ಜೀವಜಲಕ್ಕಾಗಿ ಜನರ ಪರದಾಟ

ಶಿವರಾಜ ಎಂ. ಬೆಂಗಳೂರು

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮುಕುಟದಂತಿರುವ ಜಿಲ್ಲಾಡಳಿತ ಭವನದಲ್ಲೇ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ರಾಜ್ಯ ರಾಜಧಾನಿಯಿಂದ ದೇವನಹಳ್ಳಿ ತಾಲೂಕಿನ ಚಪ್ಪರದಕಲ್ಲಿಗೆ ಜಿಲ್ಲಾಡಳಿತ ಸ್ಥಳಾಂತರಗೊಂಡು ಅರ್ಧ ವರ್ಷವೇ ಕಳೆದಿದೆ. ಆದರೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮರೀಚಿಕೆಯಾಗಿ ಉಳಿದಿದೆ.

ಎರಡಂತಸ್ತಿನ ಭವ್ಯ ಕಟ್ಟಡದಲ್ಲಿ ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿದೆ. ಪ್ರತಿದಿನ ವಿವಿಧ ಕೆಲಸ ಕಾರ್ಯಗಳಿಗಾಗಿ ನೂರಾರು ಸಾರ್ವಜನಿಕರು ಬಂದು ಹೋಗುತ್ತಾರೆ. ಆದರೆ ಬಾಯಾರಿದರೆ ಹನಿ ನೀರಿಗೆ ಪರದಾಡುವ ಸ್ಥಿತಿ ನಿರ್ವಣವಾಗಿದೆ.

ಶುದ್ಧ ಕುಡಿವ ನೀರಿನ ಘಟಕ ನಾಪತ್ತೆ: ಜಿಲ್ಲಾಡಳಿತ ಭವನಕ್ಕಾಗಿಯೇ ಪ್ರತ್ಯೇಕವಾಗಿ ಕೊಳವೆಬಾವಿ ಕೊರೆಸಿ ಸಾರ್ವಜನಿಕರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರು ದೊರಕಬೇಕೆಂಬ ಉದ್ದೇಶದಿಂದ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ದೊಡ್ಡದೊಂದು ಶುದ್ಧ ಕುಡಿಯುವ ನೀರಿನ ಘಟಕ ಮೇಂಟೆನೆನ್ಸ್ ಪ್ರೀ ಮ್ಯಾನ್ಯುಯಲ್ ಆಪರೇಟೆಬಲ್ ಹೆಸರಿನಲ್ಲಿ ಸ್ಥಾಪನೆಯಾಗಿತ್ತು.

ಘಟಕ ಸ್ಥಾಪನೆಯಾದ ಬಳಿಕ ಸುಮಾರು 2 ತಿಂಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರಿಂದ ಪ್ರಶಂಸೆಗೂ ಪಾತ್ರವಾಗಿತ್ತು. ಆದರೆ ಇದ್ದಕ್ಕಿದ್ದಂತೆ ಶುದ್ಧೀಕರಣ ಘಟಕವೇ ನಾಪತ್ತೆಯಾಗಿದೆ. ಘಟಕವಿದ್ದ ಸ್ಥಳ ಖಾಲಿಯಾಗಿದ್ದು, ಪ್ರತಿದಿನ ಕುಡಿಯುವ ನೀರು ಅರಸಿಕೊಂಡು ಅಲೆಯುವಂತಾಗಿದೆ ಎಂದು ಸಾರ್ವಜನಿಕರು ಅಲವತ್ತುಗೊಂಡಿದ್ದಾರೆ.

ದೂರದಿಂದ ನೀರು ತರುವ ಸ್ಥಿತಿ: ಸಾರ್ವಜನಿಕರೊಂದಿಗೆ ಇಲ್ಲಿನ ಸಿಬ್ಬಂದಿ ಕೂಡ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲಾಡಳಿತ ಭವನದಿಂದ ಸುಮಾರು 2 ಕಿಮೀ ದೂರದಿಂದ ಪಂಚಾಯಿತಿ ಅಳವಡಿಸಿರುವ ನೀರಿನ ಘಟಕಗಳಿಂದ ಹಣ ಪಾವತಿಸಿ ನೀರು ತರುತ್ತಿದ್ದಾರೆ. ವಿಶ್ವನಾಥಪುರ, ದುದ್ದನಹಳ್ಳಿ, ಕುಂದಾಣ, ಬೀರಸಂದ್ರ ಸೇರಿ ಸುತ್ತಮುತ್ತಲ ಪಂಚಾಯಿತಿ ವ್ಯಾಪ್ತಿಯಲ್ಲಿನ ನೀರಿನ ಘಟಕಗಳೇ ಆಧಾರ. ಇಲ್ಲಿನ ಡಿ ಗ್ರೂಪ್ ನೌಕರರು ದ್ವಿಚಕ್ರವಾಹಗಳಲ್ಲಿ ಕ್ಯಾನ್ ಹಿಡಿದು ನೀರಿಗೆ ಅಲೆದಾಡುವಂತಾಗಿದೆ. ಕೆಲವು ವೇಳೆ ಆಯಾ ಇಲಾಖೆ ವಾಹನಗಳನ್ನು ಬಳಸಿ ಶುದ್ಧ ನೀರು ತರಲಾಗುತ್ತಿದೆ. ಈ ನೀರು ಸಾರ್ವಜನಿಕರಿಗೆ ಲಭ್ಯವಿಲ್ಲ. ಅನಿವಾರ್ಯವಾಗಿ ಅಧಿಕಾರಿಗಳನ್ನು ಕಾಡಿಬೇಡಿ ನೀರು ಪಡೆಯಬೇಕಾದ ಪರಿಸ್ಥಿತಿ ನಿರ್ವಣವಾಗಿದೆ.

ವಾರಾಂತ್ಯದಲ್ಲಿ ಶೌಚಗೃಹಕ್ಕೂ ನೀರಿನ ಬರ: ಜಿಲ್ಲಾಡಳಿತ ಭವನಕ್ಕಾಗಿ ಕೊರೆದಿರುವ ಬೋರ್​ವೆಲ್​ನಲ್ಲಿ ನಿರೀಕ್ಷೆಯಷ್ಟು ನೀರು ಸಿಗುತ್ತಿಲ್ಲ. ಆದ್ದರಿಂದ ಶೌಚಗೃಹಗಳಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಿದ್ದರೂ, ಅದು ಸಮರ್ಪಕವಾಗಿಲ್ಲ ಎಂಬ ದೂರು ಕೇಳಿಬರುತ್ತಿದೆ. ಶುಕ್ರವಾರ, ಶನಿವಾರ ಬಂತೆಂದರೆ ಶೌಚಗೃಹಗಳಲ್ಲಿನ ನಳಗಳಲ್ಲಿ ನೀರು ಬರುವುದಿಲ್ಲ. ಊಟ ಮಾಡಿ ಕೈತೊಳೆದುಕೊಳ್ಳಬೇಕೆಂದರೂ ಶುದ್ಧ ನೀರನ್ನು ಬಳಸಬೇಕು ಎಂಬ ಸ್ಥಿತಿ ಇದೆ.

ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ ಎಂಬುದು ಗಮನಕ್ಕೆ ಬಂದಿದೆ. ಆರ್​ಡಿಪಿಆರ್​ನವರು ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿದ್ದರು. ಆದರೆ ಅದು ಹಾಳಾಗಿದೆ. ಮತ್ತೊಂದು ಘಟಕ ಅಳವಡಿಸಲು ವ್ಯವಸ್ಥೆ ಮಾಡಲಾಗುವುದು.

| ಸಿ.ಎಸ್.ಕರೀಗೌಡ, ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ

ಇದನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು. ಆದರೆ ಕೆಲವು ತಾಂತ್ರಿಕ ದೋಷದ ಕಾರಣದಿಂದ ತೆರವುಗೊಳಿಸಲಾಗಿದೆ. ಜಿಲ್ಲಾಡಳಿತ ಭವನಕ್ಕಾಗಿ ಪ್ರತ್ಯೇಕವಾಗಿ ಘಟಕ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಘಟಕ ಬರಲಿದೆ.

ಮನೋಜ್, ಎಇ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗ

ಯಾವಾಗ ನೀರು ನಿಂತುಹೋಗುತ್ತದೋ ಎಂಬ ಆತಂಕದಲ್ಲೇ ಶೌಚಗೃಹಕ್ಕೆ ಕಾಲಿಡಬೇಕು. ಒಮ್ಮೊಮ್ಮೆ ನಾಲ್ಕೈದು ತಾಸು ನೀರು ಬರುವುದೇ ಇಲ್ಲ. ಇದರಿಂದ ತುಂಬಾ ತೊಂದರೆ ಎದುರಿಸಬೇಕಾಗಿದೆ.

ಹೆಸರು ಹೇಳಲಿಚ್ಚಿಸದ ಸಿಬ್ಬಂದಿ

ಕುಡಿಯಲು ನೀರು ಬೇಕೆಂದರೆ ಅಂಗಡಿಗಳಿಂದ ಖರೀದಿ ಮಾಡಿ ತರಬೇಕು. ಇಲ್ಲಿನ ಸಿಬ್ಬಂದಿ ಕೇಳಿದರೆ ಕೊಡಲು ನಿರಾಕರಿಸುತ್ತಾರೆ. ಇಂಥ ದೊಡ್ಡ ಕಟ್ಟಡದಲ್ಲಿ ಕುಡಿವ ನೀರಿಗೆ ಪರದಾಡಬೇಕಾದ ಸ್ಥಿತಿ ಬಂದಿರುವುದು ಶೋಚನೀಯ.

| ರಾಮಪ್ಪ, ಕುಂದಾಣ ಗ್ರಾಮ