕೆ ತಂದರೆ ಪಂಚರತ್ನ ಯೋಜನೆಯಡಿ ಖಾನಾಪುರ ತಾಲೂಕಿನಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನ, ಯುವಕರಿಗೆ ಉದ್ಯೋಗ ಸೃಷ್ಟಿ, ಮೆಣಸಿನಕಾಯಿ ಬೆಳೆಗಾರ ರೈತರ ಅಭಿವೃದ್ಧಿಗಾಗಿ ಕಾರ್ಖಾನೆ ಸ್ಥಾಪನೆ ಸೇರಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಅಭ್ಯರ್ಥಿ ನಾಸೀರ್ ಬಾಗವಾನ ಮಾತನಾಡಿ, ಖಾನಾಪುರ ತಾಲೂಕಿನಲ್ಲಿ ಹತ್ತಾರು ನದಿಗಳು ಹುಟ್ಟಿ ಹರಿದರೂ ಇಲ್ಲಿನ ರೈತರಿಗೆ ನೀರಾವರಿ ಸೌಲಭ್ಯ ಸಿಕ್ಕಿಲ್ಲ. ಅಧಿಕಾರದಲ್ಲಿರುವ ಶಾಸಕರ ಆಡಳಿತ ಜನರಿಗೆ ಅರ್ಥವಾಗಿದೆ. ಸೀರೆ, ತಾಟು, ಡಬ್ಬಿಗೆ ನಮ್ಮ ಜನ ಮರುಳಾಗುವವರಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯೊಂದಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವ ನನಗೆ ಜನರು ಅಧಿಕಾರ ನೀಡಬೇಕೆಂದರು. ಕ್ಷೇತ್ರದಲ್ಲಿ ಬಡ ಜನರ ಹಾಗೂ ರೈತರ ಸೇವೆಯ ಜತೆಗೆ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುತ್ತಿರುವ ನನಗೆ ಕ್ಷೇತ್ರದ ಅಭಿವೃದ್ಧಿಯೊಂದೆ ಗುರಿಯಾಗಿದೆ ಎಂದರು ಸ್ಥಳೀಯ ಗ್ರಾಮದೇವಿ ದೇವಸ್ಥಾನ ಕಮಿಟಿ ಹಾಗೂ ಹಲವರಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸತ್ಕಾರ ನೆರವೇರಿತು. ಕಾರ್ಯಕ್ರಮದಲ್ಲಿ ಸಚ್ಚಿದಾನಂದ ಖೋತ, ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಖಾನಾಪುರ ಬ್ಲಾಕ್ ಅಧ್ಯಕ್ಷ ಎಂ.ಎಂ.ಸಾಹುಕಾರ,
ಜೆಡಿಎಸ್ ಯುವ ಮುಖಂಡ ರಮೀಜ್ ಬಾಗವಾನ, ಜಿಲ್ಲಾ ಉಪಾಧ್ಯಕ್ಷ ಲಾಯಕಅಲಿ ಬಿಚ್ಚುನವರ, ವಿಶಾಲ ಪಾಟೀಲ, ಪೈಜುಲ್ಲಾ ಮಾಡಿವಾಲೆ, ಈರಯ್ಯ ಹಿರೇಮಠ, ಶಿವಮೂರ್ತಿ ಹಿರೇಮಠ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಪದಾಧಿಕಾರಿಗಳು, ಮಹಿಳೆಯರು ಹಾಗೂ ಅಭಿಮಾನಿಗಳು ಇದ್ದರು. ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಿಂದ ಆರಂಭಗೊಂಡ ಜೆಡಿಎಸ್ ಪಂಚರತ್ನ ರಥಯಾತ್ರೆ ತಾಲೂಕಿನ ಬೀಡಿ, ಗಂದಿಗವಾಡ, ತೊಲಗಿ, ಬುರಣಕಿ, ಗುಂಡೆನಟ್ಟಿ, ಹಂದೂರ, ಹುಲಿಕೊತ್ತಲ, ಇಟಗಿ, ಹಿರೇಮುನವಳ್ಳಿ, ಪಾರಿಶ್ವಾಡ, ದೇವಲತ್ತಿಯಲ್ಲಿ ಸಾಗಿತು. ಅಪಾರ ಅಭಿಮಾನಿಗಳು ಪಾಲ್ಗೊಂಡಿದ್ದರು.