ಜೀವಜಲಕ್ಕೆ ಹಾಹಾಕಾರ!

ಕುಮಟಾ: ತಾಲೂಕಿನ ಹೊಲನಗದ್ದೆಯ ಜನತಾ ಪ್ಲಾಟ್, ಮದ್ಗುಣಿ ಭಾಗದಲ್ಲಿ ಬಾವಿಗಳು ಸಂಪೂರ್ಣ ಬತ್ತಿವೆ. ಹೀಗಾಗಿ, ಈ ಭಾಗದ ಪ್ರತಿ ಮನೆಗಳಲ್ಲೂ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ.

ಪಟ್ಟಣದ ಗಡಿಯಂಚಿಗಿರುವ ಹಾಗೂ ಹೊಲನಗದ್ದೆ ಪಂಚಾಯಿತಿ ವ್ಯಾಪ್ತಿಗೊಳಪಟ್ಟ 200ಕ್ಕೂ ಹೆಚ್ಚು ಕುಟುಂಬಗಳು ವಾಸ್ತವ್ಯ ಇರುವ ಪ್ರದೇಶವೇ ಜನತಾ ಪ್ಲಾಟ್. ಇದಕ್ಕೆ ತಾಗಿದಂತೆ ಮದ್ಗುಣಿ ಹಾಗೂ ಸುತ್ತಮುತ್ತ ಜನವಸತಿ ಪ್ರದೇಶಗಳಿವೆ. ಫೆಬ್ರವರಿ ತಿಂಗಳಾಂತ್ಯಕ್ಕೆ ಇಲ್ಲಿನ ಬಾವಿಗಳಲ್ಲಿ ನೀರಿನ ಕೊರತೆ ಶುರುವಾಗುತ್ತದೆ. ಸರ್ಕಾರಿ ಬಾವಿಯಲ್ಲಿ ಯಾವತ್ತೂ ಮೂರ್ನಾಲ್ಕು ಹಗ್ಗಗಳಿಗೆ ಕೊಡ ಕಟ್ಟಿ ಬಿಟ್ಟಿರುತ್ತಾರೆ. ತಾಸಿಗೊಮ್ಮೆ ಅರ್ಧ ಕೊಡ ತುಂಬಿದರೂ ಸಾಕು ಎಂಬಂಥ ಸ್ಥಿತಿ ಇದೆ. ಹೊಲನಗದ್ದೆಯ ಸಮುದ್ರ ತಟದ ಬಾವಿಯಿಂದ ಪೂರೈಕೆಯಾಗುವ ಜಲನಿರ್ಮಲ ಯೋಜನೆಯ ನೀರು ಕೂಡ ಸವುಳಾಗಿದೆ. ಈ ನೀರನ್ನೂ ಬಿಡಲಾಗುತ್ತಿಲ್ಲ. ಇಡೀ ಪ್ರದೇಶದಲ್ಲಿರುವ 2 ಹಳೆಯ ಬೋರ್​ವೆಲ್​ಗಳೇ ನೀರಿಗೆ ಆಸರೆಯಾಗಿವೆ.

ಸೈಕಲ್ ಮೇಲೆ ಕೊಡದಲ್ಲಿ ನೀರು ಸಾಗಿಸುತ್ತಿದ ವೃದ್ಧ ಮಹಮ್ಮದ್ ಸಾಬ್ ದಂಪತಿ ‘ವಿಜಯವಾಣಿ’ ಜೊತೆ ಮಾತನಾಡಿ, ‘ಇಲ್ಲಿ ಕುಡಿಯುವ ನೀರಿನದೇ ದೊಡ್ಡ ಸಮಸ್ಯೆ. ನಮಗೆ ಇದೊಂದು ಬೋರ್​ವೆಲ್ ಬಿಟ್ಟರೆ ಬೇರೆ ಏನೂ ಇಲ್ಲ. ನಮ್ಮಂಥ ಮುದುಕರು ತಾಸುಗಟ್ಟಲೆ ಕಾದು ಕೊಡ ತುಂಬಿಕೊಂಡು 2 ಫರ್ಲಾಂಗ್ ದೂರದ ಮನೆಗೆ ನೀರು ಸಾಗಿಸುವುದು ಅನಿವಾರ್ಯ. ಜಲನಿರ್ಮಲದ ನೀರು ಸವುಳು ಎಂದು ಪೂರೈಕೆ ಮಾಡುತ್ತಿಲ್ಲ. ದಿನದ ನಾಲ್ಕೈದು ಕೊಡ ಶೌಚದ ಬಳಕೆಗಾದರೂ ಪ್ರಯೋಜನವಾಗುತ್ತಿತ್ತು’ ಎಂದರು.

ಜನತಾ ಪ್ಲಾಟ್ ಭಾಗಕ್ಕೆ ಪುರಸಭೆಯ ಮರಾಕಲ್ ನೀರು ಪೂರೈಕೆ ಸಾಧ್ಯವಾದರೆ ಬಹಳ ಉಪಯೋಗವಾಗುತ್ತಿತ್ತು. ಪ್ರತಿವರ್ಷ ಬೇಸಿಗೆಯ ದಿನಗಳಲ್ಲಿ ಅತ್ತ ಪಂಚಾಯಿತಿಯ ನೀರು ಇಲ್ಲದೆ, ಇತ್ತ ಬಾವಿಗಳೂ ಖಾಲಿಯಾಗಿದ್ದರಿಂದ ನಿತ್ಯ ಹಣ ಕೊಟ್ಟು ನೀರು ಖರೀದಿಸಬೇಕಾಗುತ್ತದೆ. ಸಂಬಂಧಿಸಿದವರು ಕೂಡಲೇ ಟ್ಯಾಂಕರ್ ಮೂಲಕ ನೀರು ವಿತರಿಸಲು ಮುಂದಾಗಬೇಕು ಎಂದು ನಾಗರಿಕರು ಮನವಿ ಮಾಡಿದ್ದಾರೆ.

ನೀರಿನ ಸಮಸ್ಯೆ ಇರುವುದು ಸತ್ಯ. ಜಲನಿರ್ಮಲ ಯೋಜನೆಯ ಬಾವಿಯಲ್ಲೂ ನೀರಿನ ಕೊರತೆಯಾಗಿದೆ. ಹೀಗಾಗಿ ಪಂಚಾಯಿತಿಯಿಂದ ಜನತಾ ಪ್ಲಾಟ್​ನಲ್ಲಿ ಹೊಸದಾಗಿ ಬೋರ್​ವೆಲ್ ಕೊರೆಸುತ್ತಿದ್ದೇವೆ. ಅಲ್ಲಿ ಅಂತರ್ಜಲದ ಸಮಸ್ಯೆ ಇದೆ. ತಕ್ಕಮಟ್ಟಿಗಾದರೂ ನೀರಿನ ಬೇಡಿಕೆ ನೀಗಬಹುದೆಂಬ ನಿರೀಕ್ಷೆಯಿದೆ. ಈಗಾಗಲೇ ತಾಲೂಕು ಆಡಳಿತದಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಲಿಖಿತ ಬೇಡಿಕೆ ಕಳುಹಿಸಿದ್ದೇವೆ. ಪ್ರತಿವರ್ಷದಂತೆ ಈ ವರ್ಷವೂ ಶೀಘ್ರ ಟ್ಯಾಂಕರ್ ಮೂಲಕ ನೀರು ವಿತರಿಸಬಹುದು.

| ರಾಘವೇಂದ್ರ ಪಟಗಾರ

ಹೊಲನಗದ್ದೆ ಪಂಚಾಯಿತಿ ಅಧ್ಯಕ್ಷ