ನಾಗಮಂಗಲ: ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿ ಸ್ಪರ್ಧಿಸದ ಕಾರಣ ಬಿಜೆಪಿಗೆ ಹೆಚ್ಚು ಮತಗಳು ಬರುತ್ತಿರಲಿಲ್ಲ. ಆದರೆ ಈ ಚುನಾವಣೆಯಲ್ಲಿ ಹಿಂದಿನ ಪರಿಸ್ಥಿತಿ ಇಲ್ಲವಾಗಿದ್ದು, ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯದವರೂ ಸಮರ್ಥ ಅಭ್ಯರ್ಥಿಯಾಗಿರುವ ಸುಧಾ ಶಿವರಾಮೇಗೌಡ ಅವರನ್ನು ಬೆಂಬಲಿಸಿ ಗೆಲ್ಲಿಸಲಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಬ್ರಹ್ಮದೇವರಹಳ್ಳಿ, ಚಿಣ್ಯ, ಹೊಣಕೆರೆ, ಮಣ್ಣಹಳ್ಳಿ ಮತ್ತು ಕರಡಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪತ್ನಿ ಹಾಗೂ ಬಿಜೆಪಿ ಅಭ್ಯರ್ಥಿ ಸುಧಾ ಶಿವರಾಮೇಗೌಡ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ತಾಲೂಕಿನಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದು ಕೆಲವರು ಮಾತನಾಡಿಕೊಳ್ಳುತ್ತಾರೆ. ಕ್ಷೇತ್ರದಲ್ಲಿ ನನ್ನದೇ ಆದ 40 ಸಾವಿರ ಸ್ವಾಭಿಮಾನದ ಮತಗಳಿವೆ. ಇದರೊಟ್ಟಿಗೆ ಕ್ಷೇತ್ರದಲ್ಲಿ 25 ಸಾವಿರ ಬಿಜೆಪಿ ಮತಗಳಿವೆ. ಕ್ಷೇತ್ರ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸುಧಾ ಶಿವರಾಮೇಗೌಡಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕಪಿಮುಷ್ಠಿಯಲ್ಲಿರುವ ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಕಮಲ ಅರಳಿಸಬೇಕೆಂದು ಸಂಕಲ್ಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರು ಈ ಭಾಗದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಈ ಬಾರಿ ಹಳೇ ಮೈಸೂರು ಭಾಗದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಅಭ್ಯರ್ಥಿ ಸುಧಾ ಶಿವರಾಮೇಗೌಡ ಮತಯಾಚಿಸಿದರು. ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ವಕೀಲ ಟಿ.ಕೆ.ರಾಮೇಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಸೋಮಶೇಖರ್, ಮುಖಂಡ ತೊಳಲಿ ಕೃಷ್ಣಮೂರ್ತಿ ಮಾತನಾಡಿದರು. ತಾ.ಪಂ.ಮಾಜಿ ಸದಸ್ಯ ಹೇಮರಾಜು, ಪುರಸಭೆ ಮಾಜಿ ಉಪಾಧ್ಯಕ್ಷೆ ಪುಷ್ಪರಾಮೇಗೌಡ, ಮುಖಂಡರಾದ ಕರಡಹಳ್ಳಿ ಅಜಯ್‌ಕುಮಾರ್, ದರ್ಶನ್, ಸುಜಯ್, ಕೃಷ್ಣಮೂರ್ತಿ, ಸೋಮು, ಮನುಕೆಂಚೇಗೌಡ ಮತ್ತಿತರಿದ್ದರು.