ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರ

ಗದಗ:ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಗುಡುಗು-ಮಿಂಚು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ಮಳೆ ರಭಸಕ್ಕೆ ಮುಂಡರಗಿ ತಾಲೂಕಿನ ಯಕ್ಲಾಸಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದಿದ್ದು, ಅಲ್ಲಲ್ಲಿ ವಿದ್ಯುತ್ ಕಂಬ, ಗಿಡ-ಮರಗಳು ಧರೆಗುರುಳಿವೆ.

ಬೆಳಗ್ಗೆಯಿಂದ ಬಿರುಬಿಸಿಲಿನಿಂದ ಕೂಡಿದ್ದ ವಾತಾವರಣ ಸಂಜೆಯಾಗುತ್ತಲೇ ಮೋಡ ಕವಿದು ಮಳೆ ಸುರಿಯಲಾರಂಭಿಸಿತು. ಮಳೆ ರಭಸಕ್ಕೆ ನಗರದ ಮಹಾತ್ಮಾ ಗಾಂಧಿ ವೃತ್ತ, ಝುಂಡಾ ವೃತ್ತ, ಬಳ್ಳಾರಿ ಬ್ರಿಜ್ ಹಾಗೂ ಗಂಗಿಮಡಿಯ ತಗ್ಗು ಪ್ರದೇಶದಲ್ಲಿ ನೀರು ನಿಂತಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ಪಟ್ಟಣದ ಟ್ಯಾಗೋರ್ ರಸ್ತೆಯ 2ನೇ ಕ್ರಾಸ್​ನಲ್ಲಿನ ಕೆಲ ಮನೆಗಳಿಗೆ ನೀರು ನುಗ್ಗಿದೆ. ಬೆಟಗೇರಿ ಹಾಗೂ ನರಸಾಪೂರ ಗ್ರಾಮದ ರಂಗಪ್ಪಜ್ಜನ ಮಠದ ಹತ್ತಿರ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಮುಂಡರಗಿ ತಾಲೂಕಿನಲ್ಲಿ ಸಂಜೆ ವೇಳೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಯಕ್ಲಾಸಪುರ ಗ್ರಾಮದ ಸಿದ್ಧಲಿಂಗಪ್ಪ ರೋಣದ ಎಂಬುವವರ ಮನೆಯ 8 ತಗಡುಗಳು ಹಾರಿ ಹೋಗಿದ್ದು, ಗೋಡೆ ಕುಸಿದಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಮುಂಡರಗಿ ಪಟ್ಟಣದ ಹಳೆ ವೆಂಕಟೇಶ ಚಿತ್ರಮಂದಿರದ ಮುಂಭಾಗದಲ್ಲಿನ ಬೇವಿನ ಮರ ಬಿದ್ದಿದ್ದು, ಮರದಡಿ ಟಾಟಾ ಏಸ್ ವಾಹನ ಸಿಲುಕಿದೆ. ವಿದ್ಯುತ್ ಕಂಬದ ತಂತಿಗಳು ತುಂಡಾಗಿವೆ. ಮುಂಜಾಗ್ರತೆ ಕ್ರಮವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಕಳೆದ ಎರಡು ತಿಂಗಳಿನಿಂದ ಬಿಸಿಲಿನ ಬೇಗೆಗೆ ತತ್ತರಿಸಿದ್ದ ಜನತೆ ಗುರುವಾರ ಸುರಿದ ಮಳೆಯಿಂದಾಗಿ ತಂಪಿನ ಅನುಭವ ಪಡೆದರು.

ಸಂಚರಿಸಲು ಸಾರ್ವಜನಿಕರ ಪರದಾಟ

ನರಗುಂದ ತಾಲೂಕಿನಲ್ಲಿ ಸಂಜೆ 6ರಿಂದ ಆರಂಭವಾದ ಆಲಿಕಲ್ಲು ಮಳೆಗೆ ಪಟ್ಟಣದ ವಿದ್ಯಾಗಿರಿ ಕಾಲನಿಯಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ನರೇಗಲ್ ಪಟ್ಟಣದಲ್ಲಿ ಅರ್ಧ ಗಂಟೆ ಮಳೆ ಸುರಿದರೆ, ಲಕ್ಷೆ್ಮೕಶ್ವರ ತಾಲೂಕಿನ ಆದ್ರಳ್ಳಿ, ಬಡ್ನಿ, ಅಡರಕಟ್ಟಿ ಗ್ರಾಮದಲ್ಲಿ ಕೆಲ ಕಾಲ ಬಿರುಗಾಳಿ ಸಹಿತ ಮಳೆಯಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಗುಂಡಿಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದು, ಸಾರ್ವಜನಿಕರು ಸಂಚಾರಕ್ಕಾಗಿ ಪರದಾಡಿದರು. ಅಲ್ಲದೆ, ಗಜೇಂದ್ರಗಡ ಪಟ್ಟಣ, ಗೋಗೇರಿ, ವೀರಾಪುರ ಗ್ರಾಮದಲ್ಲಿ ಗಿಡ-ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.

ಲಕ್ಷ್ಮೇಶ್ವರ:ಸಮೀಪದ ಚಿಕ್ಕಸವಣೂರ ಮತ್ತು ನೆಲೂಗಲ್ ಗ್ರಾಮಗಳ ಸುತ್ತಮುತ್ತ ಬುಧವಾರ ಸಂಜೆ ಬೀಸಿದ ಬಿರುಗಾಳಿಗೆ ಬಾಳೆ ಬೆಳೆ ನೆಲಕಚ್ಚಿದೆ. ಬೋರ್​ವೆಲ್​ಗಳ ಅಂತರ್ಜಲಮಟ್ಟ ಕುಸಿದು ಬಾಳೆ ಬೆಳೆ ಒಣಗುತ್ತಿತ್ತು. ಹರಸಾಹಸಪಟ್ಟು ಬೆಳೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ ಬಿರುಗಾಳಿ ಬೀಸಿ ಕೈಗೆ ಬಂದಿದ್ದ ಫಸಲು ಸಂಪೂರ್ಣ ನೆಲಕ್ಕುರುಳಿದೆ. ಸಾಕಷ್ಟು ಹಾನಿ ಅನುಭವಿಸುತ್ತಿದ್ದ ರೈತರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಗ್ರಾಮದ ನೀಲನಗೌಡ ಪಾಟೀಲ, ಮಲ್ಲನಗೌಡ ಪಾಟೀಲ ಸೇರಿ ಇನ್ನಿತರ ರೈತರ ಹತ್ತಾರು ಬೆಳೆಗಳು ಹಾನಿಗೀಡಾಗಿವೆ. ತೋಟದಲ್ಲಿನ ಶೆಡ್ಡುಗಳ ಮೇಲ್ಛಾವಣಿ, ಗ್ರೀನ್​ಹೌಸ್​ಗಳು ಹಾರಿಹೋಗಿವೆ. ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಗ್ರಾಮದಲ್ಲಿನ ಎರಡು ತಗಡಿನ ಶೆಡ್ಡುಗಳು ಕಿತ್ತು ಹೋಗಿವೆ.