*ಜಿಲ್ಲೆಯ ವಿವಿಧೆಡೆ ಅನಂತಕುಮಾರ್​ಗೆ ಶ್ರದ್ಧಾಂಜಲಿ

ಚಿಕ್ಕಬಳ್ಳಾಪುರ: ಕೇಂದ್ರ ಸಚಿವ ಎಚ್.ಎನ್.ಅನಂತಕುಮಾರ್ ನಿಧನ ಹಿನ್ನೆಲೆಯಲ್ಲಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಸೋಮವಾರ

ಶ್ರದ್ಧಾಂಜಲಿ ಸಲ್ಲಿಸಲಾಯಿತು.ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್ ಮಾತನಾಡಿ, ಕೇಂದ್ರ ಸಚಿವ ಅನಂತಕುಮಾರ್ ಪಕ್ಷವನ್ನು ಬೆಳೆಸಲು ಜೀವನವನ್ನೇ ಮೀಸಲಿಟ್ಟಿದ್ದರು. ಅವರ ನಿಧನದಿಂದ ದೇಶಕ್ಕೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಮುಖಂಡ ಎ.ವಿ.ಬೈರೇಗೌಡ ಮಾತನಾಡಿ, ಅನಂತಕುಮಾರ್ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿ ಪರ ಹೋರಾಟಗಳನ್ನು ನಡೆಸುತ್ತ ಬೆಳೆದವರು. ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಪಕ್ಷವನ್ನು ಕಟ್ಟಿದ್ದರು. ಕೇಂದ್ರದಲ್ಲಿ ರಸಗೊಬ್ಬರ ಖಾತೆ ಸಚಿವರಾದ ಬಳಿಕ ದೇಶದಲ್ಲಿ ರಸಗೊಬ್ಬರ ಕೊರತೆ ಉಂಟಾಗದಂತೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರು ಎಂದರು.ಬಿಜೆಪಿಗೆ ರಾಜ್ಯದಲ್ಲಿ ನೆಲೆ ಇಲ್ಲದ ಸಂದರ್ಭದಲ್ಲಿ ಪಕ್ಷವನ್ನು ಬೆಳೆಸುವಲ್ಲಿ ಅನಂತಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮುಖಂಡ ಶ್ರೀಕಾಂತ್ ಭಟ್ ಹೇಳಿದರು. ಅನಂತಕುಮಾರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಲಾಯಿತು.

ಎಪಿಎಂಸಿ ನಿರ್ದೇಶಕ ಕೆ.ಎಸ್.ಕೃಷ್ಣಾರೆಡ್ಡಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಮಣ್ಣ, ಉಪಾಧ್ಯಕ್ಷ ನಂದಿ ದೇವರಾಜ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ನರಸಪ್ಪ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಎನ್.ಮುನಿರಾಜು, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಬಿ.ಕಿರಣ್ ಮತ್ತಿತರರಿದ್ದರು.