ಜೀವಜಲಕ್ಕಾಗಿ ಗ್ರಾಮಸ್ಥರ ಪರದಾಟ

ಹಾನಗಲ್ಲ: ತಾಲೂಕಿನ ಕುಂಟನಹೊಸಳ್ಳಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯಿಂದಾಗಿ ಕುಡಿಯುವ ನೀರಿನ ಪೈಪ್​ಗಳು ಒಡೆದು ತಿಂಗಳಾಗಿದ್ದರೂ ಅಧಿಕಾರಿಗಳು ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಗ್ರಾಮಸ್ಥರು ನೀರಿಗಾಗಿ ಹಪಹಪಿಸುತ್ತಿದ್ದಾರೆ.

ಸುರಳೇಶ್ವರ ಗ್ರಾಪಂ. ವ್ಯಾಪ್ತಿಗೆ ಸೇರಿದ ಈ ಗ್ರಾಮದಲ್ಲಿ 150 ಮನೆಗಳಿದ್ದು, ಅಂದಾಜು 1500 ಜನಸಂಖ್ಯೆಯಿದೆ. ಅರಳೇಶ್ವರದಿಂದ ಈ ಗ್ರಾಮದ ಮಾರ್ಗವಾಗಿ ಹಾನಗಲ್ಲಿಗೆ ರಸ್ತೆ ನಿರ್ಮಾಣ ಮಾಡಲು ಅಗಲೀಕರಣ ಕಾರ್ಯ ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ನಿರ್ಮಾಣ ಕಾಮಗಾರಿ ಇದೀಗ ವೇಗ ಪಡೆದುಕೊಂಡಿದೆ. ರಸ್ತೆ ನಿರ್ವಿುಸುವ ಭರದಲ್ಲಿ ಗ್ರಾಮದ ರಸ್ತೆಯ ಮಧ್ಯೆ ಗ್ರಾಪಂ ಅಳವಡಿಸಿದ ಕುಡಿಯುವ ನೀರಿನ ಪೈಪ್​ಗಳನ್ನು ಗುತ್ತಿಗೆದಾರರು ಒಡೆದುಹಾಕಿದ್ದಾರೆ. ಇದರಿಂದಾಗಿ ಇಡೀ ಗ್ರಾಮದ ಜನತೆ ನೀರಿಲ್ಲದೆ ಪರಿತಪಿಸುತ್ತಿದ್ದಾರೆ.

ಈ ಕುರಿತಂತೆ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಂರ್ಪಸಿ, ‘ನಿಮ್ಮ ಇಲಾಖೆ ಗುತ್ತಿಗೆದಾರರು ಪೈಪ್​ಲೈನ್ ಒಡೆದುಹಾಕಿದ್ದಾರೆ. ಅದನ್ನು ಸರಿಪಡಿಸಿಕೊಡಿ’ ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಪಿಡಬ್ಲ್ಯುಡಿ ಅಧಿಕಾರಿಗಳು ‘ನಮ್ಮ ಕಾಮಗಾರಿಯ ಲೆಕ್ಕದಲ್ಲಿ ಪೈಪ್ ಹಾಕಲು ಹಣ ತೆಗೆದಿರಿಸಿಲ್ಲ. ಸ್ಥಳೀಯ ಗ್ರಾಪಂ ಅನುದಾನದಲ್ಲಿ ಅಳವಡಿಸಿಕೊಳ್ಳಿ’ ಎಂದು ಉತ್ತರಿಸಿದ್ದಾರೆ.

ಸ್ಥಳೀಯ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ವಿಚಾರಿಸಿದರೆ, ‘ಪೈಪ್​ಲೈನ್ ಹಾಕಿಸಿಕೊಡುವುದು ವ್ಯವಸ್ಥೆ ಹಾಳುಮಾಡಿದ ಗುತ್ತಿಗೆದಾರರದೇ ಜವಾಬ್ದಾರಿ. ಇದಕ್ಕೆ ತಗಲುವ ಪೈಪ್​ಗಳನ್ನು ಮಾತ್ರ ಖರೀದಿಸಿ ನೀಡುತ್ತೇವೆ. ಅದನ್ನು ಅವರೇ ಹಾಕಿಸಿಕೊಡಲಿ’ ಎಂದು ಪಟ್ಟು ಹಿಡಿದಿದ್ದಾರೆ. ಈ ಹಗ್ಗ ಜಗ್ಗಾಟದಲ್ಲಿ ಒಂದು ತಿಂಗಳಿಂದ ಇಲ್ಲಿನ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಗ್ರಾಮಸ್ಥರು ಅನಿವಾರ್ಯವಾಗಿ ಪಕ್ಕದ ಜಮೀನುಗಳಿಗೆ ತೆರಳಿ ನೀರು ಹೊತ್ತು ತರುತ್ತಿದ್ದಾರೆ. ರಸ್ತೆ ಮಧ್ಯದಲ್ಲಿದ್ದ ನೀರಿನ ಪೈಪ್​ಗಳು ಒಡೆದಿರುವುದರಿಂದ ದೂರದ ಕೊಳವೆ ಬಾವಿಯಿಂದ ನೀರನ್ನೆತ್ತಲು ನಡೆಸಿದ ಪ್ರಯತ್ನದಿಂದ ನೀರೆಲ್ಲ ರಸ್ತೆ ಮಧ್ಯವೇ ಪೋಲಾಗುತ್ತಿದೆ.

ಗ್ರಾಮದ ಹೊರಭಾಗದಲ್ಲಿರುವ ನೀರಿನ ದೊಡ್ಡಕೆರೆ ಬೇಸಿಗೆ ಬರುವ ಮೊದಲೇ ಬರಿದಾಗಿದೆ. ಕೆರೆಯ ಪಕ್ಕದಲ್ಲಿರುವ ಕೊಳವೆ ಬಾವಿಯಿಂದ ನೀರು ತುಂಬಿಸುವಂತೆ ಗ್ರಾಪಂ ಸಿಬ್ಬಂದಿಗೆ ಮನವಿ ಮಾಡಿದ್ದರೂ ಕ್ಯಾರೆ ಎನ್ನುತ್ತಿಲ್ಲ. ನೀರಿನ ತೊಟ್ಟಿಗೆ ನೀರು ತುಂಬಿಸಲಾಗುತ್ತಿದ್ದರೂ ಕಳಪೆ ಗುಣಮಟ್ಟದ ಕಾಮಗಾರಿಯಿಂದಾಗಿ ನೀರಿನ ತೊಟ್ಟಿಯಲ್ಲಿ ನೀರು ನಿಲ್ಲದೆ ಸೋರಿಹೋಗುತ್ತಿದೆ. ರಸ್ತೆ ಗುತ್ತಿಗೆದಾರರೊಂದಿಗೆ ಪೈಪ್ ಅಳವಡಿಕೆಗೆ ಗ್ರಾಪಂ ಅಧ್ಯಕ್ಷರು-ಸದಸ್ಯರು, ಗ್ರಾಮಸ್ಥರು ರ್ಚಚಿಸಿದ್ದರೂ ಅವರು ಒಪ್ಪುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ರಸ್ತೆ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.

ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಹಲವು ಬಾರಿ ಲೋಕೋಪಯೋಗಿ ಇಂಜಿನಿಯರ್ ಜತೆ ಮಾತನಾಡಿ ಸಮಸ್ಯೆಯ ಗಂಭೀರತೆ ವಿವರಿಸಿದ್ದೇನೆ. ಆದರೆ, ಗ್ರಾಪಂ ವತಿಯಿಂದ ಕಾಮಗಾರಿ ಕೈಗೊಳ್ಳುವಂತೆ ಹೇಳುತ್ತಿದ್ದಾರೆ. ಗ್ರಾಪಂನಲ್ಲಿ ಇಷ್ಟು ದೊಡ್ಡ ಮೊತ್ತ ಇಲ್ಲದಿರುವುದರಿಂದ ಗುತ್ತಿಗೆದಾರರಿಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.

-ಬಸನಗೌಡ ಪಾಟೀಲ, ಗ್ರಾಪಂ ಸದಸ್ಯ.

ಬೇಸಿಗೆಯಾದ್ದರಿಂದ ಎಲ್ಲ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಕೆರೆ-ಕಟ್ಟೆಗಳಲ್ಲಿ ನೀರಿಲ್ಲ, ಸರಿಯಾಗಿದ್ದ ನೀರಿನ ವ್ಯವಸ್ಥೆಯನ್ನು ರಸ್ತೆ ಮಾಡುವವರು ಹಾಳುಗೆಡವಿದ್ದಾರೆ. ರೈತ ಸಮುದಾಯ ದನಕರುಗಳಿಗೆ ನೀರು ಕುಡಿಸಲು ಬೇರೆಯವರ ಹೊಲದಲ್ಲಿರುವ ಬೋರ್​ಗಳತ್ತ ಹುಡುಕಿಕೊಂಡು ಹೋಗಬೇಕಾಗಿದೆ.

-ಅಜ್ಜಪ್ಪ ಅರಳೇಶ್ವರ, ಗ್ರಾಮಸ್ಥ.