ಜಿಲ್ಲೇಲಿ 20 ಮಾದರಿ ಗ್ರಾಮ

ರಾಮನಗರ:ಜೋತು ಬಿದ್ದ ತಂತಿಗಳು, ಇನ್ನೇನು ಮುರಿದೇ ಹೋಗುವ ಕಂಬಗಳು, ರಾತ್ರಿಯಾದರೆ ಮಿಣುಕುವ ಬಲ್ಬ್​ಗಳು ಹೀಗೆ ಸಮಸ್ಯೆಗಳ ಮೂಲಕ ಜನರಿಂದ ಸದಾ ನಿಂದನೆಗೆ ಒಳಗಾಗುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಈಗ ಇವುಗಳಿಗೆ ಮುಕ್ತಿ ನೀಡಲು ದಿಟ್ಟ ಹೆಜ್ಜೆ ಇಟ್ಟಿದೆ.

ವಿದ್ಯುತ್ ಸರಬರಾಜು ವ್ಯತ್ಯಯ ಹೊರತುಪಡಿಸಿ ಬೇರೆ ಸಮಸ್ಯೆ ತಲೆದೋರದಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ 20 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಬೆಸ್ಕಾಂ ಯಶಸ್ವಿಯಾಗಿದೆ.

ಮಾದರಿ ಗ್ರಾಮಗಳು: ರಾಮನಗರ ಜಿಲ್ಲೆ ನಾಲ್ಕು ತಾಲೂಕುಗಳನ್ನು ಒಳಗೊಂಡಿದ್ದರೂ ಇವು ಬೆಸ್ಕಾಂ ಅಡಿಯ ಮೂರು ವಿಭಾಗಗಳಲ್ಲಿ ಹಂಚಿಹೋಗಿವೆ. ರಾಮನಗರ ಮತ್ತು ಚನ್ನಪಟ್ಟಣವನ್ನು ಒಳಗೊಂಡ ಒಂದು ವಿಭಾಗ, ಕನಕಪುರ ಪ್ರತ್ಯೇಕ ವಿಭಾಗ ಮತ್ತು ಮಾಗಡಿ ನೆಲಮಂಗಲ ವ್ಯಾಪ್ತಿಗೆ ಒಳಪಟ್ಟಿದೆ. ಈ ನಾಲ್ಕೂ ತಾಲೂಕುಗಳ ಒಟ್ಟು 20 ಗ್ರಾಮಗಳನ್ನು ಬೆಸ್ಕಾಂ ಮಾದರಿ ಗ್ರಾಮಗಳೆಂದು ಆಯ್ಕೆ ಮಾಡಿಕೊಂಡು, ಇವುಗಳಲ್ಲಿ ಯಾವುದೇ ಸಮಸ್ಯೆಗಳು ತಲೆದೋರದಂತೆ ಸಂಪೂರ್ಣ ಕೆಲಸ ನಿರ್ವಹಿಸಲಾಗುತ್ತಿದೆ. ಈ ಮೂಲಕ ಬೆಸ್ಕಾಂ ಜನಸ್ನೇಹಿಯಾಗುವತ್ತ ದಾಪುಗಾಲು ಹಾಕುತ್ತಿದೆ.

ಏನೆಲ್ಲ ಕಾಮಗಾರಿ?: ಈ ಮೊದಲು ತಂತಿಗಳು ಜೋತು ಬೀಳುವುದು, ವಿದ್ಯುತ್ ಕಂಬಗಳು ಮುರಿದು ಬೀಳುವುದು, ಲೋ ವೋಲ್ಟೇಜ್ ಸಮಸ್ಯೆಯಿಂದ ಎದುರಾಗುತ್ತಿದ್ದ ತೊಂದರೆಗಳಿಂದ ಬೆಸ್ಕಾಂ ಜನರ ಆಕ್ರೋಶಕ್ಕೆ ತುತ್ತಾಗಿತ್ತು. ಆದರೆ, ಆಯ್ಕೆ ಮಾಡಿಕೊಂಡಿರುವ 20 ಗ್ರಾಮಗಳಲ್ಲಿ ಹೊಸ ತಂತಿಗಳು, ವಿದ್ಯುತ್ ಕಂಬಗಳ ಅಳವಡಿಕೆ, ಹೆಚ್ಚುವರಿ ಕಂಬಗಳ ಅಗತ್ಯವಿದ್ದರೆ ಅವುಗಳನ್ನು ಪೂರೈಸಿ ತಂತಿ ಜೋತು ಬೀಳದಂತೆ ಮಾಡುವುದು ಹಾಗೂ ಲೋ ವೋಲ್ಟೇಜ್ ಇರುವ ಗ್ರಾಮಗಳಲ್ಲಿ ವಿದ್ಯುತ್ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಪರಿವರ್ತಕಗಳನ್ನು ಅಳವಡಿಸಿ ಮಾದರಿ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.

ಬೆಳಗುತ್ತಿವೆ ಎಲ್​ಇಡಿ:ಹೆಚ್ಚು ವಿದ್ಯುತ್ ಬಳಕೆ ಮಾಡಿಕೊಳ್ಳುವ ಮರ್ಕ್ಯುರಿ, ಇಲ್ಲವೇ ಸಾಮಾನ್ಯ ಬಲ್ಬ್​ಗಳನ್ನು ಬೀದಿ ದೀಪಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಮಾದರಿ ಗ್ರಾಮಗಳಲ್ಲಿ ಇವುಗಳಿಗೆ ಗೇಟ್ ಪಾಸ್ ನೀಡಲಾಗಿದ್ದು, ಈ ಬಲ್ಬ್​ಗಳ ಬದಲಿಗೆ ಎಲ್​ಇಡಿ ದೀಪಗಳನ್ನೇ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಮೂಲಕ ವಿದ್ಯುತ್ ಉಳಿತಾಯ ಆಗುವ ಜತೆಗೆ ಹೆಚ್ಚು ಬೆಳಕು ನೀಡುವ ದೀಪಗಳನ್ನುಬಳಕೆ ಮಾಡಿದಂತೆ ಆಗುತ್ತಿದೆ.

ನಗರಗಳಲ್ಲೂ ದೀಪ: ಬೆಸ್ಕಾಂ ಮಾದರಿ ಗ್ರಾಮಗಳನ್ನು ನಿರ್ಮಾಣ ಮಾಡಿರುವ ಬೆನ್ನಲ್ಲೇ ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದಲ್ಲಿರುವ 25 ಸಾವಿರ ಬೀದಿದೀಪಗಳಿಗೆ ಬದಲಾಗಿ ಎಲ್​ಇಡಿ ದೀಪಗಳನ್ನು ಬಳಸಲು ಜಿಲ್ಲಾ ನಗರಾಭಿವೃದ್ಧಿ ಕೋಶ ಮುಂದಾಗಿದೆ. ರಾಮನಗರ, ಚನ್ನಪಟ್ಟಣ ಮತ್ತು ಕನಕಪುರ ನಗರಸಭೆ ಹಾಗೂ ಬಿಡದಿ ಮತ್ತು ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ ಯೋಜನೆ ಜಾರಿ ಆಗಲಿವೆ. ವಿದ್ಯುತ್ ಮಿತ ಬಳಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಯಡಿ ಇದನ್ನು ಕೈಗೆತ್ತಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸರ್ವೆ ಕೈಗೊಳ್ಳಲು ಸಂಸ್ಥೆಗಳನ್ನು ಆಹ್ವಾನ ನೀಡಲಾಗಿದೆ.ಸ್ಥಳೀಯ ಮಟ್ಟದಲ್ಲಿ ವಿದ್ಯುತ್ ಸಂಬಂಧಿತ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ನಡೆಸಿ, ಎಲ್​ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ರಾಮನಗರ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 12 ಗ್ರಾಮಗಳನ್ನು ಮಾದರಿ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡುವ ಯೋಜನೆ ಇದೆ.

| ಶಿವಕುಮಾರ್ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮನಗರ ವಿಭಾಗ