ಜೀವಜಲಕ್ಕಾಗಿ ನಿತ್ಯ ಪರದಾಟ

ಸವಣೂರ: ಇಲ್ಲಿ ಜೀವಜಲಕ್ಕಾಗಿ ನಿತ್ಯ ಪರದಾಟ… ಅಲಿಯಬೇಕು ಮೈಲುಗಟ್ಟಲೇ ದೂರ… ಕೊಡ ನೀರಿಗಾಗಿ ಬಿಡಬೇಕು ದಿನದ ಕೂಲಿ ಕೆಲಸ…
ತಾಲೂಕಿನ ಅವಳಿ ಗ್ರಾಮ ತೆಗ್ಗಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗುಂಡೂರ (ಹಳೇಗುಂಡೂರ ಹಾಗೂ ಹೊಸ ಗುಂಡೂರ)ನಲ್ಲಿನ ದುಸ್ಥಿತಿ ಇದು. ಇಲ್ಲಿ 1200 ಜನಸಂಖ್ಯೆ ಇದೆ. ಈ ಗ್ರಾಮಗಳಿಗೆ ನೀರು ಸರಬರಾಜು ಮಾಡಲು 9 ಬೋರ್​ವೆಲ್​ಗಳಿವೆಯಾದರೂ ಇದರಲ್ಲಿ ಅಂತರ್ಜಲ ಕುಸಿತದಿಂದ 5 ಸಂಪೂರ್ಣ ಬತ್ತಿಹೋಗಿದ್ದು, ಮೂರರಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಬರುತ್ತದೆ. ಈ ನೀರು ಯಾವುದಕ್ಕೂ ಸಾಲುವುದಿಲ್ಲ. ಹೀಗಾಗಿ, ನೀರಿಗಾಗಿ ಜನತೆ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
4-5 ದಿನಕ್ಕೊಮ್ಮೆ ನೀರು: ದಿನ ನಿತ್ಯ ಕುಡಿಯುವ ನೀರು ಒದಗಿಸುತ್ತಿದ್ದ ಗ್ರಾಮ ಪಂಚಾಯಿತಿ ಈಗ 4-5 ದಿನಕ್ಕೊಮ್ಮೆ ನೀರು ಬಿಡುತ್ತಿದೆ. ಅದು ಕೂಡ ಒಬ್ಬರಿಗೆ 5- 6 ಕೊಡ ಸಿಕ್ಕರೆ ಹೆಚ್ಚು. ಗಂಟೆಗಟ್ಟಲೇ ಪಾಳೆಯದಲ್ಲಿ ನಿಂತರೂ ಕೊಡ ನೀರು ಹಿಡಿಯಲು ಹೆಣಗಾಡಬೇಕು. ಇಂತಹ ದುಸ್ಥಿತಿ ಇದ್ದರೂ ಅಧಿಕಾರಿಗಳು ಕಂಡೂ ಕಾಣದಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಾನುವಾರುಗಳ ರೋದನೆ: ಜನತೆಯ ಪಾಡು ಹೀಗಾದರೆ, ಇನ್ನು ಜಾನುವಾರುಗಳ ಪಾಡು ಹೇಳತೀರದ್ದು. ಕೆರೆ, ಹೊಂಡಗಳು ಬತ್ತಿದ್ದು, ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತಾಗಿದೆ. ಹೀಗಾಗಿ, ಜಾನುವಾರುಗಳಿಗೆ ಕುಡಿಯಲು ನೀರು ಸಂಗ್ರಹಿಸಲು ರೈತ ಸಮೂಹ ನಿತ್ಯ ಪರದಾಡುತ್ತಿದೆ. ವಾಹನಗಳನ್ನು ಹೊಂದಿದವರು ಹೇಗೋ ನೀರು ತರುತ್ತಾರೆ, ಬಡವರ ಪಾಡು? ಕೊಡ ಹೊತ್ತುಕೊಂಡು, ಒತ್ತುಬಂಡಿ ಎಳೆದುಕೊಂಡು ಕಿ.ಮೀ.ಗಟ್ಟಲೇ ನೀರಿಗಾಗಿ ಕ್ರಮಿಸುವುದು ಸಾಮಾನ್ಯವಾಗಿದೆ.
ಕುರುಡರಾದರೆ ಅಧಿಕಾರಿಗಳು?: ಗ್ರಾಮೀಣ ಪ್ರದೇಶದಲ್ಲಿ ಇಷ್ಟೆಲ್ಲ ಸಮಸ್ಯೆ ಇದ್ದರೂ ಅಧಿಕಾರಿಗಳು ಕಂಡೂ ಕಾಣದಂತಿರುವುದು ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದೆ. ಜನರ ಸಂಕಷ್ಟಕ್ಕೆ ನೆರವಾಗದ ಅಧಿಕಾರಿಗಳು ಕುರುಡಾಗಿದ್ದಾರೆಯೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಕರಕ್ಕೆ ಕೈ ಚಾಚುವ ಅಧಿಕಾರಿಗಳು: ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಪೂರೈಸದಿದ್ದರೂ ನೀರಿನ ಕರ ವಸೂಲಿ ಮಾತ್ರ ಮರೆಯುವುದಿಲ್ಲ ನಮ್ಮ ಅಧಿಕಾರಿಗಳು. ಸಾರ್ವಜನಿಕ ನಳಗಳ ಕರ ವರ್ಷಕ್ಕೆ 145 ರೂ. ಕಟ್ಟಬೇಕು. ಇಲ್ಲವಾದಲ್ಲಿ ಮನೆಗೆ ಸಂಬಂಧಿಸಿದ ದಾಖಲೆಗಳು ದೊರೆಯುವುದಿಲ್ಲ. ಮನೆ ಮನೆ ನಲ್ಲಿಗಳಲ್ಲಿ ನೀರು ಬಾರದಿದ್ದರೂ ಕರ ಕಟ್ಟುವುದು ಮಾತ್ರ ಕಡ್ಡಾಯ. ಪಂಚಾಯಿತಿಯ ಈ ನಿಯಮಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. 4-5 ತಿಂಗಳಿಂದ ನೀರಿಗಾಗಿ ಪರದಾಡುತ್ತಿರುವುದನ್ನು ಕಂಡೂ ಕಾಣದಂತಿದ್ದ ಅಧಿಕಾರಿಗಳು ಈಗ ಕರ ವಸೂಲಿಗೆ ಬರುತ್ತಿದ್ದಾರೆ.
“ಅಂತರ್ಜಲ ಕುಸಿತದಿಂದಾಗಿ ಬೋರ್​ವೆಲ್​ಗಳಲ್ಲಿ ನೀರಿನ ಪ್ರಮಾಣ ಕನಿಷ್ಠ ಮಟ್ಟಕ್ಕೆ ಹೋಗಿದೆ. ಹೊಸ ಬೋರ್​ವೆಲ್​ಗಳನ್ನು ಕೊರೆಸಿದರೂ ನೀರು ಬೀಳುತ್ತಿಲ್ಲ. ನೀರಿರುವ ಖಾಸಗಿ ಬೋರ್​ವೆಲ್​ಗಳ ಮಾಲೀಕರ ಬಳಿ ರ್ಚಚಿಸಿ ನೀರು ಸರಬರಾಜಿಗೆ ಯೋಜನೆ ರೂಪಿಸಲಾಗಿದೆ.”
| ವಿಜಯಲಕ್ಷ್ಮೀ, ಪಿಡಿಒ, ಗಣತಿತೆಗ್ಗಿಹಳ್ಳಿ, ಗ್ರಾ.ಪಂ.
“ಗುಂಡೂರ ಗ್ರಾಮ ಹಾಗೂ ತಾಂಡಾ ನೀರಿನ ಸಮಸ್ಯೆ ನೀಗಿಸಲು ಪ್ರತಿದಿನ 3 ಟ್ಯಾಂಕರ್ ನೀರು ಪೂರೈಸಲು ಜಿ.ಪಂ. ಇಂಜಿನಿಯರ್ ವಿಭಾಗದ ಅಧಿಕಾರಿಗಳಿಗೆ ಕೋರಿಕೊಂಡರು ಸಹ ಪ್ರಯೋಜನವಾಗುತ್ತಿಲ್ಲ. ಈ ಕುರಿತು ಪ್ರತಿದಿನ ಅವರಿಗೆ ಫೋನ್ ಮಾಡುವುದೇ ಕೆಲಸವಾಗಿದೆ, ಹೊರತು ನೀರಿನ ಟ್ಯಾಂಕರ್​ಗಳು ಬರುತ್ತಿಲ್ಲ.”
| ಗಿರೀಶಗೌಡ ಪಾಟೀಲ, ಗುಂಡೂರ ನಿವಾಸಿ

Leave a Reply

Your email address will not be published. Required fields are marked *