ಜೂನಿಯರ್ ಹಾಕಿ ವಿಶ್ವಕಪ್​ಗೆ ವೇದಿಕೆ ಸಜ್ಜು

ಗತವೈಭವದ ದಿನಗಳಿಗೆ ಮರಳಲು ಹಂಬಲಿಸುತ್ತಿರುವ ಭಾರತೀಯ ಹಾಕಿಗೆ ಸುವರ್ಣಾವಕಾಶವೊಂದು ಎದುರಾಗಿದೆ. ಡಿಸೆಂಬರ್ 8ರಿಂದ ಉತ್ತರ ಪ್ರದೇಶದ ಲಖನೌದ ಧ್ಯಾನ್ಚಂದ್ ಆಸ್ಟ್ರೋಟರ್ಫ್ ಸ್ಟೇಡಿಯಂನಲ್ಲಿ ನಡೆಯಲಿರುವ 11ನೇ ಆವೃತ್ತಿಯ ಜೂನಿಯರ್ (21 ವಯೋಮಿತಿ) ಹಾಕಿ ವಿಶ್ವಕಪ್, ಆತಿಥೇಯ ಭಾರತ ತಂಡಕ್ಕೆ ಭವ್ಯ ಭವಿಷ್ಯ ಕಟ್ಟುವ ವೇದಿಕೆ ಒದಗಿಸಿಕೊಟ್ಟಿದೆ. 2001ರಲ್ಲಿ ಏಕೈಕ ಬಾರಿ ಕಿರಿಯರ ವಿಶ್ವಕಪ್ ಎತ್ತಿರುವ ಭಾರತ ಇದೀಗ ತವರು ನೆಲದಲ್ಲಿ ಸಾಧನೆ ಪುನರಾರ್ತಿಸುವ ಹಂಬಲದಲ್ಲಿದೆ. ತವರಿನ ಲಾಭವೊಂದೇ ಅಲ್ಲದೆ, ಯುವ ತಂಡದಲ್ಲಿನ ಪ್ರತಿಭಾವಂತ ಆಟಗಾರರ ಬಲದಿಂದಲೂ ಭಾರತ ತಂಡ ಫೇವರಿಟ್ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಹಾಲಿ ಹಾಗೂ ದಾಖಲೆಯ 6 ಬಾರಿಯ ಚಾಂಪಿಯನ್ ಜರ್ಮನಿ ಜತೆಗೆ ಆಸ್ಟ್ರೇಲಿಯಾ, ಅರ್ಜೆಂಟೀನಾ, ನೆದರ್ಲೆಂಡ್ ಪ್ರಬಲ ಸ್ಪರ್ಧೆಯೊಡ್ಡಬಲ್ಲ ತಂಡಗಳಾಗಿವೆ. ಭಾರತ ತಂಡ ಈ ಟೂರ್ನಿಯಲ್ಲಿ ತೋರಲಿರುವ ನಿರ್ವಹಣೆ, ‘ಭಾರತೀಯ ಹಾಕಿ ಸುರಕ್ಷಿತ ಕೈಗಳಲ್ಲಿವೇ’ ಎಂಬ ಕೌತುಕಕ್ಕೂ ಉತ್ತರ ಒದಗಿಸುವ ನಿರೀಕ್ಷೆ ಇದೆ.

 

70 ನಿಮಿಷಗಳ ಪಂದ್ಯ

ಅಂತಾರಾಷ್ಟ್ರೀಯ ಹಾಕಿಯಲ್ಲಿ ಸದ್ಯ ತಲಾ 15 ನಿಮಿಷಗಳ 4 ಕ್ವಾರ್ಟರ್ಗಳಲ್ಲಿ ಪಂದ್ಯ ನಡೆಯುತ್ತಿದೆ. ಆದರೆ ಜೂನಿಯರ್ ವಿಶ್ವಕಪ್ನಲ್ಲಿ ಈ ಹಿಂದಿನ ಪ್ರಕಾರದಂತೆ 35 ನಿಮಿಷಗಳ 2 ಅವಧಿಗಳಲ್ಲಿ ಒಟ್ಟಾರೆ 70 ನಿಮಿಷಗಳ ಪಂದ್ಯ ನಡೆಯಲಿದೆ. ಸೀನಿಯರವ ವಿಭಾಗದಲ್ಲಿ ಆಡಲಾಗುತ್ತಿರುವ ಅಂತಾರಾಷ್ಟ್ರೀಯ ಹಾಕಿಯ ಹೊಸ ಪ್ರಕಾರದ ನಿಯಮಗಳು 2014ರ ಸೆಪ್ಟೆಂಬರ್ನಿಂದ ಜಾರಿಯಲ್ಲಿದ್ದು, 2017ಕ್ಕೆ ಈ ಪ್ರಯೋಗ ಕೊನೆಗೊಳ್ಳಲಿದೆ. ನಂತರದಲ್ಲಿ ಇದರ ಲಾಭ-ನಷ್ಟಗಳನ್ನು ಪರಿಶೀಲಿಸಿ ಈ ಪ್ರಕಾರವನ್ನು ಎಲ್ಲ ಮಟ್ಟದಲ್ಲೂ ಅಳವಡಿಸುವ ಬಗ್ಗೆ ಎಫ್ಐಎಚ್ ನಿರ್ಧಾರಕೈಗೊಳ್ಳಲಿದೆ. ಸದ್ಯ ಜೂನಿಯರ್ ಮಟ್ಟದಲ್ಲಿ ಹಳೆಯ ಪ್ರಕಾರವೇ ಜಾರಿಯಲ್ಲಿರುವುದರಿಂದ ಯುವ ಆಟಗಾರರಿಗೆ ಹೊಂದಿಕೊಳ್ಳುವುದು ಸಮಸ್ಯೆಯೇ ಅಲ್ಲ.

ಗುಂಪುಗಳು

ಎ: ಆಸ್ಟ್ರೇಲಿಯಾ, ದ. ಕೊರಿಯಾ, ಅರ್ಜೆಂಟೀನಾ, ಆಸ್ಟ್ರಿಯಾ.

ಬಿ: ನೆದರ್ಲೆಂಡ್, ಮಲೇಷ್ಯಾ, ಬೆಲ್ಜಿಯಂ, ಈಜಿಪ್ಟ್.

ಸಿ: ನ್ಯೂಜಿಲೆಂಡ್, ಜರ್ಮನಿ, ಸ್ಪೇನ್, ಜಪಾನ್.

ಡಿ: ಭಾರತ, ಇಂಗ್ಲೆಂಡ್, ಕೆನಡ, ದಕ್ಷಿಣ ಆಫ್ರಿಕಾ.

 

ಭಾರತದ ಪಂದ್ಯ

ದಿನಾಂಕ ಎದುರಾಳಿ

ಡಿ. 8 ಕೆನಡ

ಡಿ. 10 ಇಂಗ್ಲೆಂಡ್

ಡಿ. 12 ದಕ್ಷಿಣ ಆಫ್ರಿಕಾ

ಭಾರತ ಹಾಟ್ ಫೇವರಿಟ್

ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ – ಈ ಮಾತನ್ನು ಭಾರತೀಯರಷ್ಟೇ ಹೇಳಿದ್ದರೆ ಹೆಚ್ಚು ನಂಬಿಕೆ ಬರುತ್ತಿರಲಿಲ್ಲ. ಆದರೆ, ಹಾಲಿ ಚಾಂಪಿಯನ್ ಹಾಗೂ ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜರ್ಮನಿ ತಂಡದ ಕೋಚ್ ವ್ಯಾಲೆಂಟೈನ್ ಅಲ್ಟೆನ್ಬರ್ಗ್ ಕೂಡ ಹೇಳಿರುವುದು, ಭಾರತ ತಂಡದ ಮೇಲೆ ಹೆಚ್ಚಿನ ನಿರೀಕ್ಷೆ ಇಡುವಂತೆ ಮಾಡಿದೆ. ಕಳೆದ ಅಕ್ಟೋಬರ್ನಲ್ಲಿ ವಲೆನ್ಸಿಯಾದಲ್ಲಿ ನಡೆದ ಚತುಷ್ಕೋನ ಹಾಕಿ ಟೂರ್ನಿಯ ಫೈನಲ್ನಲ್ಲಿ ಭಾರತ ತಂಡ, ಜರ್ಮನಿಯನ್ನೇ ಸೋಲಿಸಿ ಪ್ರಶಸ್ತಿ ಜಯಿಸಿದ್ದು ಅವರ ಈ ಭೀತಿಗೆ ಪ್ರಮುಖ ಕಾರಣ. ‘ಭಾರತ ಟೂರ್ನಿಯ ಫೇವರಿಟ್ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದೆರಡು ವರ್ಷಗಳಿಂದ ಭಾರತ ಕಠಿಣ ಪರಿಶ್ರಮ ಹಾಕಿದೆ ಎಂದೂ ನನಗೆ ಗೊತ್ತಿದೆ. ನಾಯಕ ಹರ್ಜೀತ್ ಸಿಂಗ್ ಸೇರಿದಂತೆ ತಂಡದ ಎಲ್ಲ ಆಟಗಾರರು ಅಪಾರ ಅನುಭವ ಹೊಂದಿದ್ದಾರೆ. ಹಾಕಿ ಇಂಡಿಯಾ ಲೀಗ್ನಲ್ಲಿ ವಿಶ್ವದ ದಿಗ್ಗಜ ಆಟಗಾರರೊಂದಿಗೆ ಆಡಿರುವುದು ಅವರಿಗೆ ಸಾಕಷ್ಟು ನೆರವಾಗುತ್ತಿದೆ’ ಎಂದಿದ್ದಾರೆ ಅಲ್ಟೆನ್ಬರ್ಗ್.

2001ರಲ್ಲಿ ಇತಿಹಾಸ

1997ರಲ್ಲಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಬಳಿಕ 2001ರ ಜೂ. ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟವೇರುವ ಮೂಲಕ ಭಾರತ ಇತಿಹಾಸ ಬರೆದಿತ್ತು. ಆಸ್ಟ್ರೇಲಿಯಾದ ಹೋಬರ್ಟ್ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್ನಲ್ಲಿ ಭಾರತ 6-1ರಿಂದ ಅರ್ಜೆಂಟೀನಾ ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು. ಈ ಟೂರ್ನಿಯಲ್ಲಿ ಅತ್ಯಧಿಕ 10 ಗೋಲು ಸಿಡಿಸಿದ್ದ ದೀಪಕ್ ಠಾಕೂರ್, ಅತ್ಯುತ್ತಮ ಗೋಲ್ಕೀಪರ್ ಪ್ರಶಸ್ತಿ ಪಡೆದಿದ್ದ ದೇವೇಶ್ ಚೌಹಾಣ್ ಮತ್ತು ಡ್ರ್ಯಾಗ್ ಫ್ಲಿಕ್ ತಜ್ಞ ಜುಗ್ರಾಜ್ ಸಿಂಗ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೇ ತಂಡದಲ್ಲಿದ್ದ ಗಗನ್ ಅಜಿತ್, ಪ್ರಭ್ಜೋತ್ ಸಿಂಗ್, ಇಗ್ನೇಸ್ ಟಿರ್ಕಿ, ವೀರೇನ್ ರಸ್ಕಿನಾ ಮತ್ತು ಕರ್ನಾಟಕದ ಅರ್ಜುನ್ ಹಾಲಪ್ಪ ಬಳಿಕ ಭಾರತ ತಂಡದ ಪರವಾಗಿಯೂ ಮಿಂಚಿದ್ದರು.

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಭಾಗವಹಿಸಲಿರುವ 16 ತಂಡಗಳನ್ನು ತಲಾ 4ರಂತೆ 4 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಮಾದರಿಯಲ್ಲಿ ಡಿ. 12ರವರೆಗೆ ಲೀಗ್ ಹಂತದಲ್ಲಿ ಸೆಣಸಲಿವೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ನಾಕೌಟ್ ಹಂತಕ್ಕೇರಲಿವೆ. ಡಿ. 14ರಂದು ಕ್ವಾರ್ಟರ್ ಫೈನಲ್, 16ರಂದು ಸೆಮಿಫೈನಲ್ ಪಂದ್ಯಗಳು ನಡೆದರೆ, ಡಿ. 18 ರಂದು 3ನೇ ಸ್ಥಾನದ ಪಂದ್ಯ, ಫೈನಲ್ ನಡೆಯಲಿದೆ. ಇದೇ ವೇಳೆ 9-16ರ ಸ್ಥಾನ ನಿರ್ಣಯದ ಪಂದ್ಯಗಳೂ ಸಾಗಲಿವೆ.

sports_3-box

Leave a Reply

Your email address will not be published. Required fields are marked *