ಜೂ.3 ರಂದು ಇವಿಎಂ ಹ್ಯಾಕಥಾನ್

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆ ಬಗ್ಗೆ ರಾಜಕೀಯ ಪಕ್ಷಗಳು ಹಲವು ಆರೋಪಗಳನ್ನು ಮಾಡುತ್ತಿರುವ ಬೆನ್ನಲ್ಲೇ ಇವಿಎಂಗಳನ್ನು ಹ್ಯಾಕ್ ಅಥವಾ ತಿರುಚುವಂತೆ ಚುನಾವಣಾ ಆಯೋಗ ಬಹಿರಂಗ ಸವಾಲು ಹಾಕಿದ್ದು, ಜೂ. 3ರಂದು ಹ್ಯಾಕಥಾನ್ ಆಯೋಜಿಸಿದೆ. ಮುಖ್ಯ ಚುನಾವಣಾ ಆಯುಕ್ತ ಡಾ. ನಸೀಮ್ ಜೈದಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉತ್ತರ ಪ್ರದೇಶ ವಿಧಾನಸಭೆ ಮತ್ತು ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ದೊರೆತ ನಂತರ ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ 13 ರಾಜಕೀಯ ಪಕ್ಷಗಳು ಅನುಮಾನ ವ್ಯಕ್ತಪಡಿಸಿ, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು. ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ವಿಶೇಷ ಅಧಿವೇಶನ ಕರೆದು ಇವಿಎಂಗಳನ್ನು ತಿರುಚಬಹುದೆಂದು (ಟ್ಯಾಂಪರ್) ಪ್ರಾತ್ಯಕ್ಷಿಕೆ ಕೂಡ ನಡೆಸಿತ್ತು. ಬಹಿರಂಗ ಹ್ಯಾಕಥಾನ್ ಆಯೋಜಿಸುವಂತೆ ವಿವಿಧ ರಾಜಕೀಯ ನಾಯಕರು ಚುನಾವಣಾ ಆಯೋಗಕ್ಕೆ ಸವಾಲು ಹಾಕಿದ್ದರು.

ಷರತ್ತುಗಳು ಅನ್ವಯ

ಹ್ಯಾಕಥಾನ್​ನಲ್ಲಿ ಒಂದು ರಾಜಕೀಯ ಪಕ್ಷದಿಂದ ಮೂವರು ಪ್ರತಿನಿಧಿಗಳು ಭಾಗವಹಿಸಬಹುದು. ಈ ತಂಡಕ್ಕೆ ಪಂಚರಾಜ್ಯಗಳ ವಿಧಾನಸಭೆಯಲ್ಲಿ ಬಳಕೆಯಾದ ಇವಿಎಂಗಳಲ್ಲಿ ನಾಲ್ಕುಯಂತ್ರಗಳನ್ನು ನೀಡಲಾಗುವುದು. ಈ ತಂಡವು ಮತದಾನಕ್ಕೆ ಮುನ್ನ ಅಥವಾ ನಂತರ ಇವಿಎಂಗಳನ್ನು ಟ್ಯಾಂಪರ್ ಮಾಡಲು ಸಾಧ್ಯ ಎನ್ನುವುದನ್ನು ತೋರಿಸಬೇಕು. ಇವಿಎಂಗಳ ಬಟನ್​ಗಳನ್ನು ನಿರ್ದಿಷ್ಟ ಕ್ರಮದಲ್ಲಿ ಒತ್ತುವುದರ ಮೂಲಕ ಟ್ಯಾಂಪರ್ ಮಾಡಲು ಸಾಧ್ಯ ಎನ್ನುವುದನ್ನು ತೋರಿಸಬೇಕು, ಇವಿಎಂಗೆ ವೈರ್​ಲೆಸ್ ಚಿಪ್ ಅಥವಾ ಬ್ಲೂಟೂತ್ ಸಂಪರ್ಕ ಸಾಧ್ಯ ಎನ್ನುವುದನ್ನು ಸಾಬೀತು ಮಾಡಬೇಕು. ಆದರೆ, ಇವಿಎಂಗಳ ಬಿಡಿಭಾಗವನ್ನು ಬದಲಿಸಿ ಬೇರೆ ಭಾಗಗಳನ್ನು ಅಳವಡಿಸುವಂತಿಲ್ಲ ಎಂದು ಆಯೋಗ ತಿಳಿಸಿದೆ.

ನಸೀಮ್ ಜೈದಿ ಹೇಳಿದ್ದು…

  • ಇವಿಎಂಗಳಿಗೆ ವೈರಸ್ ದಾಳಿ ಅಸಾಧ್ಯ, ಅದಕ್ಕೆ ವೈಫೈ ಚಿಪ್ ಇಲ್ಲ
  • ಇವಿಎಂಗಳ ಟ್ಯಾಂಪರ್ ಸಾಧ್ಯತೆಯೇ ಇಲ್ಲ
  • ಯಂತ್ರ ತಯಾರಿಕೆ ಸಮಯದಲ್ಲೇ ಟ್ಯಾಂಪರ್​ಗೆ ಅವಕಾಶ ಕಲ್ಪಿಸಲಾಗಿರುತ್ತದೆ ಎಂಬ ಆರೋಪದಲ್ಲಿ ಹುರುಳಿಲ್ಲ
  • ಟ್ಯಾಂಪರ್ ಮಾಡಲು ಸಾಧ್ಯವೆಂದು ಇತ್ತೀಚೆಗೆ ಎಎಪಿ ಪ್ರಾತ್ಯಕ್ಷಿಕೆ ನಡೆಸಿದ ಯಂತ್ರ ಅಸಲಿ ಅಲ್ಲ

Leave a Reply

Your email address will not be published. Required fields are marked *