ಜೀವನ ಸಮೃದ್ಧಿಗೆ ಜ್ಞಾನದ ಬೆಳಕು ಅಗತ್ಯ

ಕುಡ್ಲೂರು: ಜೀವನ ಸಮೃದ್ಧಿಗೆ ತಾತ್ವಿಕ ಸತ್ಯ ಮತ್ತು ಜ್ಞಾನದ ಬೆಳಕು ಅಗತ್ಯ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕೊರಟಿಕೆರೆ ಗ್ರಾಮದಲ್ಲಿ ಬೊಮ್ಮಲಿಂಗೇಶ್ವರ ಸಮುದಾಯ ಭವನ ಉದ್ಘಾಟನೆ ಹಾಗೂ ಸರ್ವಧರ್ಮ ಸಮ್ಮೇಳನದಲ್ಲಿ ಆಶೀರ್ವಚನ ನೀಡಿ, ಮನಸ್ಸು ಪರಿಶುದ್ಧಗೊಂಡು ಪ್ರಶಾಂತವಾಗಿರಲು ಶ್ರೀಗುರುವಿನ ಜ್ಞಾನದ ಹೊಂಗಿರಣ ಅವಶ್ಯಕ. ಅರಿವು, ಆಚಾರಗಳ ಮೂಲಕ ನೆಮ್ಮದಿ ಕಾಣಲು ಸಾಧ್ಯ ಎಂದರು.

ಸಾಹಿತಿ ಚಟ್ನಹಳ್ಳಿ ಮಹೇಶ್ ಮಾತನಾಡಿ, ಅನೇಕ ಧರ್ಮಗಳು ನೆಲೆನಿಂತಿರುವುದು ಭಾರತೀಯ ಸಂಸ್ಕೃತಿಯ ಪ್ರತೀಕ. ಪ್ರತಿಯೊಬ್ಬರೂ ತಮ್ಮ ಧರ್ಮದ ನೆಲೆಯಲ್ಲಿ ಬದುಕು ನಡೆಸುತ್ತಿದ್ದಾರೆ. ಬದುಕು ಹಸನಾಗಬೇಕಾದರೆ ಆತ ತನ್ನ ಧರ್ಮದ ತಳಹದಿಯಲ್ಲಿ ನಡೆದು ಗುರುವಿನ ಮಾರ್ಗದರ್ಶನದಲ್ಲಿ ದೇವರ ಮೊರೆ ಹೋಗಬೇಕು ಎಂದು ಹೇಳಿದರು.

ಕೊರಟಿಕೆರೆಗೆ ಆಗಮಿಸಿದ ತರಳಬಾಳು ಜಗದ್ಗುರುಗಳಿಗೆ ಗ್ರಾಮದ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಕುಡ್ಲೂರು, ಕೊರಟಿಕೆರೆ ಸುತ್ತಮುತ್ತಲ ಜನರು ಸಿರಿಗೆರೆ ಗೋ ಶಾಲೆಗೆ ಒಂದು ಲಾರಿ ಹುಲ್ಲನ್ನು ದಾನವಾಗಿ ನೀಡಿದರು.

ತರೀಕೆರೆ ತಾಲೂಕು ಸಾಧು ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಶಂಕರಲಿಂಗಪ್ಪ, ಜಿಪಂ ಸದಸ್ಯ ಕೆ.ಆರ್.ಆನಂದಪ್ಪ, ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಹಟ್ಟಿಗೌಡ್ರು ಬಸಪ್ಪ, ಜಿಪಂ ಮಾಜಿ ಅಧ್ಯಕ್ಷ ಕಲ್ಮುರುಡಪ್ಪ, ಧ್ರುವಕುಮಾರ್, ಎಪಿಎಂಸಿ ಸದಸ್ಯ ಕೆ.ಎಂ.ಚಂದ್ರಶೇಖರ್, ಶಿಕ್ಷಕ ರವಿ, ರಾಜಪ್ಪ, ಸ್ವಾಮಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *