Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಜೀವನಪ್ರೀತಿಯೊಂದಿದ್ದರೆ ಕಷ್ಟಗಳೆಲ್ಲ ಗೌಣ…

Thursday, 23.11.2017, 3:04 AM       No Comments

ಬಡತನವೇ ಇದ್ದರೂ ಬದುಕುವ ಛಲ ಬೇಕು. ನಮ್ಮನ್ನು ನಾವು ಪ್ರೀತಿಸಿದಂತೆ ಉಳಿದವರನ್ನು ಪ್ರೀತಿಸುವ ಮನಸ್ಸು ಬೇಕು. ಬದುಕನ್ನು ನೆಮ್ಮದಿಯಿಂದ ಕಳೆಯಲು ದುಡ್ಡು, ಸಂಪತ್ತು, ಅಧಿಕಾರ ಬೇಕಿಲ್ಲ. ನಾವು ಖುಷಿಯಾಗಿದ್ದು, ಬೇರೆಯವರಿಗೂ ಖುಷಿ ಹಂಚುವ ಮತ್ತು ಜೀವನವನ್ನು ಅದಮ್ಯವಾಗಿ ಪ್ರೀತಿಸುವ ಜೀವನೋತ್ಸಾಹ ಇದ್ದರೆ ಸಾಕು.

ಆಗಷ್ಟೇ ಒಳಗಡಿ ಇಟ್ಟಿದ್ದೆವು. ನೆಲದಲ್ಲಿ ಕುಳಿತು ತಮ್ಮ ಕೆಲಸದಲ್ಲಿ ತೊಡಗಿದ್ದ ಅವರು ನಮ್ಮನ್ನು ಕುಳಿತುಕೊಳ್ಳಿ ಎಂದು ಹೇಳುತ್ತಲೇ ತಾವೂ ಎದ್ದು ಪಕ್ಕದಲ್ಲಿದ್ದ ಸಿಮೆಂಟು ಕಟ್ಟೆಯ ಮೇಲೆ ಕುಳಿತು ಮಾತಿಗೆ ತೊಡಗಿದರು. ಮಾತಿನ ನಡುವೆ ‘ಓಯ್ ನನ್ನ ಕಾಲೊಮ್ಮೆ ಇತ್ಲಾಗಿ ಕೊಡು’ ಎಂದಿದ್ದನ್ನು ಕೇಳಿ ಒಂದು ಕ್ಷಣ ನನ್ನೊಳಗೆಲ್ಲವೂ ಮೌನ… ಆದರವರು ಯಾವುದೇ ಭಾವಾತಿರೇಕಗಳಿಲ್ಲದೆ ದಪ್ಪಬಟ್ಟೆಯ ತುಂಡನ್ನೊಂದು ಕಟ್ಟಿಕೊಳ್ಳುತ್ತ ಅದರ ಮೇಲೆ ಮರದ ಕಾಲನ್ನು ತೂರಿಸಿ ಬೆಲ್ಟ್ ಬಿಗಿದು ಮೇಲೆದ್ದು ಯಾವುದೋ ಕಾಗದವೊಂದನ್ನು ನಮ್ಮ ಕೈಗಿತ್ತು ಮಾತು ಮುಂದುವರಿಸಿದರು. ಎಲ್ಲಿಯೂ ಬದುಕಿನ ಬಗ್ಗೆ ವಿಷಾದವಿಲ್ಲ. ಆಗಿ ಹೋದದ್ದರ ಬಗ್ಗೆ ಚಿಂತೆಯಿಲ್ಲ. ನಾವು ಏಳುವಾಗ ಅವರೂ ಎದ್ದು ಸ್ವಲ್ಪ ಪೇಟೆಯಲ್ಲಿ ಕೆಲಸವಿದೆ ಎಂದವರೇ ಕೈನೆಟಿಕ್ ಏರಿದರು. ಎಲ್ಲಿರುತ್ತದೆ ಇಂತಹ ವಿಶ್ವಾಸ… ಇಂತಹ ಜೀವನಪ್ರೀತಿ …!

ನಾನು ಸಣ್ಣವಳಿರುವಾಗ ಮನೆಯ ಪಕ್ಕ ವಯಸ್ಸಾದವರೊಬ್ಬರಿದ್ದರು. ಹೆಂಡತಿಯನ್ನು ಕಳೆದುಕೊಂಡಿದ್ದರು. ಒಂಟಿ ಜೀವನ. ದಿನನಿತ್ಯ ನಮ್ಮ ಮನೆಯ ಪಕ್ಕದಲ್ಲಿದ್ದ ಬೋರ್ವೆಲ್​ಗೆ ನೀರಿಗಾಗಿ ಬರುತ್ತಿದ್ದರು. ಒಬ್ಬರಿಗೆ ಎಷ್ಟು ನೀರು ಬೇಕಾದೀತು ಯೋಚಿಸಿ. ಹೆಚ್ಚೆಂದರೆ ನಾಲ್ಕೋ ಐದೋ ಕೊಡ ನೀರು. ಆದರಿವರು ಕೊಂಡೊಯ್ಯುತ್ತಿದ್ದುದು ಇಪ್ಪತೆôದಕ್ಕೂ ಹೆಚ್ಚು ಕೊಡ ನೀರು. ನಮಗೆಲ್ಲ ಕುತೂಹಲ ಇಷ್ಟು ನೀರಲ್ಲಿ ಸ್ನಾನ ಮಾಡ್ತಾರಾ ಎಂದು. ಹೆಚ್ಚಾಗಿ ತೆರೆದುಕೊಂಡೇ ಇದ್ದ ಅವರ ಮನೆಯ ಬಿದಿರಿನ ತಡಮೆ ನಮ್ಮನ್ನು ಒಳಹೋಗಲು ಅನುವು ಮಾಡಿದ್ದರೂ ಅತಿಮೌನಿಯಾದ ಅವರನ್ನು ಕಂಡರೆ ನಮಗೆ ಭಯ. ಮಕ್ಕಳೇನು ವಠಾರದ ಹಿರಿಯರು ಕೂಡ ಆ ಕಡೆ ತಲೆ ಹಾಕುತ್ತಿರಲಿಲ್ಲ. ಅವರ ಮನೆಯ ಆ ಕಡೆಯಿದ್ದ ಪೇರಳೆ ಗಿಡದಲ್ಲಾದ ಹಣ್ಣುಗಳು ಮಾತ್ರ ಮಕ್ಕಳಾದ ನಮ್ಮ ಭಯವನ್ನೂ ಮೀರಿ ಬಾಯಲ್ಲಿ ನೀರುಕ್ಕಿಸಿ ಆ ಅಜ್ಜ ಇಲ್ಲದ ಸಮಯದಲ್ಲಿ ಅವರ ಮನೆ ಕಡೆ ಕಾಲು ಹಾಕುವಂತೆ ಮಾಡಿದ್ದು. ಮನೆಯಂಗಳದ ಬದಿಯಲ್ಲಿದ್ದ ದೊಡ್ಡ ಮಣ್ಣಿನ ಪಾತ್ರೆಯೊಂದರಲ್ಲಿ ನೀರು. ಅದರ ಬದಿಯಲ್ಲೇ ಒಂದಿಷ್ಟು ಹಸಿರು ಹುಲ್ಲು. ಅದರಿಂದ ಮುಂದೆ ವಿವಿಧ ಜಾತಿಯ ಹೂವಿನ ಗಿಡಗಳು. ಯಾವುದಕ್ಕೂ ಬೇಲಿಯಿಲ್ಲ. ಅವರ ಮನೆಯ ಹಿಂಭಾಗ ಮಾತ್ರ ನೋಡಿ ಗೊತ್ತಿದ್ದ ನಮಗೆ ಈ ಸೌಂದರ್ಯವನ್ನು ನೋಡಿ ಕಕ್ಕಾಬಿಕ್ಕಿಯಾಗಿತ್ತು. ನಮ್ಮ ಮನೆಯಲ್ಲಿ ಬೆಳೆದ ಒಂದೆರಡು ಗಿಡಗಳನ್ನು ಆಗಾಗ ಬೀಡಾಡಿ ದನಗಳು ಬಂದು ತಿಂದು ಹೋಗಿ ನಮ್ಮಿಂದ ಶಪಿಸಿಕೊಳ್ಳುವುದು ಮಾಮೂಲಿಯಾಗಿದ್ದಾಗ ಇವರು ಗೇಟು ತೆರೆದಿಟ್ಟರೂ ದನ ಬರುವುದಿಲ್ವಾ ಎಂದಚ್ಚರಿ ಪಡುತ್ತಲೇ ಪೇರಳೆ ಮರ ತಲುಪಿದ್ದೆವು. ಪಕ್ಕನೆ ಗೊಗ್ಗರು ಸ್ವರವೊಂದು ‘ತಿನ್ನುವಷ್ಟು ಮಾತ್ರ ಕೊಯ್ಯಿರಿ. ಸುಮ್ಮನೆ ಕೊಯ್ದು ಹಾಳು ಮಾಡಬೇಡಿ’ ಎಂದಿತು. ತಿರುಗಿ ನೋಡಿದರೆ ನಮ್ಮ ಬೆನ್ನ ಹಿಂದೆಯೇ ನಿಂತಿದ್ದರು ಆ ಅಜ್ಜ! ಬೈಗಳನ್ನು ನಿರೀಕ್ಷಿಸಿದ್ದ ನಮಗೆ ಅವರ ನಗುಮುಖ ಹೆದರಿಕೆ ಕಡಿಮೆ ಮಾಡಿತ್ತು. ಹಣ್ಣು ಬಾಯಿಗೆ ತುರುಕಿಕೊಳ್ಳುತ್ತಲೇ ‘ನಿಮ್ಮ ಮನೆಗೆ ದನ ಬರುವುದಿಲ್ವಾ?’ ಎಂದು ಕೇಳಿದೆವು. ಪರಿಹಾರ ಗೊತ್ತಾದ್ರೆ ಮನೆಯರಿಗೆ ಹೇಳಿ ಭೇಷ್ ಎನ್ನಿಸಿಕೊಳ್ಳುವ ಆಸೆಯಲ್ಲಿ.

‘ದನ ಹಸಿವಾದರೆ ಮಾತ್ರ ಬರುವುದು ಅಲ್ವಾ, ಅದರ ಆಹಾರವಾದ ಹುಲ್ಲು ಮತ್ತು ನೀರು ಎಲ್ಲವನ್ನೂ ಅದು ಹೂವಿನ ಗಿಡದ ಹತ್ತಿರ ಬರುವ ಮೊದಲೇ ಇಟ್ಟಿದ್ದೆನಲ್ಲ ಮತ್ಯಾಕೆ ಹೂವಿನ ಗಿಡ ತಿನ್ನುತ್ತದದು. ಅದರ ಬದಲು ಸಗಣಿ ಹಾಕಿ ನನ್ನ ನೆಲವನ್ನು ಫಲವತ್ತಾಗಿಸುತ್ತದೆ’ ಎಂದಿದ್ದರು. ‘ನೀವೊಬ್ಬರೇ ಏನು ಮಾಡ್ತೀರಿ ಇಷ್ಟು ಹೂಗಳನ್ನು?’ ‘ಮಾಡುವುದೇನು. ಅದು ಅರಳುತ್ತದೆ. ಅದಾಗಿ ಬೀಜವಾಗುತ್ತದೆ. ಅದಾಗಿ ಮತ್ತೆ ಹುಟ್ಟುತ್ತದೆ. ನಾನು ನಿಮಿತ್ತ ಮಾತ್ರ. ಸುಮ್ಮನೆ ನೀರು ಹಾಕುತ್ತೇನಷ್ಟೆ’. ಆಗೆಲ್ಲ ಅವರ ಮಾತು ಒಗಟಿನಂತೆ ಕಂಡಿತ್ತು. ಯಾವ ಫಲಾಪೇಕ್ಷೆಯೂ ಇಲ್ಲದೆ ನಿಂತ ನೆಲವನ್ನು ಪ್ರೀತಿಸುತ್ತಿದ್ದರು ಅವರು ಸಂತನಂತೆ.

ನಿಜಕ್ಕೂ ಏನು ಬೇಕು ಬದುಕಿಗೆ? ದುಡ್ಡುಕಾಸು, ಭೂಮಿ, ಚಿನ್ನ… ಊಹುಂ ಇದಲ್ಲ. ಬಡತನವೇ ಇದ್ದರೂ ಬದುಕುವ ಛಲ ಬೇಕು. ನಮ್ಮನ್ನು ನಾವು ಪ್ರೀತಿಸಿದಂತೆ ಉಳಿದವರನ್ನು ಪ್ರೀತಿಸುವ ಮನಸ್ಸು ಬೇಕು. ಇದೆಲ್ಲ ಯೋಚಿಸುತ್ತಿರುವಾಗಲೇ ಪಕ್ಕನೇ ನೆನಪಿಗೆ ಬಂದವರು ತಂಬೂರಿ ಜವರಯ್ಯ ಮತ್ತು ಬೋರಮ್ಮ ದಂಪತಿ. ಇಲ್ಲಗಳ ಸಂತೆಯಲ್ಲೇ ಬದುಕಿನ ಹೂವನ್ನು ಕೊಂಡವರು. ಜಾನಪದ ಲೋಕದ ಅರ್ನ್ಯಘ ರತ್ನಗಳು.

ಈ ಜಾನಪದ ಲೋಕ ಎಂಬುದರ ವ್ಯಾಪ್ತಿ ಊಹಿಸಲಾರದಷ್ಟು ಹಿರಿದು. ಎಷ್ಟೊಂದು ವೈವಿಧ್ಯಗಳು, ಎಷ್ಟೊಂದು ಬಣ್ಣಗಳು. ಆಯಾಯ ಮಣ್ಣಿನ ಸೊಗಡು ಹೊರಹೊಮ್ಮುವುದೇ ಜಾನಪದ ಕಲೆಗಳಿಂದ. ನಾನಿರುವ ಕರಾವಳಿಯ ಪ್ರದೇಶವು ಯಕ್ಷಗಾನ, ಭೂತಕೋಲ, ಕಂಬಳ, ನಾಗಾರಾಧನೆ, ಪಾಡ್ದನೆಯಂತಹ ಹತ್ತು ಹಲವು ಕಲಾಪ್ರಕಾರಗಳನ್ನು ತನ್ನದಿದು ಎಂದು ಎದೆಯುಬ್ಬಿಸಿ ಹೇಳುತ್ತದೆ. ಹಾಗೆಯೇ ಪ್ರತಿ ಊರೂ ತನ್ನನ್ನು ಹೊರಲೋಕಕ್ಕೆ ತೋರಿಸಿಕೊಳ್ಳಲು ಸ್ವಂತದ್ದು ಎಂದು ಹೇಳಿಕೊಳ್ಳುವ ವಿಶಿಷ್ಟ ಕಲೆಯ ಮುಖವನ್ನು ಪ್ರದರ್ಶಿಸುತ್ತದೆ. ಇದು ಅಲ್ಲಿನ ಶ್ರೀಮಂತ ಮುಖ. ಇದರ ಸುಂದರತೆ ಎಲ್ಲರನ್ನೂ ಸೆಳೆಯದೆ ಇರಲಾರದು. ಈ ಶ್ರೀಮಂತಿಕೆಯನ್ನು ತಮ್ಮದಾಗಿಸಿಕೊಂಡವರೇ ಕಲಾವಿದರು. ಕಲೆಯೊಂದು ತನ್ನ ಪರಿ ಮೀರಿ ಹೊರ ಹಾರಿ ಎಲ್ಲರನ್ನೂ ತಲುಪಬೇಕಾದರೆ ಇವರೇ ಕಾರಣ.

ಇತ್ತೀಚೆಗೆ ಹಿರಿಯ ಲೇಖಕಿಯೊಬ್ಬರೊಡನೆ ಮಾತಾಡುವಾಗ- ‘ಯಾವುದಾದರೂ ಕಲೆ ನಿಮ್ಮ ಕೈ ಹಿಡಿದಿದ್ದರೆ ನೀವು ಸದಾ ಹರೆಯದವರಂತೆ ಬದುಕಬಲ್ಲಿರಿ’ ಎಂದಿದ್ದರು. ಕಲೆಯೊಂದು ಕಲಾವಿದನನ್ನು ಅದರೊಳಗೆ ಮುಳುಗುವಂತೆ ಮಾಡಿ ಅವನ ಯೋಚನಾಲಹರಿ, ಬದುಕಿನ ರೀತಿನೀತಿ ಎಲ್ಲವನ್ನೂ ಕಲಾಮಯಗೊಳಿಸಬಹುದು. ಅಷ್ಟೊಂದು ಪ್ರಭಾವಶಾಲಿಯಾದ ಕಲೆಯು ಬೆಳೆಯಬೇಕಾದರೆ ಅದನ್ನು ಪೋಷಿಸುವವರು ಬೇಕೇಬೇಕು. ಕಲೆ ಜನಸಾಮಾನ್ಯರಿಗೂ ತಲುಪಬೇಕು ಎಂದಾದರೆ ಅದಕ್ಕೊಂದು ವೇದಿಕೆ ಬೇಕು. ಅದನ್ನು ಪ್ರದರ್ಶಿಸುವ ಹುಮ್ಮಸ್ಸು ಬೇಕು. ಆಸ್ವಾದಿಸುವ ಜನ ಬೇಕು. ಗುರುತಿಸುವಿಕೆಗಾಗಿ ಪ್ರಶಸ್ತಿಗಳೆಂಬ ಗರಿ ಸಿಗಬೇಕು. ಇಷ್ಟೆಲ್ಲ ಸಿದ್ಧತೆಗಳಿದ್ದರೆ ಅದಕ್ಕೊಂದು ಹೊಸ ಆಯಾಮ ಸಿಕ್ಕೀತು. ಇಲ್ಲದಿದ್ದಲ್ಲಿ ಎಲೆಯ ಮರೆಯ ಕಾಯಿಯಂತೆ ಲೋಕದ ಕಣ್ಣಿಗೆ ಬೀಳದೆ ಸ್ವಂತ ತೃಪ್ತಿಗಾಗಿ ಹಣ್ಣಾಗಿ ಬಿದ್ದೀತು.

ಬೋರಮ್ಮ-ಜವರಯ್ಯ ದಂಪತಿಯ ಬದುಕು ಕೂಡ ಕಲೆಗಾಗಿ ಮೀಸಲಾಗಿದ್ದು. ತತ್ವಪದವೇ ಅವರ ಬದುಕು. ಊರಿಗೆ ಬಂದ ಸ್ವಾಮಿಯೊಬ್ಬರು ಹಾಡುತ್ತಿದ್ದ ತತ್ವಪದಗಳು ಇವರನ್ನು ಸೆಳೆದಿತ್ತು. ಹೆಂಡತಿಯ ಒಪ್ಪಿಗೆ ಜೊತೆಗೆ ಅವಳೊಡನೆ ಬಂದರೆ ದೀಕ್ಷೆ ಕೊಡುತ್ತೇನೆ ಎಂದವರ ಮಾತಿನಂತೆ ದಂಪತಿ ದೀಕ್ಷೆ ಪಡೆದರು. ಜೀವನವನ್ನು ತತ್ವಪದಗಳೊಂದಿಗೆ ಕಳೆದರು. ಬದುಕು ಅವರಿಗೆ ಪರೀಕ್ಷೆಗಳನ್ನೊಡ್ಡುತ್ತಲೇ ಇತ್ತು. ಮಕ್ಕಳನ್ನು ಕಳೆದುಕೊಂಡರು. ದುಃಖ ಮರೆಯಲೆಂದು ಹಾಡಿದರು. ಕಲೆಯೇ ಜೀವನ ನಿರ್ವಹಣೆಯ ದಾರಿಯಾಗಿ ಕಂಡು ಅದನ್ನೇ ನೆಚ್ಚಿ ಬದುಕಿದರು. ಬಯಸಿ ಬಂದ ವಿದ್ಯಾರ್ಥಿಗಳಿಗೆ ಕಲಿಸಿದರು. ಸದ್ಗುರು ಜ್ಞಾನಾನಂದರ ತತ್ವ , ಮಹಾಲಿಂಗರ ತತ್ವ, ಶಿಶುನಾಳ ಶರೀಫರ ತತ್ವ,ಮಹಾಂತೇಶರ ತತ್ವಪದಗಳನ್ನು ಹಾಡುವುದಲ್ಲದೆ ತಾವಾಗಿಯೇ ಕೆಲವು ಗೀತೆಗಳನ್ನು ರಚಿಸಿ ಹಾಡುತ್ತಾರೆ. ಇವರ ಕಲಾಸೇವೆ ಗುರುತಿಸಿ ಹತ್ತು ಹಲವು ಸಂಘಸಂಸ್ಥೆಗಳು ಪುರಸ್ಕರಿಸಿವೆ. ಈ ಪುರಸ್ಕಾರದ ಗರಿಗಳು ಮಾತ್ರ ಇವರು ಗಳಿಸಿದ ಸಂಪತ್ತು. ಈಗ ಇಳಿ ವಯಸ್ಸು. ಆರ್ಥಿಕ ನಿರ್ವಹಣೆ ಕಷ್ಟಕರವಾಗಿದೆ. ಇವರ ಅಮಾಯಕತೆಯನ್ನು ದುರುಪಯೋಗ ಮಾಡಿ ತಮ್ಮ ಬೇಳೆ ಬೇಯಿಸಿಕೊಂಡವರು ಹಲವರು. ಇವರ ಹೆಸರಿನಲ್ಲಿ ಗ್ಯಾಸು ಕನೆಕ್ಷನ್ ಮಾಡಿ ಕೊಡುತ್ತೇನೆಂದು ತಮಗೆ ಮಾಡಿಸಿಕೊಂಡು ಇವರಿಗೀಗ ಸೀಮೆಎಣ್ಣೆಯೂ ದೊರಕದಂತೆ ಮಾಡಿರುವಂತಹ ಮೋಸಗಳು ಇವರಿಗಾಗಿವೆ.

ಒಮ್ಮೆ ಜೇನು ಹುಳವನ್ನು ಯಾರೋ ಕೇಳಿದರಂತೆ. ‘ಹೂವಿಂದ ಹೂವಿಗೆ ಹಾರಿ ಕಷ್ಟಪಟ್ಟು ಮಕರಂದವನ್ನು ಸಂಗ್ರಹಿಸಿ ತಂದು ಜೇನಾಗಿ ಪರಿವರ್ತಿಸುವೆ. ಅದನ್ನು ಒಂದೇಟಿಗೆ ಮಾನವರು ಕದಿಯುತ್ತಾರಲ್ಲಾ, ನಿನಗೆ ಬೇಸರವಾಗುವುದಿಲ್ಲವೇ?’ ಜೇನು ಹುಳ ನಕ್ಕು ಹೇಳಿತಂತೆ-‘ಅವರು ಜೇನು ಕದಿಯಬಹುದು. ಆದರೆ ಜೇನು ತಯಾರಿಸುವ ವಿದ್ಯೆ ಕದಿಯಲು ಸಾಧ್ಯವೇ? ಅದು ಎಲ್ಲಿಯವರೆಗೆ ನನ್ನ ಜೊತೆ ಇರುವುದೋ ಅಲ್ಲಿಯವರೆಗೆ ನಾನು ಬೇಸರಿಸುವ ಅಗತ್ಯವಿಲ್ಲ’. ಇಂತಹ ನಂಬಿಕೆಯೇ ಜವರಯ್ಯ ದಂಪತಿಯದ್ದು ಕೂಡ. ಹಾಗಾಗಿ ಇಂತಹ ಜಾನಪದ ಕಲಾವಿದರಿಗೆ ಆಗೀಗ ಹಣಕೊಟ್ಟು ಸಹಾಯ ಮಾಡುತ್ತೇವೆಂದು ಹೇಳುವ ಬದಲು ಅವರ ಕಲೆಯನ್ನು ಪ್ರೋತ್ಸಾಹಿಸಿ ಅವರ ಸ್ವಾವಲಂಬಿ ಬದುಕಿಗೆ ಪೂರಕವಾಗುವಂತೆ ವೇದಿಕೆ ಸಿಗುವಂತೆ ಮಾಡುವುದೇ ಅವರಿಗೆ ಮಾಡುವ ಅತಿ ದೊಡ್ಡ ಸಹಾಯ.

ಇವರನ್ನು ಗುರುತಿಸಿ ಸಾಮಾಜಿಕ ಜಾಲತಾಣದ ಉತ್ತಮ ಕನ್ನಡ ಸಂಘಟನೆಯಾದ 3K ಇವರಿಗೆ ಈ ಬಾರಿಯ ರಾಜ್ಯೋತ್ಸವ ಸನ್ಮಾನ ನೀಡಿ ಇದೇ ತಿಂಗಳ 26ರಂದು ಬೆಂಗಳೂರಿನಲ್ಲಿ ಗೌರವಿಸುತ್ತಿದೆ. ಮಾತ್ರವಲ್ಲದೆ ಇವರ ತತ್ವಪದಗಳನ್ನು ಕೇಳುವ ಅವಕಾಶವನ್ನು ಜನರಿಗೆ ಮಾಡಿಕೊಡುತ್ತಿದೆ. ಒಂದು ಉತ್ತಮ ಕಾರ್ಯ ಮಾಡುತ್ತಿರುವ ಸಂಘಟನೆಗೆ ಶುಭ ಕೋರುತ್ತ ಜವರಯ್ಯ ಮತ್ತು ಬೋರಮ್ಮ ದಂಪತಿಯ ಇಳಿವಯಸ್ಸಿನ ಬದುಕು ಸಹನೀಯವಾಗಿ ಸಾಗಲಿ ಎಂಬ ಹಾರೈಕೆ.

(ಲೇಖಕರು ಸಾಹಿತಿ)

Leave a Reply

Your email address will not be published. Required fields are marked *

Back To Top