ಜೀವಜಲಕ್ಕೆ ಪರದಾಟ ಪಕ್ಕಾ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಜನ ಈ ವರ್ಷವೂ ಕುಡಿಯುವ ನೀರಿಗಾಗಿ ಪರದಾಡುವುದು ತಪು್ಪವುದಿಲ್ಲ. ಕಡು ಬೇಸಿಗೆಯಲ್ಲಿ ಹನಿ ನೀರಿಗೂ ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ಬರಬಹುದು.

ಸದ್ಯದ ಪರಿಸ್ಥಿತಿಯಲ್ಲಿ ಮಲಪ್ರಭಾ ಜಲಾಶಯದಿಂದ ತರಲಾಗುತ್ತಿರುವ ನೀರು ಅವಳಿ ನಗರದ ಜನಸಂಖ್ಯೆಗೆ ಸಾಕಾಗುವುದಿಲ್ಲ. ಹಾಗಾಗಿ ದಿನಗಳನ್ನು ಹೊಂದಾಣಿಕೆ ಮಾಡಿಕೊಂಡು ಬಡಾವಣೆಗಳಿಗೆ ಎಂಟು- ಹತ್ತು ದಿನಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಒಂದು ವೇಳೆ ವಿದ್ಯುತ್ ಕೈಕೊಟ್ಟರೆ, ಪೈಪ್​ಲೈನ್​ನಲ್ಲಿ ಆಕಸ್ಮಿಕ ಅಡ್ಡಿಗಳು ಎದುರಾದರೆ ಮತ್ತೆ ಎರಡ್ಮೂರು ದಿನ ನೀರು ಸಿಗದು.

ಸದ್ಯ ನಿರಂತರ ನೀರು (24- 7) ಯೋಜನೆಯ ಪ್ರದೇಶಗಳನ್ನು ಹೊರತು ಪಡಿಸಿದರೆ ಉಳಿದ ಕಡೆಗಳಲ್ಲಿ ಎಂಟು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಹಾಗೆ ನೋಡಿದರೆ ನಿರಂತರ ನೀರು ಯೋಜನೆಯಡಿ ಕೆಲವೇ ವಾರ್ಡ್​ಗಳು ಬರುತ್ತವೆ. ಪ್ರಾತ್ಯಕ್ಷಿಕೆಯ ಕೆಲ ವಾರ್ಡ್​ಗಳಲ್ಲಿ ದಿನಕ್ಕೆ ಎರಡು ತಾಸು ಮಾತ್ರ ನೀರು ಕೊಡಲಾಗುತ್ತಿದೆ.

ಜಲ ಮೂಲಗಳು ಯಾವವು?: ಹುಬ್ಬಳ್ಳಿ- ಧಾರವಾಡ ಅವಳಿ ನಗರಕ್ಕೆ ನೀರಸಾಗರ ಹಾಗೂ ಮಲ ಪ್ರಭಾ ಜಲಾಶಯದಿಂದ ನೀರು ಪಡೆಯಲಾಗುತ್ತಿತ್ತು. ಕಳೆದ ನಾಲ್ಕೈದು ವರ್ಷದಿಂದ ಬರಗಾಲದ ಪರಿಣಾಮ ನೀರಸಾಗರ ಜಲಾಶಯ ಬತ್ತಿ ಹೋಗಿದ್ದು, ಈಗ ಸಂಪೂರ್ಣ ಮಲಪ್ರಭಾ ನೀರನ್ನೇ ಅವಳಿ ನಗರ ಆಶ್ರಯಿಸಿದೆ. ನಗರಕ್ಕೆ ಬೇರೆ ನೀರಿನ ಮೂಲಗಳಿಲ್ಲ. ಕೆಲವು ಕೊಳವೆ ಬಾವಿಗಳು ಇದ್ದರೂ ಬೇಸಿಗೆಯಲ್ಲಿ ಅವುಗಳಲ್ಲಿ ನೀರಿನ ಲಭ್ಯತೆ ತೀರಾ ಕಡಿಮೆ. ಉಣಕಲ್ಲ ಕೆರೆಯಂತಹ ಇದ್ದ ಜಲಮೂಲಗಳನ್ನೂ ಈಗಾಗಲೇ ಹಾಳು ಮಾಡಿಯಾಗಿದೆ.

ಸದ್ಯದ ಸ್ಥಿತಿ ಏನು?: ಪ್ರಸ್ತುತ ಹುಬ್ಬಳ್ಳಿ- ಧಾರವಾಡ ಅವಳಿ ನಗರಕ್ಕೆ ನಿತ್ಯ ಸುಮಾರು 200 ಎಂಎಲ್​ಡಿ (ದಶಲಕ್ಷ ಲೀಟರ್) ನೀರು ಬೇಕು. ಆದರೆ, ಮಲಪ್ರಭಾ ಜಲಾಶಯದಿಂದ 160 ಎಂಎಲ್​ಡಿ ಮಾತ್ರ ಪಂಪ್ ಮಾಡಲು ಸಾಧ್ಯವಾಗುತ್ತಿದೆ. ನಿತ್ಯ 40 ಎಂಎಲ್​ಡಿ ಕೊರತೆಯಾಗುತ್ತಿದೆ. ಇದರಲ್ಲಿ ಹುಬ್ಬಳ್ಳಿ ನಗರಕ್ಕೆ 130 ಎಂಎಲ್​ಡಿ ಬೇಕಾಗುತ್ತದೆ. ಆದರೆ, ಸಿಗುತ್ತಿರುವುದು 90 ಎಂಎಲ್​ಡಿ. ಹುಬ್ಬಳ್ಳಿಯೇ ನೀರಿನ ಕೊರತೆ ಎದುರಿಸುತ್ತಿದೆ. ಈ ಕೊರತೆ ನೀಗಿಸಲು 24 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಸದ್ಯ ಜಾರಿ ಹಂತದಲ್ಲಿದೆ.

ಕಾಮಗಾರಿ ಆರಂಭ

ಅವಳಿ ನಗರಕ್ಕೆ ವಿಶೇಷವಾಗಿ ಹುಬ್ಬಳ್ಳಿ ನಗರಕ್ಕೆ 40 ಎಂಎಲ್​ಡಿ ನೀರು ತರುವ 24 ಕೋಟಿ ರೂ.ನ ಯೋಜನೆಗೆ ಕಳೆದ ವರ್ಷವೇ ಸರ್ಕಾರದ ಅನುಮೋದನೆ ಸಿಕ್ಕಿದೆ. ಆದರೆ, ಅದಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದ್ದು ಈ ವರ್ಷದ ಜನವರಿಯಲ್ಲಿ, ಇದೀಗ ಅದರ ಕಾಮಗಾರಿ ಆರಂಭವಾಗಿದೆ. ಯೋಜನೆಯಡಿ ಸವದತ್ತಿಯಲ್ಲಿ ಹೆಚ್ಚುವರಿ ಪಂಪ್ ಅಳವಡಿಕೆ, ಅಮ್ಮಿನಬಾವಿಯಲ್ಲಿ ಪಂಪ್ ಹಾಗೂ ಫಿಲ್ಟರ್ ಅಳವಡಿಸುವ ಕಾರ್ಯ ನಡೆದಿದೆ. ಟೆಂಡರ್​ದಾರರಿಗೆ ಡಿಸೆಂಬರ್ ಕಾಲಮಿತಿ ವಿಧಿಸಲಾಗಿದೆ. ಅಷ್ಟರೊಳಗೆ ಕೆಲಸ ಮುಗಿಯುವ ವಿಶ್ವಾಸವಿದೆ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು. ಏನೇ ಆದರೂ, ಈ ವರ್ಷದ ಬೇಸಿಗೆಯಲ್ಲಿ ಕೊರತೆಯಾಗುವ ನೀರು ಹೊಂದಾಣಿಕೆ ಮಾಡುವುದೇ ಅಧಿಕಾರಿಗಳಿಗೆ ಸವಾಲಿನ ಕೆಲಸ. ಹಾಗಾಗಿ ನೀರಿನ ಹಾಹಾಕಾರ ಗ್ಯಾರಂಟಿ ಎಂಬಂತಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಹುಬ್ಬಳ್ಳಿ- ಧಾರವಾಡದಲ್ಲಿ ಎಂಟು ಹತ್ತು ದಿನಕ್ಕೆ ನೀರು ಕೊಡಲಾಗುತ್ತಿದೆ. ಹುಬ್ಬಳ್ಳಿಯ ಗ್ರಾಮೀಣ ಪ್ರದೇಶ, ನೇಕಾರನಗರ ಹಾಗೂ ಅಕ್ಕಪಕ್ಕದ ಬಡಾವಣೆಗಳು, ಹಳೇಹುಬ್ಬಳ್ಳಿ ಸೇರಿ ಬಹುತೇಕ ಕಡೆಗಳಲ್ಲಿ ಈಗ 10 -11 ದಿನಕ್ಕೆ ಮಲಪ್ರಭಾ ನೀರು ಬರುತ್ತಿದೆ. ಉಳಿದ ದಿನಗಳಲ್ಲಿ ಕೊಳವೆ ಬಾವಿಯ ನೀರು ಕೊಟ್ಟರೂ ಅದು ಸಮರ್ಪಕವಾಗುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.

24 ಕೋಟಿ ರೂ. ಯೋಜನೆಯಡಿ ಸವದತ್ತಿ ಹಾಗೂ ಅಮ್ಮಿನಬಾವಿಯಲ್ಲಿ ಪಂಪ್ ಹಾಗೂ ಫಿಲ್ಟರ್ ಅಳವಡಿಸುವ ಕಾರ್ಯ ನಡೆದಿದೆ. ಕೊರತೆಯಾಗುವ 40 ಎಂಎಲ್​ಡಿ ನೀರನ್ನು ಪಂಪ್ ಮಾಡಿ ಈಗಿರುವ ಪೈಪ್​ಲೈನ್​ನಲ್ಲೇ ಹುಬ್ಬಳ್ಳಿಗೆ ಪೂರೈಕೆ ಮಾಡಬಹುದು. ನವೆಂಬರ್ ವೇಳೆಗೆ ಕಾಮಗಾರಿ ಮುಗಿಯಬಹುದು.

| ರವೀಂದ್ರ ಎಇಇ, ಜಲಮಂಡಳಿ, ಧಾರವಾಡ