ಚಿತ್ರದುರ್ಗ: ಜೀವನ ಪ್ರೀತಿ ಇಲ್ಲದಿದ್ದರೆ ಬದುಕು ಕಠಿಣವಾಗಲಿದೆ ಎಂದು ಮುರುಘಾಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ನಗರದ ಶ್ರೀ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ 33ನೇ ವರ್ಷದ 11 ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 10 ಜೋಡಿಗಳ ವಿವಾಹ ನೆರ ವೇರಿಸಿ ಮಾತನಾಡಿದ ಶ್ರೀಗಳು, ಜೀವನ ಪ್ರೀತಿ ಇಲ್ಲವಾದಲ್ಲಿ ಇವತ್ತಿನ ಜಗತ್ತಿನಲ್ಲಿ ನೆಮ್ಮದಿ ಬದುಕು ಅಸಾಧ್ಯವಾಗಲಿದೆ.
ಸಂಸಾರದಲ್ಲಿ ಸತಿಪತಿ ನಡುವೆ ಪ್ರೀತಿ ನಗುತಿರಬೇಕು. ಜೀವನದಲ್ಲಿ ಸುಖ-ದುಃಖಗಳನ್ನು ಎದೆಗುಂದದೆ ಸಹನೆಯಿಂದ ಸಮಾನವಾಗಿ ಸ್ವೀಕರಿ ಸಬೇಕು. ಕೊನೆಯವರೆಗೂ ಉತ್ತಮ ಸ್ನೇಹಿತರಾಗಿರಬೇಕು. ಮಾನವನಿಗೆ ಎರಡು ಕಣ್ಣುಗಳಿದ್ದರೂ ದೃಷ್ಟಿ ಒಂದೇ. ಎರಡು ಕಿವಿಗಳಿದ್ದರೂ ಕೇ ಳುವ ಶಬ್ಧ ಒಂದೇ. ಅದರಂತೆ ದೇಹ ಎರಡಾದರೂ ದಂಪತಿ ಆಲೋಚನೆಗಳು ಒಂದೇ ಆದಾಗ ಜೀವನ ಸ್ವರ್ಗವಾಗುತ್ತದೆ. ಅಂತಹ ಬದುಕು ನಿಮ್ಮೆಲ್ಲರದ್ದಾಗಲಿ ಎಂದು ನವ ದಂಪತಿಗಳನ್ನು ಹಾರೈಸಿದರು.
ಸಮ್ಮುಖ ವಹಿಸಿದ್ದ ಕವಲೆತ್ತು ಬಸವಕೇಂದ್ರದ ಶರಣೆ ಮುಕ್ತಾಯಕ್ಕ ಮಾತನಾಡಿ, ಮಾನವ ಬದುಕಿನಲ್ಲಿ ಕಲ್ಯಾಣ ಅನ್ನುವ ದೀಕ್ಷೆ ಸಾರ್ಥಕತೆ ಪಡೆಯುತ್ತದೆ. ಮದುವೆ ಅನ್ನುವುದು ಜೀವನದ ಒಂದು ಹಂತದಲ್ಲಿ ಸಂಭ್ರಮಪಡುವಂತಹದ್ದಾಗಿದೆ. ಶಿವಪಥವನರಿವಡೆ ಗುರು ಪಥವೇ ಮೊದಲು ಎಂದಿದ್ದಾರೆ ಶಿವಶರಣರು. ನೂತನ ವಧುವರರು ಅಂಥ ಗುರು ಮಠದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೀರಿ. ಅರಿವಿಲ್ಲದವರಿಗೆ ಅರಿವನ್ನು ಮೂಡಿಸುವವನೇ ಗುರು ಎಂದರು.
ದಾವಣಗೆರೆ ಬಸವ ಬಳಗದ ಶ್ರೀ ವಿಭೂತಿ ಬಸವಾನಂದ ಶರಣರು ಮಾತನಾಡಿ, ತ್ರದುರ್ಗದ ಈ ಶ್ರೀಮಠ ಶೂನ್ಯಪೀಠ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ. ಮಹತ್ವಪೂರ್ಣವಾದ ಅನುಭವ ಮಂಟಪವನ್ನು ನಿರ್ಮಿಸಿ, ಕಲ್ಯಾಣ ಕಾರ‌್ಯಗಳಿಗೆ ಒತ್ತು ಕೊಟ್ಟಿದೆ. 12ನೇ ಶತಮಾನ ಸರ್ವ ಸಮುದಾಯಕ್ಕೆ ಸಮಾನತೆಯನ್ನು ತಂದು ಕೊಟ್ಟಿದೆ. ಬಸವಮಾರ್ಗ ಇವತ್ತಿನ ಜಗತ್ತಿಗೆ ಅನಿವಾರ‌್ಯವಾಗಿದೆ ಎಂದರು.
ಜಮುರಾ ಕಲಾಲೋಕದ ಕಲಾವಿದರು ವಚನ ಪ್ರಾರ್ಥಿಸಿದರು. ದಾವಣಗೆರೆ ಸಾಹಿತಿ ಡಾ.ಶಿವಕುಮಾರ್ ಸ್ವಾಗತಿಸಿ,ಚಿನ್ಮಯಿ ದೇವರು ನಿರೂಪಿಸಿದರು. ಟಿ.ಪಿ.ಜ್ಞಾನಮೂರ್ತಿ ವಂದಿಸಿದರು.