ಶಿರಸಿ: ಗುಡ್ಡ ಕುಸಿತದ ಆತಂಕದಲ್ಲಿ ಬದುಕುತ್ತಿರುವ ಇಲ್ಲಿನ ಬಾಳೆಕಾಯಿಮನೆ ಗ್ರಾಮದ ಜಾಜಿಗುಡ್ಡೆ ಹಾಗೂ ತುಳಗೇರಿ ಮಜರೆಗಳ ನಿವಾಸಿಗಳ ಬದುಕು ಎರಡು ಅಲಗಿನ ಕತ್ತಿಯ ನಡುವೆ ಸಿಲುಕಿದಂತಾಗಿದೆ. ಗುಡ್ಡ ಕುಸಿತದ ಸಾಧ್ಯತೆ ಕಾರಣ ಸ್ಥಳಾಂತರಗೊಂಡರೆ ಬೇರೆಡೆ ಬದುಕು ಕಟ್ಟಿಕೊಳ್ಳುವುದು ದುಸ್ತರವಾಗಲಿದೆ. ಹಾಗೆಂದು, ಇಲ್ಲಿಯೇ ಉಳಿದುಕೊಂಡರೆ ಜೀವವನ್ನೇ ಪಣಕ್ಕೆ ಒಡ್ಡಬೇಕಾದ ದುಸ್ಥಿತಿ.
ಹೌದು, ಕಳೆದ ಮಳೆಗಾಲದ ಅಬ್ಬರದಿಂದ ಜಾಜಿಗುಡ್ಡೆಯ ಒಂದಿಷ್ಟು ಭಾಗದ ಗುಡ್ಡ ಕುಸಿದು ನಷ್ಟಕ್ಕೆ ಕಾರಣವಾಗಿತ್ತು. ಅಂಚಿನ ಮನೆಗಳಿಗೆ ರಾಡಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಗುಡ್ಡದ ಇನ್ನೊಂದಷ್ಟು ಭಾಗ ಬಿರುಕು ಬಿಟ್ಟು ಹಾಗೆಯೇ ನಿಂತಿತ್ತು. ಈ ಗುಡ್ಡ ಕುಸಿತ ಪ್ರದೇಶದಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಿಂದ ಸಮೀಕ್ಷೆ ನಡೆಸಲಾಗಿತ್ತು. ಇಲ್ಲಿ ಗುಡ್ಡ ಕುಸಿತದಂತಹ ಅವಘಡ ಸಂಭವಿಸುವ ಸಾಧ್ಯತೆಯ ಕುರಿತು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದರೂ ಮುಂದಿನ ಕ್ರಮವಾಗಿಲ್ಲ. ಕೇವಲ ಸೂಚನೆ, ತಿಳಿವಳಿಕೆಗಳಿಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ, ಗುಡ್ಡದ ಬುಡದ ಜನರು ಇಂದಿಗೂ ಜೀವಾಪಾಯದಲ್ಲೇ ಕಾಲ ಕಳೆಯುವಂತಾಗಿದೆ.
ಗುಡ್ಡವೇ ಸಿಂಹಸ್ವಪ್ನ: ಜಾಜಿಗುಡ್ಡೆ, ತುಳಗೇರಿ ಗ್ರಾಮಗಳು ಸಂಪೂರ್ಣ ಗುಡ್ಡದ ಪ್ರದೇಶವಾಗಿವೆ. ಇಲ್ಲಿನ ಮಾಲ್ಕಿ ಜಮೀನುಗಳು ಕೂಡ ತಗ್ಗು ದಿಣ್ಣೆಗಳಿಂದಲೇ ಕೂಡಿವೆ. ಇಲ್ಲಿ ಮನೆ, ಕೊಟ್ಟಿಗೆ ನಿರ್ವಿುಸಿಕೊಳ್ಳಲು ಕಷ್ಟಸಾಧ್ಯ. ಪ್ರಸ್ತುತ ಮನೆಗಳಿರುವುದು ಗುಡ್ಡದ ತಪ್ಪಲಿನಲ್ಲಾಗಿದ್ದು, ಇದೀಗ ಸುರಿಯುತ್ತಿರುವ ಮಳೆಯಿಂದ ಗುಡ್ಡ ಕುಸಿತದ ಆತಂಕ ಹೆಚ್ಚಿದೆ. ಹೀಗಾಗಿ ಮೂಲ ನೆಲದಲ್ಲಿ ಇರಲೂ ಆಗದೆ, ಬೇರೆಡೆ ಸ್ಥಳವೂ ಇಲ್ಲದೇ ಇಲ್ಲಿನವರು ಕಂಗಾಲಾಗಿದ್ದಾರೆ.
ಕೆರೆ ಮುಚ್ಚುವ ಆತಂಕ: ಗುಡ್ಡ ಕುಸಿತವಾದಾಗ ಕುಡಿಯುವ ನೀರಿನ ಕೆರೆ ಸಂಪೂರ್ಣ ಮುಚ್ಚಿತ್ತು. ಆದರೆ, ಸರ್ಕಾರದಿಂದ ಕುಸಿಯುವ ಪ್ರದೇಶದಲ್ಲಿ ತಡೆಗೋಡೆ ನಿರ್ವಿುಸುವ ಕಾರ್ಯವಾಗಲಿ, ಕೆರೆ ಹೂಳೆತ್ತುವ ಕೆಲಸವಾಗಲಿ ಆಗದ ಕಾರಣ ಗ್ರಾಮಸ್ಥರೇ ಹಣ ಹಾಕಿ ಕೆರೆ ಸರಿಪಡಿಸಿಕೊಂಡಿದ್ದಾರೆ. ಇದೀಗ ಮತ್ತೆ ನಿಧಾನವಾಗಿ ಗುಡ್ಡದ ಮಣ್ಣು ಈ ಕೆರೆ ತುಂಬುತ್ತಿದೆ. ಕುಡಿಯುವ ನೀರಿನ ಮೂಲವಾದ ಈ ಕೆರೆ ಮುಚ್ಚಿದರೆ ಗ್ರಾಮಸ್ಥರಿಗೆ ತೊಂದರೆ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಸ್ಥಳಿಕರು.
ಜಾನುವಾರು ಏನು ಮಾಡಲಿ?: ಸ್ಥಳಾಂತರಕ್ಕೆ ಒಳಪಡಬೇಕಾದ ಸುಮಾರು 7 ಕುಟುಂಬಗಳಿಗೆ ಸೇರಿದ 35ಕ್ಕೂ ಹೆಚ್ಚು ಜಾನುವಾರುಗಳಿವೆ. ಭೂ ಕುಸಿತಕ್ಕೆ ಹೆದರಿ ಇಲ್ಲಿನ ಜನರು ಹೇಗಾದರೂ ಹೊರಗಡೆ ಹೋಗಿ ಜೀವನ ಸಾಗಿಸಬಹುದು. ಆದರೆ, ಕೃಷಿಗೆ ಬೆನ್ನೆಲುಬಾದ, ಹೈನೋದ್ಯಮಕ್ಕೆ ಮುಖ್ಯ ಆಧಾರವಾದ ಜಾನುವಾರುಗಳನ್ನು ಏನು ಮಾಡುವುದು? ಅವುಗಳ ಮೇವು ಇರುವುದು ಇದೇ ಗುಡ್ಡಬೆಟ್ಟದಲ್ಲಿ. ಹಾಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದರೆ ನಾವು ಬೆಟ್ಟದ ತಪ್ಪಲನ್ನು ಬಿಡಲು ಸಾಧ್ಯವಿಲ್ಲ. ನಾವೆಲ್ಲ ಇಲ್ಲೇ ಹುಟ್ಟಿದ್ದೇವೆ. ಪುನರ್ವಸತಿ ಕಲ್ಪಿಸದಿದ್ದರೆ ಏನೇ ಆದರೂ ಇಲ್ಲೇ ಇರುತ್ತೇವೆ ಎನ್ನುತ್ತಾರೆ ಗ್ರಾಮಸ್ಥ ಆರ್.ವಿ.ಹೆಗಡೆ.
ಕೈತೊಳೆದುಕೊಳ್ಳುವ ಯತ್ನ: 2019ರ ಅಗಸ್ಟ್ ತಿಂಗಳಲ್ಲಿ ಗುಡ್ಡ ಕುಸಿತವಾದಾಗ ಸ್ಥಳ ಪರಿಶೀಲಿಸಿದ್ದ ಕಂದಾಯ ಇಲಾಖೆ ಅಧಿಕಾರಿಗಳು, ತೊಂದರೆಗೊಳಗಾದವರು ಅರ್ಜಿ ನೀಡಿದರೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಮೌಖಿಕ ಭರವಸೆ ನೀಡಿದ್ದರೆನ್ನಲಾಗಿದೆ. ಇದನ್ನೇ ನಂಬಿದ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ, ಅರ್ಜಿ ಸಲ್ಲಿಸಿದ್ದರು. ಅಂತಿಮವಾಗಿ, ‘ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ನೀವು ಸ್ವಯಂ ಪ್ರೇರಿತವಾಗಿ ಸ್ಥಳಾಂತರ ಆಗಬಹುದು’ ಎಂದು ಅಧಿಕಾರಿಗಳು ಲಿಖಿತವಾಗಿ ಪತ್ರ ನೀಡಿ ಕೈತೊಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂಬುದು ಸ್ಥಳಿಕರ ಆರೋಪವಾಗಿದೆ.
ತಾಲೂಕು ಆಡಳಿತ ಕ್ರಮ: ಈಗಾಗಲೇ ಸ್ಥಳೀಯ ನಿವಾಸಿಗಳಿಗೆ ಸ್ಥಳಾಂತರ ಆಗುವಂತೆ ಸೂಚಿಸಲಾಗಿದೆ. ಮೂಲ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿದರೆ ಮಾತ್ರ ಬೇರೆಡೆ ಅವರಿಗೆ ಮನೆ ನಿರ್ವಿುಸಲು ಸ್ಥಳ ನೀಡಲು ಅವಕಾಶವಿದೆ. ಆದರೆ ಅಲ್ಲಿನವರು ಮೂಲ ಜಾಗವನ್ನೂ ನೀಡದೆ ಹೊಸ ಜಾಗ ಬೇಕು ಎನ್ನುತ್ತಿದ್ದಾರೆ. ಇದು ಅವೈಜ್ಞಾನಿಕ ಕ್ರಮವಾಗಿದೆ. ಒಂದೊಮ್ಮೆ ಹಳೆಯ ಮನೆಯ ಜಾಗ ಬಿಟ್ಟುಕೊಡಲು ಒಪ್ಪಿದರೆ ಪುನರ್ವಸತಿ ಕುರಿತು ತಾಲೂಕು ಆಡಳಿತ ಕ್ರಮ ವಹಿಸಲಿದೆ ಎನ್ನುತ್ತಾರೆ ತಹಸೀಲ್ದಾರ್ ಎಂ.ಆರ್.ಕುಲಕರ್ಣಿ.
ಪುನರ್ವಸತಿಗೆ ಜಾಗ ಕಲ್ಪಿಸಲು ಪಂಚಾಯಿತಿಗಳಿಗೆ ಅಧಿಕಾರವಿಲ್ಲ. ಆದರೆ, ಒಂದೊಮ್ಮೆ ಇಲ್ಲಿನ ನಿವಾಸಿಗಳು ಒಪ್ಪಿದರೆ ಪಂಚಾಯಿತಿ ವತಿಯಿಂದ ಮಳೆಗಾಲದ ಸಂದರ್ಭದಲ್ಲಿ ಕ್ವಾರ್ಟರ್ಸ್ ವ್ಯವಸ್ಥೆ ಮಾಡಲು ಅವಕಾಶವಿದೆ. ಈ ಬಗೆಗೆ ಪಂಚಾಯಿತಿ ವತಿಯಿಂದ ಇಲ್ಲಿನ ಜನರಿಗೆ ತಿಳಿಹೇಳಲಾಗಿದೆ. ಶಾಶ್ವತ ಪರಿಹಾರ ಆಗಬೇಕಿದ್ದರೆ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳು ಒಟ್ಟಾಗಿ ಕುಳಿತು ಕ್ರಮ ವಹಿಸಬೇಕು.
| ಲತಾ ಡಿ.ಎಸ್., ಕೋಡ್ನಗದ್ದೆ ಗ್ರಾಮ ಪಂಚಾಯಿತಿ ಪಿಡಿಒ