ಜು.7ಕ್ಕೆ ಶಿವಮೊಗ್ಗಕ್ಕೆ ಸಚಿವ ಸುರೇಶ್ ಅಂಗಡಿ

ಶಿವಮೊಗ್ಗ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಜುಲೈ ತಿಂಗಳಲ್ಲಿ ಶಿವಮೊಗ್ಗಕ್ಕೆ ಆಗಮಿಸಲಿದ್ದು, ಜಿಲ್ಲೆಯ ರೈಲ್ವೆ ಯೋಜನೆಗಳ ಅನುಷ್ಠಾನ ಕುರಿತು ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ಶಾಸಕ. ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಜಿಲ್ಲೆಯ ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಉನ್ನತ ಅಧಿಕಾರಿಗಳ ತಂಡದೊಂದಿಗೆ ಜು.7 ಮತ್ತು 8ರಂದು ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರ ಕಳೆದ ಬಜೆಟ್​ನಲ್ಲಿ ಫಾರ್ಮ ಪಾರ್ಕ್ ಸ್ಥಾಪನೆ ಘೊಷಣೆ ಮಾಡಿದ್ದು, ಶಿವಮೊಗ್ಗ ಹೊರವಲಯದಲ್ಲಿ ನಿರ್ವಿುಸಲು ಕೇಂದ್ರ ಸಚಿವ ಸದಾನಂದಗೌಡರಿಗೆ ಮನವಿ ಸಲ್ಲಿಸಲಾಗಿದೆ. ಸೋಗಾನೆಯಲ್ಲಿ ಇದಕ್ಕಾಗಿ 200 ಎಕರೆ ಸರ್ಕಾರಿ ಭೂಮಿ ಗುರುತಿಸಲಾಗಿದೆ. ಜು.27ರಂದು ಬೆಂಗಳೂರಿನಲ್ಲಿ ಸಚಿವ ಜಾರ್ಜ್ ಉಪಸ್ಥಿತಿಯಲ್ಲಿ ವಿಶೇಷ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಬಿ.ಎಸ್. ಯಡಿಯೂರಪ್ಪ ಅವರ ಪ್ರಯತ್ನದಿಂದ ಪ್ರಾರಂಭವಾದ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸುವಂತೆ ವಿಮಾನಯಾನ ಸಚಿವ ಹರಿದೀಪ್ ಸಿಂಗ್ ಪುರಿ ಅವರಿಗೆ ಮನವಿ ಸಲ್ಲಿಸಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾಮಗಾರಿ ಮತ್ತೆ ಪ್ರಾರಂಭಿಸುವ ಭರವಸೆ ನೀಡಿದ್ದಾರೆ. ಸೋಗಾನೆಯಲ್ಲಿ ಮುರಾರ್ಜಿ ದೇಸಾಯಿ ಯೋಗ ಸಂಸ್ಥೆ ಪ್ರಾರಂಭಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸುವ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವಂತೆ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ನೀಡಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸದಸ್ಯತ್ವ ಅಭಿಯಾನ ನಡೆಯಲಿದ್ದು ಬಾಗಲಕೋಟೆ ಜಿಲ್ಲೆಗೆ ತಮ್ಮನ್ನು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್, ಕಾರ್ಯದರ್ಶಿ ಬಿ.ಆರ್.ಮಧುಸೂದನ್, ಪಾಲಿಕೆ ಸದಸ್ಯರಾದ ಜ್ಞಾನೇಶ್ವರ್, ಅನಿತಾ ರವಿಶಂಕರ್, ಪ್ರಮುಖರಾದ ಎನ್.ಜೆ.ರಾಜಶೇಖರ್, ಎಂ.ಶಂಕರ್, ಗಾಜನೂರು ಗಣೇಶ್, ಹಿರಣಯ್ಯ, ಅಣ್ಣಪ್ಪ, ರತ್ನಾಕರ ಶೆಣೈ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಪುರಲೆಯಲ್ಲಿ ಎಸ್​ಟಿಪಿ ಘಟಕ:ಪುರಲೆಯಲ್ಲಿ ಎಸ್​ಟಿಪಿ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತವಾಗಿದ್ದು ಸ್ಥಳೀಯರ ಮನವೊಲಿಸಿ ಅಲ್ಲಿಯೆ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಘಟಕ ನಿರ್ವಿುಸಲಾಗುತ್ತಿದ್ದು, ದುರ್ವಾಸನೆ ಬರುವುದಿಲ್ಲ. ಇದು ಆರೋಗ್ಯಕ್ಕೆ ಹಾನಿಕಾರಕವೂ ಅಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ . ಪುರಲೆಯಲ್ಲಿ ಎಸ್​ಟಿಪಿ ಘಟಕ ನಿರ್ಮಾಣ ಕೈ ಬಿಟ್ಟು ಬೇರೆಡೆ ಸ್ಥಳ ಗುರುತಿಸಿ ಯೋಜನೆ ಸಿದ್ಧಪಡಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ಹೇಳಿದರು.

ಕಮಿಷನ್ ಏಜೆಂಟರ ಅಸೋಸಿಯೇಷನ್: ಶಿವಮೊಗ್ಗ: ರಾಜ್ಯದಲ್ಲಿರುವುದು ಕಾಂಗ್ರೆಸ್ ಪಕ್ಷವಲ್ಲ. ಅದು ಕಮಿಷನ್ ಏಜೆಂಟರ ಅಸೋಸಿಯೇಷನ್ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.

ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಕಾಮಗಾರಿಗಳಲ್ಲಿ ಕಮಿಷನ್ ಪಡೆಯುತ್ತಿದ್ದಾರೆ ಎಂದು ಅವರದೇ ಪಕ್ಷದ ಶಾಸಕರು ಆರೋಪಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಕಮಿಷನ್ ಏಜೆಂಟರ ಅಸೋಸಿಯೇಷನ್ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಮೈತ್ರಿ ಸರ್ಕಾರಕ್ಕೆ ಸಮನ್ವಯ ಸಮಿತಿ ಇದೆಯೇ? ಅದು ಕೆಲಸ ಮಾಡುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಸಿದ್ದರಾಮಯ್ಯ ದಾದಾಗಿರಿ ಮಾಡುತ್ತಿದ್ದಾರೆ. ಕೇವಲ ರೋಷನ್ ಬೇಗ್ ವಿರುದ್ಧ ಶಿಸ್ತುಕ್ರಮ ಜರುಗಿಸಿ ಕಾಂಗ್ರೆಸ್ ನಾಯಕರು ಸುಮ್ಮನಾಗಿದ್ದಾರೆ. ಲೋಕಸಭೆ ಚುನಾವಣಾ ಮೈತ್ರಿಗೆ ಹಲವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಸೋಲಿಗೆ ಮೈತ್ರಿಯೇ ಕಾರಣ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ. ಇವರೆಲ್ಲರ ವಿರುದ್ಧ ಏಕೆ ಕ್ರಮ ಜರುಗಿಸುತ್ತಿಲ್ಲ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *