ಜೀವನದ ಮೌಲ್ಯಗಳಿಗೆ ಬದ್ಧರಾಗಿದ್ದ ಡಿವಿಜಿ

ಕೋಲಾರ: ಡಿ.ವಿ.ಗುಂಡಪ್ಪ ಅವರು ಜೀವನದ ಮೌಲ್ಯಗಳಿಗೆ ಬದ್ಧರಾಗಿದ್ದರು ಎಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಕೆ.ಎನ್.ಪರಮೇಶ್ವರ ಅಭಿಪ್ರಾಯಪಟ್ಟರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಮಹಿಳಾ ಕಾಲೇಜು ವತಿಯಿಂದ ಬಟ್ರಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಸ್ಕೌಟ್-ಗೈಡ್ ಸಮುದಾಯ ಅಭಿವೃದ್ಧಿ ಶಿಬಿರದಲ್ಲಿ ಸೋಮವಾರ ನಡೆದ ಡಿವಿಜಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಿವಿಜಿ ನಾಡು ಕಂಡ ಶ್ರೇಷ್ಠ ಪತ್ರಕರ್ತರು ಹಾಗೂ ಸಾಹಿತಿಗಳು. ಬದುಕಿನುದ್ದುಕ್ಕೂ ಸರಳತೆ ರೂಪಿಸಿಕೊಂಡು ಸಾರಸ್ವತಲೋಕದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಯಾವುದೇ ಪ್ರತಿಫಲವಿಲ್ಲದೆ ಸಾಹಿತ್ಯದಿಂದ ಬಂದ ಉಡುಗೊರೆಗಳನ್ನು ಸಮಾಜಕ್ಕೆ ಅರ್ಪಿಸುತ್ತಿದ್ದರು ಎಂದರು.

ಜಿಲ್ಲಾ ಸ್ಕೌಟ್ಸ್-ಗೈಡ್ ಆಯುಕ್ತ ಬಾಬು ಮಾತನಾಡಿ, ಸಾಹಿತ್ಯ ಒಂದು ರೀತಿಯ ದೇಶಸೇವೆ. ಇಂತಹ ಸೃಜನಶೀಲತೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಗುರುತನ್ನು ಬಿಟ್ಟು ಹೋಗಬೇಕು ಎಂದರು.

ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ ಮಾತನಾಡಿ, ಮಂಕುತಿಮ್ಮನ ಕಗ್ಗವು ಎರಡನೇ ಭಗವದ್ಗೀತೆ ಎಂದೇ ಹೆಸರು ಪಡೆದಿದೆ. ಸಮಾಜವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಅವರ ಕಾವ್ಯ ಇಂದಿಗೂ ಪ್ರಸ್ತುತವೆನ್ನಿಸುತ್ತವೆ. ಮಂಕುತಿಮ್ಮನ ಕಗ್ಗಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ದಕ್ಕಲಿಲ್ಲ. ಇದರಿಂದ ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ನೋವುಂಟು ಮಾಡಿದೆ ಎಂದರು.

ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ, ಕವಿ ಶರಣಪ್ಪ ಗಬ್ಬೂರು, ಸ್ಕೌಟ್ಸ್-ಗೈಡ್ ಮಾಸ್ಟರ್ ನವೀನ್​ಕುಮಾರ್, ಉಪನ್ಯಾಸಕಿ ಹಾಗೂ ರೇಂಜರ್ ಮಂಜುಳಾ, ಚೌಡಪ್ಪ ಉಪಸ್ಥಿತರಿದ್ದರು.