ಜೀವಜಲಕ್ಕೆ ಅನುದಾನ ಮೀಸಲಿಡಿ

ಹಾವೇರಿ: ಕುಡಿಯುವ ನೀರಿನ ಕೆಲಸಗಳಿಗೆ ಆದ್ಯತೆ ನೀಡಿ, ನೀರಿನ ಯೋಜನೆಗಳಿಗೆ ಅನುದಾನ ಮೀಸಲಿಟ್ಟು ಉಳಿದ ಕೆಲಸಗಳನ್ನು ಕೈಗೆತ್ತಿಕೊಳ್ಳಿ ಎಂದು ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತಾಪಂ ಸಭಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯುತ್ ಕಂಪನಿಯವರು ಕುಡಿಯುವ ನೀರಿನ ಕೊಳವೆಬಾವಿ, ಶುದ್ಧ ನೀರಿನ ಘಟಕಗಳಿಗೆ ವಿದ್ಯುತ್ ಸಂಪರ್ಕ ಕೊಡಲು ವಿಳಂಬ ಮಾಡಬಾರದು. ಹಲವೆಡೆ ನಿರಂತರವಾಗಿ ವಿದ್ಯುತ್ ಚಾಲ್ತಿಯಲ್ಲಿರಲ್ಲ. ಆದ್ದರಿಂದ ವಿದ್ಯುತ್ ಇದ್ದಾಗ ನೀರು ಪೂರೈಸಬೇಕು. ಕೆಲವೆಡೆ ಟ್ಯಾಂಕ್ ತುಂಬಿ ನೀರು ಪೋಲಾದರೂ ಬಂದ್ ಮಾಡುವವರು ಇರುವುದಿಲ್ಲ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ವಾಲ್​ವುನ್​ಗಳ ಕಾರ್ಯವೈಖರಿಯತ್ತ ಗಮನಹರಿಸಬೇಕು. ಸೂಚನೆ ನೀಡಿದರೂ ಕೇಳದಿದ್ದರೆ ಸಂಬಳ ತಡೆಹಿಡಿಯಬೇಕು ಎಂದು ಆದೇಶಿಸಿದರು.

ಪಿಡಿಒ ಕಾರ್ಯವೈಖರಿ ಪರಿಶೀಲಿಸಿ: ತಾಪಂ ಇಒ ಅವರು ಗ್ರಾಪಂಗಳಿಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಪಿಡಿಒಗಳ ಕಾರ್ಯವೈಖರಿ ಪರಿಶೀಲಿಸಬೇಕು. ಪಂಚಾಯಿತಿಗಳಿಗೆ ಅವರು ಬರುತ್ತಾರೋ, ಇಲ್ಲವೊ ಎಂಬುದನ್ನು ಅರಿತುಕೊಳ್ಳಬೇಕು. ಬಾರದ ಪಿಡಿಒಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಕರಿಯಣ್ಣನವರ ಸೂಚಿಸಿದರು.

ಕಳಪೆ ಆಹಾರ ವಾಪಸ್ ಕಳುಹಿಸಿ: ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರ, ಇತರೆ ಸಾಮಗ್ರಿ ಕಳಪೆಯಾಗಿದ್ದರೆ ಕೂಡಲೇ ವಾಪಸ್ ಕಳುಹಿಸಿ. ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ಕಳಪೆ ಆಹಾರ ಕೊಡಬಾರದು ಎಂದು ಜಿಪಂ ಅಧ್ಯಕ್ಷರು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಶಿಶು ಕಲ್ಯಾಣಾಧಿಕಾರಿ, ಕಳಪೆಯಾಗಿದ್ದ ಅಡುಗೆ ಸಾಮಗ್ರಿಗಳನ್ನು ಪೂರೈಸಿದವರಿಂದಲೇ ದುರಸ್ತಿ ಮಾಡಿಸಿದ್ದೇವೆ ಎಂದರು.

ಪರೀಕ್ಷೆಗೆ ಸಿದ್ಧ: ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಗತಿ ವಿವರ ನೀಡಿ, ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು 13 ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಿಸಿ ಕ್ಯಾಮರಾ, ನೀರು, ಡೆಸ್ಕ್ ವ್ಯವಸ್ಥೆ ಮಾಡಲಾಗಿದೆ. ಫಲಿತಾಂಶ ಹೆಚ್ಚಳಕ್ಕಾಗಿ ವಿಶೇಷ ತರಗತಿ, ತಜ್ಞರಿಂದ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಜಿಪಂ ಸದಸ್ಯರಾದ ಕೊಟ್ರೇಶಪ್ಪ ಬಸೇಗಣ್ಣಿ, ಸಿದ್ದರಾಜ ಕಲಕೋಟಿ, ತಾಪಂ ಅಧ್ಯಕ್ಷ ಕರಿಯಪ್ಪ ಉಂಡಿ, ಉಪಾಧ್ಯಕ್ಷೆ ಸಾವಿತ್ರಿ ಮರಡೂರ, ಜಿಪಂ ಉಪ ಕಾರ್ಯದರ್ಶಿ ಗೋವಿಂದಸ್ವಾಮಿ, ತಾಪಂ ಇಒ ಅನ್ನಪೂರ್ಣ ಮುದಕಣ್ಣನವರ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ನೀತಿ ಸಂಹಿತೆ ಜಾರಿಯೊಳಗೆ ಕೆಲಸ ಆರಂಭಿಸಿ..

ಚುನಾವಣೆ ನೀತಿ ಸಂಹಿತೆ ಘೊಷಣೆಯಾಗುವ ಮೊದಲು ಅಧಿಕಾರಿಗಳು ಆದ್ಯತೆ ಮೇರೆಗೆ ತುರ್ತು ಕಾಮಗಾರಿಗಳಿಗೆ ಮಂಜೂರಾತಿ ಪಡೆದು ಕೆಲಸ ಆರಂಭಿಸಬೇಕು. ವಸತಿ ಯೋಜನೆಯ ಮನೆಗಳಿಗೆ ಕೂಡಲೇ ಜಿಪಿಎಸ್ ಮಾಡಿ ಮಾಹಿತಿ ಅಪ್​ಲೋಡ್ ಮಾಡಬೇಕು. ಚುನಾವಣೆ ಪೂರ್ವ ಮಂಜೂರಾದ ಕೆಲಸಗಳಿಗೆ ಚುನಾವಣಾ ನೀತಿ ಸಂಹಿತಿ ಅಡ್ಡಿಯಾಗುವುದಿಲ್ಲ. ಹೊಸ ಕೆಲಸಗಳಿಗೆ ಮಾತ್ರ ನೀತಿ ಸಂಹಿತೆ ಅಡ್ಡಿಯಾಗುತ್ತದೆ. ಇದನ್ನೇ ನೆಪವಾಗಿಟ್ಟು ಕೊಂಡು ಅಧಿಕಾರಿಗಳು ‘ಚುನಾವಣಾ ನೀತಿ ಸಂಹಿತೆ ಇದೆ. ಆ ಕೆಲಸ ಈಗ ಆಗಲ್ಲ’ ಎಂದು ಹೇಳಿ ಜನರ ಕೆಲಸಗಳನ್ನು ಮಾಡದೇ ಇರಬಾರದು ಎಂದು ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ತಾಕೀತು ಮಾಡಿದರು.

ಲೈಂಗಿಕ ಕಿರುಕುಳ ಆರೋಪ

ನಗರದ ನಾಗೇಂದ್ರನಮಟ್ಟಿ ಸರ್ಕಾರಿ ಉರ್ದು ಬಾಲಕಿಯರ ಶಾಲೆಯಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಆ ಶಾಲೆಗೆ ಕೂಡಲೇ ಸಿಸಿ ಕ್ಯಾಮರಾ ಅಳವಡಿಸಬೇಕು. ಶಾಲೆಗೆ ಇಂದೇ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಜಿಪಂ ಅಧ್ಯಕ್ಷರು ಬಿಇಒಗೆ ಆದೇಶಿಸಿದರು.