ಜೀವ ಉಳಿಸುವ ವೈದ್ಯರಿಗೇ ಸಂಕಷ್ಟ

ಬೆಂಗಳೂರು: ರೋಗಿಗಳ ಪ್ರಾಣ ಉಳಿಸುವ ವೈದ್ಯರೇ ಕೆಲವೊಮ್ಮೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಒಂದು ವೇಳೆ ಚಿಕಿತ್ಸೆ ಫಲಿಸದೆ ರೋಗಿ ಮೃತಪಟ್ಟರೆ ಆ ರೋಗಿಯ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ತಮ್ಮ ಆಕ್ರೋಶವನ್ನು ವೈದ್ಯರು ಹಾಗೂ ಆಸ್ಪತ್ರೆ ಮೇಲೆ ತೋರಿಸುತ್ತಾರೆ. ಅದೆಷ್ಟೋ ಪ್ರಕರಣಗಳಲ್ಲಿ ತಮ್ಮಿಂದ ತಪ್ಪಾಗದಿದ್ದರೂ ರೋಗಿಯ ಕಡೆಯವರಿಂದ ವೈದ್ಯರು ಹಲ್ಲೆಗೆ ಒಳಗಾಗುತ್ತಾರೆ.

ವೈದ್ಯೋಪಚಾರ ಸಿಬ್ಬಂದಿ ರಕ್ಷಣೆ ಜವಾಬ್ದಾರಿಯನ್ನು ಪೊಲೀಸರ ವಹಿಸಲಾಗಿದೆ. ವೈದ್ಯರ ಮೇಲೆ ಹಲ್ಲೆ ಹಾಗೂ ಆಸ್ಪತ್ರೆಗೆ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಪೊಲೀಸರು ತೆಗೆದುಕೊಳ್ಳಬೇಕು. ಒಂದು ವೇಳೆ ವೈದ್ಯರ ಮೇಲೆ ಹಲ್ಲೆ ನಡೆದರೆ ಅಥವಾ ಆಸ್ಪತ್ರೆಯ ವಸ್ತುಗಳಿಗೆ ಹಾನಿಯಾದರೆ ಆಯಾ ಸರಹದ್ದಿನ ಪೊಲೀಸರನ್ನೇ ಹೊಣೆಯಾಗಿಸಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಯೋಜನೆಯನ್ನು ಪೊಲೀಸ್ ಇಲಾಖೆ ರಾಜ್ಯದಲ್ಲಿ ಈಗಾಗಲೇ ಜಾರಿಗೆ ತಂದಿದೆ.

ಆಯಾ ಠಾಣಾಧಿಕಾರಿ ಠಾಣಾ ಸರಹದ್ದಿನಲ್ಲಿರುವ ಎಲ್ಲ ಆಸ್ಪತ್ರೆಗಳ ವೈದ್ಯರು ಹಾಗೂ ಅಧಿಕಾರಿಗಳನ್ನೊಳಗೊಂಡ ವಾಟ್ಸ್​ಆಪ್ ಗ್ರೂಪ್ ರಚಿಸಬೇಕು. ಹೊಸ ಬೀಟ್​ನಂತೆ ಆ ಪ್ರದೇಶದ ಉಸ್ತುವಾರಿಯಾಗಿರುವ ಪೊಲೀಸ್ ಸಿಬ್ಬಂದಿಯೂ ಗ್ರೂಪ್​ನಲ್ಲಿರಬೇಕು. ಆಸ್ಪತ್ರೆಯಲ್ಲಿ ನಡೆಯುವ ಯಾವುದೇ ಅಹಿತಕರ ಘಟನೆ ಅಥವಾ ಹಿಂಸಾಚಾರದ ಮುನ್ಸೂಚನೆ ಬಗ್ಗೆ ಗ್ರೂಪ್​ನಲ್ಲಿ ಮಾಹಿತಿ ನೀಡಬಹುದು. ದಿನದ 24 ಗಂಟೆಯೂ ಪೊಲೀಸ್ ಅಧಿಕಾರಿಗಳು ಅದಕ್ಕೆ ಸ್ಪಂದಿಸಬೇಕು. ಮಾಹಿತಿ ಸಿಕ್ಕ ಕೂಡಲೆ ಆಸ್ಪತ್ರೆ ಸಮೀಪ ತೆರಳಿ ಪರಿಸ್ಥಿತಿ ನಿಭಾಯಿಸಲು ಕ್ರಮ ಕೈಗೊಳ್ಳಬೇಕು.

ಠಾಣಾ ವ್ಯಾಪ್ತಿಯಲ್ಲಿರುವ ಎಲ್ಲ ಆಸ್ಪತ್ರೆಗಳ ವಿಳಾಸ ಮತ್ತು ವೈದ್ಯಾಧಿಕಾರಿಗಳ ಫೋನ್ ನಂಬರ್ ಠಾಣೆಯಲ್ಲಿರಬೇಕು. ಸರ್ಕಾರ ಜಾರಿ ತಂದಿರುವ 2009ರ ‘ಕರ್ನಾಟಕ ವೈದ್ಯೋಪಚಾರ ಸಿಬ್ಬಂದಿ ಮೇಲೆ ಹಿಂಸಾಚಾರ ಮತ್ತು ಸಂಸ್ಥೆಗೆ ಹಾನಿ ಮಾಡುವುದನ್ನು ನಿಷೇಧಿಸುವ ಅಧಿನಿಯಮದ ಬಗ್ಗೆ ಠಾಣೆಯ ಎಲ್ಲ ಸಿಬ್ಬಂದಿಗೂ ಮಾಹಿತಿ ಇರಬೇಕು ಹಾಗೂ ಅದನ್ನು ಅನುಷ್ಠಾನಕ್ಕೆ ತರಲು ಕ್ರಮ ತೆಗೆದುಕೊಳ್ಳಬೇಕೆಂಬ ನಿಯಮ ಜಾರಿಯಲ್ಲಿದೆ.

ಪೊಲೀಸರ ಕೆಲಸವೇನು?

 • ಮಾಹಿತಿ ಸಿಕ್ಕ ಕೂಡಲೆ ಸ್ಥಳಕ್ಕೆ ಹೋಗಿ ವೈದ್ಯರು, ಆಸ್ಪತ್ರೆ ಆಸ್ತಿಗೆ ರಕ್ಷಣೆ ಕೊಡಬೇಕು
 • ರೋಗಿ/ಸಂಬಂಧಿಕರು ವೈದ್ಯರ ವಿರುದ್ಧ ದೂರು ಕೊಟ್ಟರೆ ಸುಪ್ರೀಂಕೋರ್ಟ್ ಮಾರ್ಗಸೂಚಿ ಅನ್ವಯ ದಾಖಲಿಸಬೇಕು
 • ವಾಟ್ಸ್​ಆಪ್ ಗ್ರೂಪ್​ನಲ್ಲಿ ಡಿಸಿಪಿ/ಎಸ್ಪಿ ಎಲ್ಲ ವೈದ್ಯರನ್ನೂ ಸೇರಿಸಿ ಮಾಹಿತಿ ವಿನಿಮಯ

ಯಾವುದು ಅಪರಾಧ?

 • ವೈದ್ಯರ ನಿಂದನೆ, ಗುಂಪು ಸೇರಿ ಭಯದ ವಾತಾವರಣ ಸೃಷ್ಟಿ
 • ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ
 • ವೈದ್ಯರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವುದು
 • ಆಪರೇಷನ್ ಥಿಯೇಟರ್, ಐಸಿಯುಗೆ ಅತಿಕ್ರಮ ಪ್ರವೇಶ
 • ಆಸ್ತಿಗೆ ಹಾನಿಯುಂಟು ಮಾಡುವುದು, ದಾಖಲೆ ಪತ್ರ ನಾಶ
 • ವೈದ್ಯರು/ಸಿಬ್ಬಂದಿಗೆ ಬ್ಲ್ಯಾಕ್​ವೆುೕಲ್ ಮಾಡುವುದು
 • ವೈದ್ಯಕೀಯ ದಾಖಲೆಗಳನ್ನು ಕಿತ್ತುಕೊಳ್ಳುವುದು
 • ಅನಗತ್ಯವಾಗಿ ಮಧ್ಯಪ್ರವೇಶಿಸಿ ಪ್ರಚೋದನೆ ನೀಡುವುದು
 • ಪರೋಕ್ಷವಾಗಿ/ನೇರವಾಗಿ ವೈದ್ಯರ ಮೇಲೆ ಒತ್ತಡ ಹೇರುವುದು